Advertisement

ಆನೆಕಾಲು ರೋಗಮುಕ್ತಕ್ಕೆ ತಪ್ಪದೇ ಮಾತ್ರೆ ಸೇವಿಸಿ

04:02 PM Sep 08, 2018 | |

ಯಾದಗಿರಿ: ಆನೆಕಾಲು ರೋಗಮುಕ್ತ ಸಮಾಜಕ್ಕಾಗಿ ಜಿಲ್ಲೆಯಾದ್ಯಂತ ಸೆ. 24ರಿಂದ ಅಕ್ಟೋಬರ್‌ 6ರ ವರೆಗೆ ಸಾಮೂಹಿಕ ಡಿಇಸಿ ಮತ್ತು ಅಲ್ಬೆಂಡಜೋಲ್‌ ಮಾತ್ರೆ ನುಂಗಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ| ಸೂರ್ಯಪ್ರಕಾಶ ಎಂ. ಕಂದಕೂರ ತಿಳಿಸಿದರು.

Advertisement

ನಗರದ ಹೊಸಳ್ಳಿ ಕ್ರಾಸ್‌ನಲ್ಲಿರುವ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಎರಡು ವರ್ಷದೊಳಗಿನ ಮಕ್ಕಳು, ಗರ್ಭಿಣಿಯರು ಹಾಗೂ
ವೃದ್ಧಾಪ್ಯದಿಂದಿರುವವರು, ಹೃದಯ, ಶ್ವಾಸಕೋಶ, ಮೂತ್ರಪಿಂಡ ಸಂಬಂಧಿ ದೀರ್ಘಾವಧಿ ಕಾಯಿಲೆಗಳಿಂದ
ನರಳುತ್ತಿರುವವರು ಈ ಮಾತ್ರೆ ಸೇವಿಸು ವಂತಿಲ್ಲ. ಖಾಲಿ ಹೊಟ್ಟೆಯಲ್ಲಿ ಮಾತ್ರೆ ತೆಗೆದುಕೊಳ್ಳಬಾರದು. ಆರೋಗ್ಯದಿಂದಿರುವ ಹಾಗೂ ಬಿಪಿ, ಸಕ್ಕರೆ ಕಾಯಿಲೆ ಇರುವ ರೋಗಿಗಳು ಸಹ ಮಾತ್ರೆ ಸೇವಿಸಬಹುದು. ಡಿಇಸಿ ಮತ್ತು ಅಲ್ಬೆಂಡಜೋಲ್‌ ಗುಳಿಗೆಗಳು ಅತ್ಯಂತ ಸುರಕ್ಷಿತವಾದ ಔಷಧಿಗಳಾಗಿದ್ದು, ಕಳೆದ 50 ವರ್ಷಗಳಿಂದ ವಿಶ್ವ ದಾದ್ಯಂತ
ಉಪಯೋಗಿಸಲ್ಪಡುತ್ತಿವೆ.

ಸೋಂಕು ಹೊಂದಿದ್ದು, ಆರೋಗ್ಯವಂತರಾಗಿ ಕಾಣುವ ವ್ಯಕ್ತಿಗಳು ಈ ಮಾತ್ರೆಗಳನ್ನು ಸೇವಿಸಿದಾಗ ಮಾತ್ರ ಅವರ ರಕ್ತದಲ್ಲಿರುವ ಜಂತುಗಳು ನಾಶ ಹೊಂದುವುದರಿಂದ ಕೆಲವೊಮ್ಮೆ ಜ್ವರ, ತಲೆನೋವು, ಮೈ-ಕೈ ನೋವು, ವಾಂತಿ, ತಲೆ ಸುತ್ತುವಿಕೆ ಕಂಡು ಬರುತ್ತವೆ. ಇವು ತಾತ್ಕಾಲಿಕವಾಗಿದ್ದು, ಒಂದು ದಿನದಲ್ಲಿ ಯಾವುದೇ ಚಿಕಿತ್ಸೆಯಿಲ್ಲದೆ ಉಪಶಮನವಾಗುತ್ತವೆ ಎಂದು ವಿವರಿಸಿದರು. 

5ರಿಂದ 6 ವರ್ಷಗಳ ಕಾಲ ಪ್ರತಿಯೊಬ್ಬರೂ ಈ ಮಾತ್ರೆಗಳನ್ನು ಸೇವಿಸಿದಲ್ಲಿ ಮುಂದಿನ ಪೀಳಿಗೆಯವರು ಆನೆಕಾಲು ರೋಗದಿಂದ ಮುಕ್ತವಾಗುತ್ತಾರೆ. ಸಣ್ಣ-ಪುಟ್ಟ ತೊಂದರೆಗಳಿಗೆ ಹೆದರಿ ಈ ಮಾತ್ರೆ ಸೇವಿಸದಿದ್ದಲ್ಲಿ ಆನೆಕಾಲು
ರೋಗ ನಿಯಂತ್ರಣ ಅಸಾಧ್ಯ ಎಂದು ತಿಳಿಸಿದರು.

ಯಾದಗಿರಿ, ಬೀದರ್‌, ಕಲಬುರಗಿ ಜಿಲ್ಲೆಗಳಲ್ಲಿ ಆನೆಕಾಲು ರೋಗ ಹೆಚ್ಚು ಇದೆ. ಆನೆಕಾಲು ರೋಗಿಗಳಿಗೆ ಕಚ್ಚಿದ ಸೊಳ್ಳೆ
ಬೇರೆಯವರಿಗೆ ಕಚ್ಚಿದರೆ ರೋಗ ಬರುವುದಿಲ್ಲ ಎಂದು ತಿಳಿಸಿದರು. 

Advertisement

ಇಲಾಖೆಯಿಂದ ಪ್ರತಿ ವರ್ಷಕ್ಕೊಮ್ಮೆ ಆಯ್ದ 8 ಗ್ರಾಮಗಳಲ್ಲಿ ಆರೋಗ್ಯವಂತ ಮೈಕ್ರೋಫೈಲೇರಿಯಾ ಪಾಸಿಟಿವ್‌ ವ್ಯಕ್ತಿಗಳನ್ನು ಕಂಡು ಹಿಡಿಯಲು ರಕ್ತದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆ ನಡೆಸಲಾಗುತ್ತಿದೆ. ಈಗಾಗಲೇ 4,214 ರಕ್ತದ ಮಾದರಿಗಳನ್ನು ಸಂಗ್ರಹಿಸಿ, 1,846 ರಕ್ತದ ಮಾದರಿಗಳ ಪರೀಕ್ಷೆ ನಡೆಸಲಾಗಿದೆ. 26 ಜನರಲ್ಲಿ ಈ ರೋಗದ ಲಕ್ಷಣ ಕಂಡು ಬಂದಿದೆ. 

ಶಹಾಪುರ ತಾಲೂಕಿನ ಹುರಸಗುಂಡಗಿಯಲ್ಲಿ ಸಂಗ್ರಹಿಸಿದ 583 ರಕ್ತದ ಮಾದರಿಗಳಲ್ಲಿ 400 ಪರೀಕ್ಷೆ ನಡೆಸಲಾಗಿದೆ. ಇದೊಂದೆ ಗ್ರಾಮದ 17 ಜನರಲ್ಲಿ ಪಾಸಿಟಿವ್‌ ಕಂಡು ಬಂದಿದೆ ಎಂದು ತಿಳಿಸಿದರು. 

ಕೀಟಶಾಸ್ತ್ರಜ್ಞ ಗಂಗೋತ್ರಿ ಐ.ಸಿ ಮಾತನಾಡಿ, ಆನೆಕಾಲು ರೋಗ ತಡೆಯುವ ಕುರಿತು ಜಾಗೃತಿ ಹಾಗೂ ಸಾರ್ವಜನಿಕರು ಮಾತ್ರೆಗಳನ್ನು ಸೇವಿಸಲು ತಿಳುವಳಿಕೆ ಮೂಡಿಸಲು ಆರೋಗ್ಯ ಇಲಾಖೆಯೊಂದಿಗೆ ನಗರಸಭೆ, ಪುರಸಭೆ, ಗ್ರಾಮ ಪಂಚಾಯಿತಿ ಹಾಗೂ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಕ್ರೀಡಾ ಇಲಾಖೆ, ಗಣಿ ಮತ್ತು ಭೂವಿಜ್ಞಾನ ಇಲಾಖೆಗಳ ಸಹಕಾರ ಮುಖ್ಯವಾಗಿದೆ ಎಂದು ಹೇಳಿದರು.

ಕೇಂದ್ರ ಮಲೇರಿಯಾ ಲ್ಯಾಬ್‌ನ ಹಿರಿಯ ಪ್ರಯೋಗ ಶಾಲಾ ತಜ್ಞರಾದ ಸುಜಾತಾ, ಹಿರಿಯ ಆರೋಗ್ಯ ಸಹಾಯಕ
ಪರಮರೆಡ್ಡಿ ಕಂದಕೂರ, ಶರಣಯ್ಯ ಸ್ವಾಮಿ, ಸಮಾಲೋಚಕ ಬಸವರಾಜ ಕಾಂತಾ ಉಪಸ್ಥಿತರಿದ್ದರು.
 
ಯಾದಗಿರಿ, ಸುರಪುರ, ಶಹಾಪುರ ತಾಲೂಕುಗಳ ಒಟ್ಟು 12,45,250 ಜನರಿಗೆ ಔಷಧ ನುಂಗಿಸುವ ಗುರಿ
ಹೊಂದಲಾಗಿದೆ. ಇದಕ್ಕಾಗಿ ಆರೋಗ್ಯ ಇಲಾಖೆಯ ಸಿಬ್ಬಂದಿ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಒಟ್ಟು 2,440 ಜನರನ್ನು ನಿಯೋಜಿಸಲಾಗಿದೆ. ಪ್ರತಿದಿನ ಸಿಬ್ಬಂದಿಗಳು ಬೆಳಗ್ಗೆ 8:00 ಗಂಟೆಯಿಂದ ಸಂಜೆ 5ರ ವರೆಗೆ ಮತ್ತು ಸಂಜೆ 6 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ಮನೆ ಮನೆಗೆ ಭೇಟಿ ನೀಡಿ ಮಾತ್ರೆ ನುಂಗಿಸುವರು. ಮೇಲ್ವಿಚಾರಣೆಗೆ 245 ಜನ ಅಧಿಕಾರಿಗಳನ್ನು ನೇಮಿಸಲಾಗಿದೆ.  ಡಾ| ಸೂರ್ಯಪ್ರಕಾಶ ಎಂ. ಕಂದಕೂರ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next