ದಾವಣಗೆರೆ: ರಾಜ್ಯದಲ್ಲಿ ಕೋವಿಡ್ ಸೋಂಕು ಹರಡುವ ಸಾಧ್ಯತೆ ಹೆಚ್ಚಿದ್ದು, ಎಲ್ಲಾ ಅಧಿಕಾರಿಗಳು ಜಾಗರೂಕತೆಯಿಂದ ಕೆಲಸ ನಿರ್ವಹಿಸಿದರೆ ಮುಂದಿನ ದಿನಗಳಲ್ಲಿ ಅಪಾಯದಿಂದ ತಪ್ಪಿಸಿಕೊಳ್ಳಬಹುದು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್ ತಿಳಿಸಿದ್ದಾರೆ. ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಯೋಜಿಸಲಾಗಿದ್ದ ಕೋವಿಡ್ -19 ಪರಿಶೀಲನಾ ಸಭೆಯ ಅಧ್ಯಕ್ಷ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೋವಿಡ್ -19 ಕೇಸ್‌ಗಳು ಕಡಿಮೆಯಾಗುವಂತೆ ನೋಡಿಕೊಳ್ಳಬೇಕು. ಕಂಟೇನ್ಮೆಂಟ್ ಝೋನ್, ಬಫರ್ ಝೋನ್‌ಗಳ ಎಲ್ಲರಿಗೂ ರೋಗ ಲಕ್ಷಣಗಳನ್ನು ಪತ್ತೆ ಮಾಡಿ ಟೆಸ್ಟ್‌ಗೆ ಒಳಪಡಿಸಬೇಕು. ಪ್ರತಿ ಮನೆಯಲ್ಲಿ ಕೋವಿಡ್ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಸೂಚಿಸಿದರು.
ವೈದ್ಯರು ಮತ್ತು ನರ್ಸ್ ಸೇರಿದಂತೆ ಆರೋಗ್ಯ ಇಲಾಖೆ ಸಿಬ್ಬಂದಿ ಜಾಹೀರಾತುಗಳ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು. ಕಂಟೇನ್ಮೆಂಟ್ ಝೋನ್‌ಗಳಲ್ಲಿ ಸಮುದಾಯಕ್ಕೆ ಹರಡುವಂತಹ ಸಾಧ್ಯತೆಗಳು ಹೆಚ್ಚಿದ್ದು, ಅದನ್ನು ತಡೆಯುವಲ್ಲಿ ಹೆಚ್ಚಿನ ಗಮಸಹರಿಸಬೇಕು. ಬಫರ್ ಝೋನ್‌ಗಳಲ್ಲಿ ಪ್ರತಿದಿನ ಟೆಸ್ಟಿಂಗ್ ನಡೆಸಬೇಕು ಎಂದರು. ಜಿಲ್ಲೆಯ ಸೋಂಕಿತರಲ್ಲಿ ವೃದ್ದರು ಹೆಚ್ಚಿರುವುದು ಸಾವಿನ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ. ಈವರೆಗೆ ದಾಖಲಾದ 227 ಕೇಸ್ ಗಳಲ್ಲಿ 60ಕ್ಕಿಂತ ಮೇಲ್ಪಟ್ಟ ವಯಸ್ಸಿನವರ ಸಂಖ್ಯೆ ಹೆಚ್ಚಾಗಿದೆ. ರೋಗಲಕ್ಷಣಗಳು ಇರುವ ಹಾಗೂ ಇಲ್ಲದಿರುವ ಸೋಂಕಿತರ ಸಂಖ್ಯೆಗಳು ಸಹ ಹೆಚ್ಚಾಗಿ
ದಾಖಲಾಗಿವೆ ಎಂದರು.
ಕೋವಿಡ್ ಸೋಂಕಿನ ಲಕ್ಷಣಗಳಿರುವರನ್ನು ಚೆನ್ನಾಗಿ ಆರೈಕೆ ಮಾಡಿ ಹಾಗೂ ಸರಿಯಾಗಿ ಉಪಚರಿಸಿ. ಜಾಲಿನಗರದಲ್ಲಿ ಸೋಂಕು ಪತ್ತೆಯಾಗಿರುವುದರ ಪ್ರಾಥಮಿಕ ಹಾಗೂ ಮೂಲ ಸಂಪರ್ಕ ಪತ್ತೆ ಹಚ್ಚಿ ಎಂದು ಸೂಚಿಸಿದ ಅವರು, ಗ್ರಾಮೀಣ ಪ್ರದೇಶಗಳಲ್ಲಿ ಸೋಂಕು ಹರಡದಂತೆ ಹೆಚ್ಚಿನ ಜಾಗ್ರತೆ ವಹಿಸಿ ಹಾಗೂ ತುಂಬಾ ಕಷ್ಟಪಟ್ಟು ಕೆಲಸ ನಿರ್ವಹಿಸುವದಕ್ಕಿಂತ ಸ್ಮಾರ್ಟ್ ವರ್ಕ್ ಮಾಡಿ ಎಂದು ಸಲಹೆ ನೀಡಿದರು. ಜಾಲಿನಗರದ ಒಟ್ಟು 127 ರಲ್ಲಿ 97 ರೋಗಿಗಳು ಗುಣಮುಖರಾಗಿದ್ದು, ಇನ್ನು 9 ಕೇಸ್‌ಗಳು ಮಾತ್ರ ಬಾಕಿ ಉಳಿದಿವೆ. ಜಿಲ್ಲೆಯಲ್ಲಿ ಕೋವಿಡ್-19 ಲ್ಯಾಬ್ ಉದ್ಘಾಟನೆಯಾಗಿದೆ. ಈವರೆಗೆ 12.116 ಮಂದಿಯನ್ನು ಟೆಸ್ಟ್‌ಗೆ ಒಳಪಡಿಸಿದ್ದೇವೆ. ತಲೆನೋವು, ಜ್ವರ ಮತ್ತು ಕೆಮ್ಮಿನ ಲಕ್ಷಣಗಳಿರುವ ಒಟ್ಟು 6 ಸಾವಿರ ಮಂದಿಯನ್ನು ಟೆಸ್ಟ್‌ಗೆ ಒಳಪಡಿಸಿದ್ದೇವೆ. ಒಟ್ಟು ಈಗ 26 ಸಕ್ರಿಯ ಕೇಸ್‌ಗಳು ಇವೆ. ಅದರಲ್ಲಿ 90 ವರ್ಷದ ವೃದ್ಧೆಯೊಬ್ಬರಿಗೆ ಸೋಂಕು ತಗುಲಿದ್ದು, ಎಚ್ಚರಿಕೆಯಿಂದ ನೋಡಿಕೊಳ್ಳಲಾಗುತ್ತದೆ ಎಂದು
ಡಾ| ಜಿ.ಡಿ. ರಾಘವನ್ ತಿಳಿಸಿದರು.
ಭಾನುವಾರ ಬಸವರಾಜಪೇಟೆ ವ್ಯಕ್ತಿಗೆ ಕೋವಿಡ್ ಸೋಂಕು ಕಂಡು ಬಂದಿದ್ದು, ಕುಟುಂಬದ 16 ಮಂದಿ ಕ್ವಾರಂಟೈನ್‌ಗೆ ಒಳಪಡಿಸಿದ್ದು, ಯಾರಿಗೂ ಸಹ ಸೋಂಕು ಕಂಡು ಬಂದಿಲ್ಲ. ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವಂತಹ ಮಕ್ಕಳು ಕ್ವಾರಂಟೈನ್‌ನಲ್ಲಿದ್ದರೆ ಅಥವಾ ಕೋವಿಡ್ ಪಾಸಿಟಿವ್ ಎಂದು ದಾಖಲಾಗಿದ್ದರೆ ಹಾಗೂ ಹೊರ ರಾಜ್ಯದಿಂದ ನಮ್ಮ ರಾಜ್ಯಕ್ಕೆ ಬಂದಿರುವ ಮಕ್ಕಳಿಗೆ ಮುಂದಿನ ಪರೀಕ್ಷೆಯಲ್ಲಿ ಹೊಸ ವಿದ್ಯಾರ್ಥಿಯೆಂದು ಪರಿಗಣಿಸಿ ಪರೀಕ್ಷೆ
ಬರೆಯಲು ಅವಕಾಶವಿರುತ್ತದೆ. ಮೊದಲ ಪ್ರಯತ್ನ ಎಂದು ಪರಿಗಣಿಸಲಾಗುತ್ತದೆ ಎಂದರು. ಪರೀಕ್ಷೆ ಕೇಂದ್ರಗಳನ್ನು ಸ್ಯಾನಿಟೈಸ್‌ಮಾಡಬೇಕು ಹಾಗೂ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಪರೀಕ್ಷೆಗಳು ಸುಗಮವಾಗಿ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಸಂಬಂಧಪಟ್ಟ ಇಲಾಖೆಯ ಅ ಧಿಕಾರಿಗಳಿಗೆ
ಸೂಚಿಸಿದ ಉಸ್ತುವಾರಿ ಕಾರ್ಯದರ್ಶಿ, ಎರಡೂವರೆ ತಿಂಗಳಿನ ಮಗು ಹಾಗೂ ತಾಯಿ ಗುಣಮುಖರಾಗಿರುವುದು ಖುಷಿಯ ವಿಚಾರ ಎಂದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ| ಎಂ.ಎಸ್. ರಾಘವೇಂದ್ರಸ್ವಾಮಿ ಮಾತನಾಡಿ, ಐಎಲ್‌ಐ ಲಕ್ಷಣಗಳಿರುವಂತವರು, ಪ್ರಾಥಮಿಕ ಸಂರ್ಪಕ ಹೊಂದಿರುವವರು, ಕಂಟೇನ್ಮೆಂಟ್ ಹಾಗೂ ಬಫರ್ ಝೋನ್‌ಗಳಲ್ಲಿರುವವರು ಹಾಗೂ ಆಶಾ ಕಾರ್ಯಕರ್ತೆಯರು ಹಾಗೂ ಪೊಲೀಸ್ ಸಿಬ್ಬಂದಿ, ಶೀತ ಕೆಮ್ಮು ಲಕ್ಷಣಗಳಿರುವವರು, ಕಂಟೈನ್ ಮೆಂಟ್ ವಲಯದಲ್ಲಿನ 60 ಕ್ಕಿಂತ ಮೇಲ್ಪಟ್ಟವರು, ಗರ್ಭಿಣಿಯರು, ಬಾಣಂತಿಯರಿಗೆ 15 ದಿನಗಳ ನಂತರ ಕೋವಿಡ್ ಪರೀಕ್ಷೆ ಮಾಡಬೇಕು ಎಂದು
ತಿಳಿಸಿದರು.
ಡಿಸಿ ಮಹಾಂತೇಶ್ ಬೀಳಗಿ, ಜಿಪಂ ಸಿಇಒ ಪದ್ಮಾ ಬಸವಂತಪ್ಪ, ಉಪವಿಭಾಗಾಧಿಕಾರಿ ಡಾ| ಮಮತಾ ಹೊಸಗೌಡರ್, ದೂಡಾ ಆಯುಕ್ತ ಬಿ.ಟಿ. ಕುಮಾರಸ್ವಾಮಿ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕಿ ಜಿ. ನಜ್ಮಾ ಇದ್ದರು.