Advertisement

ವಿದ್ಯುತ್‌ ಸಂಪರ್ಕಕ್ಕೆ ಒ.ಸಿ. ಪತ್ರ ಕಡ್ಡಾಯ ಅಲ್ಲ

09:51 PM Jun 09, 2022 | Team Udayavani |

ಬೆಂಗಳೂರು: ರಾಜ್ಯದಲ್ಲಿ ಇನ್ನು ಬಹುಮಹಡಿ ಕಟ್ಟಡಗಳು, ಅಪಾರ್ಟ್‌ಮೆಂಟ್‌-ಮನೆಗಳ ಸಹಹಿತ ವಾಣಿಜ್ಯ ಅಥವಾ ವಾಸ ಉದ್ದೇಶಿತ ಕಟ್ಟಡಗಳಿಗೆ ವಿದ್ಯುತ್‌ ಸಂಪರ್ಕ ಪಡೆದುಕೊಳ್ಳುವುದಕ್ಕೆ ಸ್ವಾಧೀನಾನುಭವ ಪತ್ರ (ಒ.ಸಿ.) ಕಡ್ಡಾಯವಾಗಿ ಸಲ್ಲಿಸಬೇಕಾಗಿಲ್ಲ.

Advertisement

ಪ್ರಸ್ತುತ ಎಲ್ಲ ಎಸ್ಕಾಂ ವ್ಯಾಪ್ತಿಯಲ್ಲಿ ಹೊಸ ವಿದ್ಯುತ್‌ ಸಂಪರ್ಕ ಪಡೆಯಬೇಕಾದರೆ ಸ್ವಾಧೀನಾನುಭವ ಪತ್ರ ಸಲ್ಲಿಸುವುದು ಕಡ್ಡಾಯ. ಈ ನಿಯಮದಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ. ಈಗ ಈ ನಿಯಮವನ್ನು ರದ್ದುಪಡಿಸಲು ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗ ನಿರ್ಧರಿಸಿದೆ.

ಈ ನಿಯಮವನ್ನು ಬದಲಿಸುವಂತೆ ಕೈಗಾರಿಕಾ ವಲಯ, ರಿಯಲ್‌ ಎಸ್ಟೇಟ್‌ ಉದ್ಯಮದವರು ಸರಕಾರಕ್ಕೆ ಹಲವು ವರ್ಷಗಳಿಂದ ಬೇಡಿಕೆ ಸಲ್ಲಿಸುತ್ತಿದ್ದರು. ಕೈಗಾರಿಕಾ ಇಲಾಖೆ ಕೂಡ ಈ ನಿಯಮಕ್ಕೆ ತಿದ್ದುಪಡಿ ತರುವಂತೆ ಕೋರಿ ಇಂಧನ ಇಲಾಖೆಗೆ ಕಳೆದ ವರ್ಷ ಮನವಿ ಮಾಡಿತ್ತು. ಆ ಮನವಿ ಆಧರಿಸಿ ಇಂಧನ ಇಲಾಖೆಯು ಕಳೆದ ಮಾರ್ಚ್‌ನಲ್ಲಿ ನಿಯಮಕ್ಕೆ ತಿದ್ದುಪಡಿ ತರುವಂತೆ ಆಯೋಗಕ್ಕೆ ಕೋರಿಕೆ ಸಲ್ಲಿಸಿತ್ತು. ಎಸ್ಕಾಂಗಳ ಮನವಿ ಆಲಿಸಿದ ಆಯೋಗವು ವಿದ್ಯುತ್‌ ಸಂಪರ್ಕಕ್ಕೆ ಸ್ವಾಧೀನಾನುಭವ ಪತ್ರ ಕಡ್ಡಾಯ ಎನ್ನುವ ನಿಯಮ ತೆಗೆದು ಹಾಕಿ, ಕಟ್ಟಡ ಮಾಲಕತ್ವಕ್ಕೆ ಸಂಬಂಧಿಸಿದ ದಾಖಲಾತಿ ಮಾತ್ರ ಸಲ್ಲಿಸಿದರೆ ಸಾಕು ಎನ್ನುವ ತಿದ್ದುಪಡಿ ಮಾಡಿ ಸಾರ್ವಜನಿಕರಿಂದ ಅಹವಾಲು ಸಲ್ಲಿಸಲು ಮೇ 30ರ ವರೆಗೆ ಅವಕಾಶ ನೀಡಿತ್ತು. ಈ ತಿದ್ದುಪಡಿ ಕುರಿತು ಆಯೋಗ ವಿಚಾರಣೆ ನಡೆಸಿ ಶೀಘ್ರ ಅಂತಿಮ ಆದೇಶ ಹೊರಡಿಸಲಿದೆ.

ಸ್ವಾಧೀನಾನುಭ ಪತ್ರ ಕಡ್ಡಾಯ ನಿಯಮ ರದ್ದುಗೊಳಿಸಿದರೆ, ಕೈಗಾರಿಕೆಗಳಿಗೆ ಮಾತ್ರವಲ್ಲದೆ ಎಲ್ಲ ವಿದ್ಯುತ್‌ ಗ್ರಾಹಕರಿಗೂ ಸಾಕಷ್ಟು ಅನುಕೂಲವಾಗಲಿದೆ. ಸದ್ಯ ಹಾಲಿ ಕಟ್ಟಡದಲ್ಲಿ ಏನೇ ಸಣ್ಣಪುಟ್ಟ ಬದಲಾವಣೆ ಮಾಡಿದರೂ ಮತ್ತೆ ಹೊಸ ಸ್ವಾಧೀನಾನುಭವ ಪತ್ರ ನೀಡಬೇಕಾದ ಸ್ಥಿತಿಯಿದೆ. ಆಯೋಗದ ಹೊಸ ತಿದ್ದುಪಡಿಯು ಕೈಗಾರಿಕೆಗಳ ಪಾಲಿಗೆ ದೊಡ್ಡ ಅನುಕೂಲವಾಗಲಿದೆ ಎಂದು ಸಣ್ಣ ಕೈಗಾರಿಕೆಗಳ ಸಂಘ ಕಾಸಿಯಾದ ಶ್ರೀನಾಥ್‌ ಭಂಡಾರಿ ಹೇಳಿದ್ದಾರೆ. ತಿದ್ದುಪಡಿಯಿಂದ ರಿಯಲ್‌ ಎಸ್ಟೇಟ್‌ ಉದ್ಯಮಕ್ಕೆ ದೊಡ್ಡ ಪ್ರಯೋಜನವಾಗಲಿದೆ ಎನ್ನುತ್ತಾರೆ ಕ್ರೆಡೈನ ಮಾಜಿ ಅಧ್ಯಕ್ಷ ಡಿ.ಬಿ. ಮೆಹ್ತಾ.

ಶೀಘ್ರ ಹೊಸ ನಿಯಮ ಶೀಘ್ರ ಜಾರಿ :

Advertisement

ರಾಜ್ಯದಲ್ಲಿ ವಿದ್ಯುತ್‌ ಸಂಪರ್ಕ ಸಂಬಂಧ ಗ್ರಾಹಕರು ಸ್ವಾಧೀನಾನುಭವ ಪತ್ರ ಸಲ್ಲಿಸುವುದು ಕಡ್ಡಾಯವಾಗಿರುವ ನಿಯಮವನ್ನು ರದ್ದುಗೊಳಿಸುವ ಪ್ರಕ್ರಿಯೆ ಈಗ ಅಂತಿಮ ಹಂತದಲ್ಲಿದೆ. ವಿದ್ಯುತ್‌ ನಿಯಂತ್ರಣ ಆಯೋಗವು ಈ ಸಂಬಂಧ ಈಗಾಗಲೇ ನಿಯಮಕ್ಕೆ ತಿದ್ದುಪಡಿಗೊಳಿಸಿ ಆ ಕುರಿತ ಪ್ರಕ್ರಿಯೆ ನಡೆಸುತ್ತಿದೆ. ಇನ್ನು 15 ದಿನದೊಳಗೆ ರಾಜ್ಯದಲ್ಲಿ ವಿದ್ಯುತ್‌ ಸಂಪರ್ಕ ಸಂಬಂಧ ಹೊಸ ನಿಯಮ ಜಾರಿಗೆ ಬರುವ ನಿರೀಕ್ಷೆಯಿದೆ.-ಸುನಿಲ್‌ ಕುಮಾರ್‌, ಇಂಧನ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next