Advertisement

ಯೋಚನೆ ಮಾಡಿ ತೀರ್ಮಾನ ತಗೊಳ್ಳಿ

12:30 AM Feb 11, 2019 | |

ಯಾರಾದರೂ ಮೆ ಕಟ್ಟಿಸುತ್ತಾ ಇದಾರೆ ಅಂತ ಗೊತ್ತಾದರೆ, ಆ ಮನೆಯ ನಿರ್ಮಾಣ ಹೇಗೆ ನಡೆಯುತ್ತಿದೆ ಎಂದು ನೋಡಲು ಹಲವರು ಬರುತ್ತಾರೆ. ಹಾಗೆ ಬಂದವರು ಬಾಗಿಲು ಹೀಗಿರಬೇಕಿತ್ತು, ಕಿಟಕಿ ಆ ಕಡೆ ಇರಬೇಕಿತ್ತು, ವರಾಂಡ ಚಿಕ್ಕದಾಯಿತು ಎಂದೆಲ್ಲ ತಮಗೆ ತೋಚಿದಂತೆ ಸಲಹೆ ಕೊಡಲು ಆರಂಭಿಸುತ್ತಾರೆ. ಅಂಥ ಸಂದರ್ಭದಲ್ಲಿ ಎಲ್ಲವನ್ನೂ  ಮೌನವಾಗಿ ಕೇಳಿಸಿಕೊಂಡು ನಮಗೆ ಸರಿ ಅನಿಸುವ ನಿರ್ಧಾರಕ್ಕೆ ಬರುವುದು ಜಾಣತನ. 

Advertisement

ಮನೆ ಕಟ್ಟುವಾಗ ಮಾಡುವ ಅತಿ ಕಷ್ಟಕರ ಕೆಲಸಗಳಲ್ಲಿ ಒಂದು ಎಂದರೆ ಸೂಕ್ತ ಸಂದರ್ಭದಲ್ಲಿ ಸರಿಯಾದ ನಿರ್ಧಾರ, ಅದರಲ್ಲೂ ದೃಢನಿರ್ಧಾರ ತೆಗೆದುಕೊಳ್ಳುವುದು.  ಒಮ್ಮೆ “ಇದು’ ಸರಿ ಎಂದೆನಿಸಿದರೆ, ಮತ್ತೂಮ್ಮೆ “ಅದು’ ಸರಿ ಎಂದೆನಿಸುತ್ತದೆ. ಮನೆಯ ಮುಂಬಾಗಿಲು ಎಲ್ಲಿರಲಿ? ಎಂಬುದರಿಂದ ಹಿಡಿದು ಕಟ್ಟಕಡೆಯ ಮೆಟ್ಟಿಲಿನ ಬಾಗಿಲು ಎಲ್ಲಿದ್ದರೆ ಚೆನ್ನಾಗಿರುತ್ತದೆ ಎನ್ನುವುದರವರೆಗೂ ತೀರ್ಮಾನ ತೆಗೆದುಕೊಳ್ಳುವುದು ಕಷ್ಟಕರ ಕೆಲಸ. ಇನ್ನು ಫಿನಿಶಿಂಗ್‌ ವೇಳೆಯಲ್ಲಿ ವಿವಿಧ ವಸ್ತುಗಳ ಆಯ್ಕೆ, ಯಾವ ಬಣ್ಣ, ಯಾವ ಲೋಹ, ಹಿತ್ತಾಳೆಗೆ ಪಾಲಿಶ್‌ ಹಾಕಿಸಿ ಚಿನ್ನದಂತೆ ಮಿರಮಿರನೆ  ಮಿನುಗುವಂತೆ ಮಾಡುವುದೋ ಇಲ್ಲವೇ ತುಕ್ಕು ಹಿಡಿಯದ, ಮಂಕುಕವಿಯದ ಸ್ಟೈನ್‌ಲೆಸ್‌ ಸ್ಟೀಲ್‌ ಹಾಕಿ ಸುಮ್ಮನಿರುವುದೋ ಎಂಬಂಥಹ ನಿರ್ಧಾರಗಳನ್ನು ಮಾಡುವುದೂ ಕಷ್ಟ ಕಷ್ಟ.  ಇನ್ನು ಪಾಯ ಹಾಕುವಾಗ, ಒಂದೆರಡು ಮಹಡಿಗೆ ಮಾತ್ರ ಫ‌ುಟಿಂಗ್‌ ಹಾಕಿದರೆ ಸಾಕೋ, ನಾಲ್ಕು ಐದು ಮಹಡಿಗೆ ಆಗುವಷ್ಟು ಒಂದೇ ಸಾರಿ ಹಾಕಿಬಿಡುವುದೋ? ಯಾವುದು ಸರಿ? ಪಾಯವನ್ನಂತೂ ಪದೇಪದೇ ಹಾಕಲು ಆಗುವುದಿಲ್ಲವಲ್ಲ ಹಾಕೇ ಬಿಡೋಣ ಅನ್ನೋ ಸಂಗತಿಗಳ ಕುರಿತು ಅಂತಿಮ ತೀರ್ಮಾನ ಮಾಡುವುದು ಸಂಕಟದ ವಿಷಯವಾದೀತು.  

ಈ ರೀತಿಯ ದ್ವಂದ್ವಗಳು ನಮ್ಮೊಳಗಿನ ಪಡಸಾಲೆಯಲ್ಲಿದ್ದರೆ, ಇನ್ನು ಮನೆ ನೋಡಲು ಬರುವವರ ಪುಕ್ಕಟ್ಟೆ ಸಲಹೆಗಳೂ ಕೂಡ ನಮ್ಮ ತಲೆಕೆಡಿಸಿ ಹೈರಾಣಾಗುವಂತೆ ಮಾಡಿಬಿಡುತ್ತವೆ. ಹಾಗಾಗಿ, ಮನೆ ಕಟ್ಟುವಾಗ ಕೆಲ ನಿರ್ಧಾರಗಳ ಬಗ್ಗೆ ಮೊದಲೇ ಸ್ಪಷ್ಟ ನಿಲುವುಗಳಿರುವುದು ಕ್ಷೇಮ.

ನಿಮ್ಮ ನಿರ್ಧಾರ ನಿಮ್ಮ ಅನುಕೂಲಕ್ಕೆ ಇರಲಿ
ಒಂದೊಂದು ವಿಷಯದಲ್ಲಿ ಒಬ್ಬೊಬ್ಬರ ಗ್ರಹಿಕೆ ಒಂದೊಂದು ರೀತಿಯಲ್ಲಿ ಇರುತ್ತದೆ. ಪ್ರತಿ ನಿರ್ಧಾರದಲ್ಲೂ ಒಂದಲ್ಲ ಒಂದು ಅನುಕೂಲ ಇದ್ದೇ ಇರುತ್ತದೆ.  ಹಾಗೆಯೇ, ಕೆಲ ಅನಾನುಕೂಲಗಳೂ ಇರುವುದು ಖರೆ. ಆದುದರಿಂದ ನಾವು ಅಗತ್ಯವಾಗಿ ನಮ್ಮ ಅನಿಸಿಕೆಗಳಿಗೆ ಅತಿ ಹೆಚ್ಚು ಒತ್ತನ್ನು ನೀಡಿ ಇತರರು ಹೇಳಿದ್ದನ್ನು ಕಿವಿಯ ಮೇಲೆ ಹಾಕಿಕೊಂಡು, ತೂಗಿ ನೋಡಿ, ಅಕಸ್ಮಾತ್‌ ನಮ್ಮ ಅನಿಸಿಕೆ ತೀರ ತಪ್ಪು ಎಂದೆನಿಸಿದರೆ ಮಾತ್ರ ನಿರ್ಧಾರವನ್ನು ಬದಲಾಯಿಸಬೇಕು. ಕೆಲವೊಮ್ಮೆ ನಾಲ್ಕಾರು ನಿರ್ಧಾರಗಳು ಬದಲಾಗುತ್ತಿದ್ದರೂ ಒಂದನ್ನೂ ನಿರ್ಧರಿಸಲು ಆಗುವುದಿಲ್ಲ. ಒಮ್ಮೆ ಹೀಗೆ ಮಾಡುವುದೇ ಸರಿ ಎಂದೆನಿಸಿದರೆ, ಮತ್ತೂಮ್ಮೆ ಮತ್ತೂಂದಷ್ಟು ವಿಷಯಗಳು ನೆನಪಿಗೆ ಬಂದು ಬದಲಾಯಿಸಬೇಕು ಎಂದೆನಿಸುತ್ತದೆ. ಹೀಗಾಗಲು ಮುಖ್ಯ ಕಾರಣ, ನಮಗೆ ಇರುವ ನಾಲ್ಕಾರು ಆಯ್ಕೆಗಳಲ್ಲಿ ಯಾವುದು ಮುಖ್ಯ ಹಾಗೂ ಯಾವುದು ಅಮುಖ್ಯ ಎಂದು ನಿರ್ಧರಿಸದೇ ಇರುವುದೇ ಆಗಿರುತ್ತದೆ. ಹಾಗಾಗಿ, ನಾವು ನಮ್ಮ ಅಗತ್ಯಗಳನ್ನು ನಿಖರವಾಗಿ ನಿರ್ಧರಿಸಿಕೊಂಡು ಮುಂದುವರೆಯುವುದು ಉತ್ತಮ.

ತೊಳಲಾಟ
ಕೆಲವೊಮ್ಮೆ ಸಣ್ಣ ವಿಷಯ ಅನ್ನುವ ಸಂಗತಿಗಳೂ, ನಿರ್ಧಾರ ತೆಗೆದುಕೊಳ್ಳುವಾಗ ದೊಡ್ಡದಾಗಿ ಮಾರ್ಪಾಡಾಗಿರುತ್ತವೆ. ಉದಾಹರಣೆಗೆ-ಮನೆಯ ದೊಡ್ಡ ಕಿಟಕಿಯೊಂದನ್ನು ರಸ್ತೆಬದಿಗೆ ಇಡುವುದು ಉತ್ತಮವೋ, ಪಕ್ಕಕ್ಕೆ ಇಡುವುದು ಒಳ್ಳೆಯದೋ? ಎಂಬ ವಿಚಾರ. ಇದು ಕಿಟಕಿಯನ್ನು ಎಲ್ಲಿ ಇಟ್ಟರೂ ಗಾಳಿ-ಬೆಳಕು ಬರುತ್ತದೆ ಅನ್ನೋದಾದರೆ ಸಮಸ್ಯೆ ಇಲ್ಲ. ಆದರೆ, ಇದರಲ್ಲಿ ವಾಸ್ತು ಸೇರಿಕೊಂಡಾಗ ಗೊಂದಲ ಹೆಚ್ಚಾಗುತ್ತದೆ.  ಹೀಗೆ ಆ ಕ್ಷಣದಲ್ಲಿ ನಿರ್ಧರಿಸಲು ಕಷ್ಟವಾಗುವುದರ ಜೊತೆಗೆ ಎಲ್ಲ ಆದ ಮೇಲೂ ಆ ಕಿಟಕಿ ರಸ್ತೆ ಕಡೆಗೆ ತೆರೆದುಕೊಳ್ಳುವಂತಿದ್ದರೆ ಬಹಳ ಚೆನ್ನಾಗಿತ್ತು ಎಂದೆನಿಸಬಹುದು. 

Advertisement

ಇಂಥ ವಿಷಯಗಳ ಬಗ್ಗೆ ನಿರ್ಧರಿಸುವಾಗ ಕೆಲವು ವಿಚಾರಗಳಲ್ಲಿ ಸ್ಪಷ್ಟತೆ ಹೊಂದಿರಬೇಕಾಗುತ್ತದೆ. ಕಿಟಕಿ ನೇರವಾಗಿ ರಸ್ತೆಯನ್ನು ನೋಡುತ್ತಿದ್ದರೆ, ನಮಗೆ ಹೊರಗಿನದು ಕಾಣಿಸುವಂತೆ ಹೊರಗಿನಿಂದಲೂ ಮನೆಯ ಒಂದಷ್ಟು ಭಾಗ ಕಾಣಿಸುತ್ತದೆ. ಅದರಲ್ಲೂ ಸಂಜೆ, ಮನೆಯೊಳಗೆ ದೀಪ ಬೆಳಗಿದ ನಂತರ ಕಿಟಕಿ ತೆರೆದಿದ್ದರೆ ಸಾಕಷ್ಟು ಭಾಗ ಹೊರಗಿನಿಂದ ಕಂಡು ನಮಗೆ ಒಳಗೆ ಕೂರಲು ಕಿರಿಕಿರಿ ಆಗಬಹುದು. ಕಿಟಕಿಗೆ ಕರ್ಟನ್‌ ಹಾಕಲು ಇಷ್ಟವಿಲ್ಲದೇ ಇದ್ದರೆ ಆಗ ನಾವು ಅನಿವಾರ್ಯವಾಗಿ ಮನೆಯ ಪಕ್ಕಕ್ಕೆ ಕಿಟಕಿ ತೆರೆದುಕೊಳ್ಳುವಂತೆ ಮಾಡಲೇಬೇಕಾಗುತ್ತದೆ. 

ಒಮ್ಮೆ ಕಿಟಕಿಯನ್ನು ನೇರವಾಗಿ ರಸ್ತೆಗೆ ಇಟ್ಟನಂತರ, ರಸ್ತೆಯ ಶಬ್ದ ಗದ್ದಲಗಳು ಮನೆಯನ್ನೂ ಸರಾಗವಾಗಿ ಪ್ರವೇಶಿಸುತ್ತವೆ. ಹಾಗೆಯೇ, ಒಂದಷ್ಟು ಧೂಳು ಕೂಡ ಪ್ರವೇಶಿಸಲು ಅನುವು ಮಾಡಿಕೊಟ್ಟಂತೆ ಆಗುತ್ತದೆ. “ಇದಕ್ಕೆ ಪರಿಹಾರ ಕಂಡುಕೊಳ್ಳುತ್ತೇವೆ, ಮನೆಯ ಮುಂದೆ ಒಂದಷ್ಟು ಗಿಡ ನೆಟ್ಟು, ಕಿಟಕಿಗೆ ದಪ್ಪನೆಯ ಕರ್ಟನ್‌ ಹಾಕಿಕೊಂಡು, ಬೇಕಾದಾಗ ಖಾಸಗಿತನ ಪಡೆಯುತ್ತೇವೆ’ ಎಂದಾದರೆ ಧೈರ್ಯವಾಗಿ ರಸ್ತೆಬದಿಗೆ ಕಿಟಕಿಗಳನ್ನು ಇಟ್ಟುಕೊಳ್ಳಬಹುದು.  ನಗರ, ಪಟ್ಟಣ ಪ್ರದೇಶಗಳಲ್ಲಿ ತೆರೆದ ಸ್ಥಳ ಎಂದರೆ ಅದು ರಸ್ತೆಯೇ ಆಗಿದ್ದು,  ಇಲ್ಲಿಂದಲೇ ನಮಗೆ ಸಾಕಷ್ಟು ಗಾಳಿ ಬೆಳಕು ಮನೆಯನ್ನು ಪ್ರವೇಶಿಸುತ್ತದೆ. ಮನೆಯ ಮುಂದಿನ ರಸ್ತೆ ವಾಹನ ಸಂಚಾರದಿಂದ ತೀರ ಹದಗೆಟ್ಟಿದ್ದರೆ, ಆಗ ದೊಡ್ಡ ಕಿಟಕಿಯನ್ನು ಮುಂದೆ ಇಡಲು ಯೋಚಿಸಬೇಕು. ಇಲ್ಲದಿದ್ದರೆ, ರಸ್ತೆ ಕಡೆಗೆ ಕಿಟಕಿ ಇಡಲು ಅಭ್ಯಂತರ ಏನೂ ಇಲ್ಲ. 

ಕಾಲಂ ದಪ್ಪ ಹಾಗೂ ದೃಢತೆ
ಗೋಡೆಗಳು ಒಂಭತ್ತು ಇಂಚು ದಪ್ಪ ಇದ್ದಾಗ ಅದರಲ್ಲಿಯೇ ಕಾಲಂ ಅಗಲ ಸೇರಿಕೊಳ್ಳುತ್ತಿದ್ದದ್ದರಿಂದ ನಮಗೆ ಅದರ ಗಾತ್ರದ ಬಗ್ಗೆ ಹೆಚ್ಚು ಚಿಂತೆ ಇರುತ್ತಿರಲಿಲ್ಲ. ಆದರೆ, ಈಗ ಗೋಡೆಗಳ ದಪ್ಪ ಕಡಿಮೆ ಆಗುತ್ತಲಿದ್ದು, ಆರು ಇಂಚಿನ ಕಾಂಕ್ರಿಟ್‌ ಬ್ಲಾಕ್‌ ಗೋಡೆ ಸರ್ವೇಸಾಮಾನ್ಯ ಆಗುತ್ತಿದೆ. ಇನ್ನು ನಾಲ್ಕು ಇಂಚು ದಪ್ಪದ ಗೋಡೆ ಇದ್ದರೆ, ಅದರ ಪಕ್ಕ ಒಂಭತ್ತು ಇಂಚು ದಪ್ಪದ ಕಂಬ ಬಂದರೆ ಹೇಗೆ? ಸ್ಟೆಪ್‌ ಕಾಣಿಸಿದರೆ ಪರವಾಗಿಲ್ಲವೇ? ಎಂದೆಲ್ಲ ಯೋಚನೆ ಬರುತ್ತದೆ. ನಮಗೆ ನಮ್ಮ ಮನೆಯ ದೃಢತೆಯ ಬಗ್ಗೆ ಕಾಳಜಿ ಇದ್ದರೆ, ಅನಗತ್ಯವಾಗಿ ಕಾಲಂಗಳ ದಪ್ಪವನ್ನು ಕಡಿಮೆ ಮಾಡಬಾರದು. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ನಾಲ್ಕಾ ಅಂತಸ್ತಿನ ಮನೆಗಳು ಸಾಮಾನ್ಯ ಆಗುತ್ತಿವೆ. ಹಾಗಾಗಿ, ಸಾಕಷ್ಟು ಭಾರ ಪಾಯದ ಮೇಲೆ ಬೀಳುತ್ತದೆ. ಜೊತೆಗೆ ಕಾಲಂಗಳ ಮೇಲೆ ನೇರವಾದ ಭಾರ ಬೀಳುವುದರ ಜೊತೆಗೆ ಎಕ್ಸೆಂಟ್ರಿಕ್‌ ಲೋಡ್‌ ಅಂದರೆ ನಿಮ್ಮ ಮನೆಯ ಒಂದು ಭಾಗ ಹೆಚ್ಚು ಎತ್ತರಕ್ಕೆ ಹೋಗಿದ್ದು -ಒಂದು ಭಾಗ ಮೂರು ಅಂತಸ್ತು ಇದ್ದು ಮಿಕ್ಕ ಭಾಗ ಎರಡು ಮಾತ್ರ ಇದ್ದರೆ, ಆಗ ಕೆಲ ಕಾಲಂಗಳು ಹೆಚ್ಚು ಭಾರ ಹೊರತ್ತಲಿದ್ದು ಮಿಕ್ಕವು ಕಡಿಮೆ ಭಾರ ಹೊರುತ್ತವೆ. ಅವುಗಳಲ್ಲಿ ಭಾರ ಹೊರುವಾಗ ಆಗುವ ಬದಲಾವಣೆಯಲ್ಲೂ ವ್ಯತ್ಯಾಸ ಆಗುತ್ತದೆ. ಈ ಎಲ್ಲವನ್ನೂ ಸರಿತೂಗಿಸಿಕೊಂಡು ಹೋಗಲು ಕಾಲಂಗಳು ಸಾಕಷ್ಟು ದಪ್ಪವಾಗಿ ಇರಬೇಕಾಗುತ್ತದೆ. ಆದುದರಿಂದ ನಾವು ನ್ಯಾಷನಲ್‌ ಬಿಲ್ಡಿಂಗ್‌ ಕೋಡ್‌, ಅಂದರೆ ರಾಷ್ಟ್ರೀಯ ಕಟ್ಟಡ ನಿರ್ಮಾಣ ದಿಕ್ಸೂಚಿಗೆ ಅನುಗುಣವಾಗಿ ಕಾಲಂಗಳ ದಪ್ಪವನ್ನು ಕಡೇಪಕ್ಷ ಒಂಭತ್ತು ಇಂಚು ದಪ್ಪ ಇಟ್ಟುಕೊಳ್ಳಬೇಕು, ಹಾಗೂ ಉದ್ದ ಅದರ ಮೇಲೆ ಬೀಳುವ ಭಾರಕ್ಕೆ ಅನುಕೂಲವಾಗಿ ಕಡೇಪಕ್ಷ ಒಂಭತ್ತು ಇಂಚಾದರೂ ಇರಬೇಕು. ಹಾಗಾಗಿ, ಯಾರಾದರೂ ಸಣ್ಣಗಾತ್ರದ ಕಾಲಂಗಳು ಗೋಡೆಯೊಂದಿಗೆ ಬೆಸೆದುಕೊಳ್ಳುತ್ತದೆ, ಆರು ಇಂಚು ದಪ್ಪ ಮಾತ್ರ ಹಾಕಿ ಎಂದರೆ ಅದಕ್ಕೆ ಕಿವಿಗೊಡಬೇಡಿ!

ಇತ್ತೀಚಿನ ದಿನಗಳಲ್ಲಿ ಡಮ್ಮಿ ಬೀಮ್‌ ಹಾಗೂ ಕಾಲಂಗಳ ಹಾವಳಿ ಹೆಚ್ಚಿದೆ. ನೋಡಲು ಸುಂದರವಾಗಿ ಕಾಣುತ್ತದೆ ಎಂದು ಕಾಲಂ ಬೀಮ್‌ ಗಳಂತೆ ಕಾಣುವ ಖಾಲಿಯವನ್ನು ಮರದ ಹಲಗೆಗಳಿಂದ ಮಾಡಿ ತಗುಲಿಹಾಕಲಾಗುತ್ತದೆ. ಇದರ ಬದಲು ದಪ್ಪನೆಯ ಕಾಲಂಗಳನ್ನು ಮನೆಗೆ ಹಾಕಿ ಅವನ್ನೇ ಕಲಾತ್ಮಕವಾಗಿ ಮೂಡುವಂತೆ ಮಾಡಿದರೆ, ಮನೆ ಗಟ್ಟಿಯಾಗಿ ಇರುವಂತೆ ನಿರ್ಧಾರ ತೆಗೆದುಕೊಂಡ ಹಾಗೆ ಆಗುವುದರ ಜೊತೆಗೆ ಸುಂದರವಾಗಿ ಇರುವಂತೆಯೂ ಆಗುತ್ತದೆ! 

– ಆರ್ಕಿಟೆಕ್ಟ್ ಕೆ ಜಯರಾಮ್‌

ಹೆಚ್ಚಿನ ಮಾಹಿತಿಗೆ ಫೋನ್‌ 98441 32826

Advertisement

Udayavani is now on Telegram. Click here to join our channel and stay updated with the latest news.

Next