ಮೈಸೂರು: ವಿದ್ಯಾರ್ಥಿಗಳು ಓದಿನ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ತಮ್ಮಲ್ಲಿರುವ ಪ್ರತಿಭೆ ಹೆಚ್ಚಿಸಿಕೊಳ್ಳಬೇಕು ಎಂದು ರಂಗಾಯಣ ನಿರ್ದೇಶಕಿ ಭಾಗೀರಥಿ ಬಾಯಿ ಕದಂ ತಿಳಿಸಿದರು. ನಗರದ ಯುವರಾಜ ಕಾಲೇಜಿನಲ್ಲಿ ಸೋಮವಾರ ನಡೆದ 2017-18ನೇ ಸಾಲಿನ ಜ್ಞಾನವಾಹಿನಿ, ರಾಷ್ಟ್ರೀಯ ಸೇವಾ ಯೋಜನೆ, ಎನ್‌ಸಿಸಿ ಕ್ರೀಡೆ ಪ್ರತಿಭಾನ್ವೇಷಣೆ ಮತ್ತು ಪಠ್ಯೇತರ ಚಟುವಟಿಕೆಗಳ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ದೇಶವನ್ನು ಒಗ್ಗೂಡಿಸಲು ಕಲೆ, ಸಾಹಿತ್ಯ ಅಗತ್ಯವಾಗಿದ್ದು, ಸಿನಿಮಾ, ದೂರದರ್ಶನಕ್ಕಿಂತ ರಂಗಭೂಮಿ ಅತ್ಯಂತ ಭಿನ್ನ. ಹೀಗಾಗಿ ಮನುಷ್ಯನನ್ನು ಯಥಾವತ್ತಾಗಿ ತೋರಿಸುವ ಜೀವಂತ ಪ್ರೇಕ್ಷಕ ಮನೆಯಾಗಿದೆ. ಹೀಗಾಗಿ ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆ ಹೆಚ್ಚಿಸಿಕೊಳ್ಳಲು ಕಾಲೇಜುಗಳಲ್ಲಿ ದೊರೆಯುವ ಅವಕಾಶಗಳನ್ನು ಬಳಸಿಕೊಳ್ಳಬೇಕು.
ಈ ನಿಟ್ಟಿನಲ್ಲಿ ಯುವರಾಜ ಕಾಲೇಜಿನಲ್ಲಿ ಅನೇಕ ಪ್ರತಿಭೆಗಳಿದ್ದು, ವಿದ್ಯಾರ್ಥಿಗಳು ತಮಗೆ ಆಸಕ್ತಿ ಇರುವ ವಿಷಯಗಳನ್ನು ವ್ಯಾಸಂಗ ಮಾಡುವುದರಲ್ಲಿ ತೊಡಗಿಸಿಕೊಳ್ಳಬೇಕು ಎಂದರು. ವಿಜ್ಞಾನ ಮತ್ತು ರಂಗಭೂಮಿ ಕ್ಷಣ, ಕ್ಷಣಕ್ಕೂ ಬದಲಾಗುವ ಕ್ಷೇತ್ರವಾಗಿದ್ದು, ತಂತ್ರಜ್ಞಾನ ಬೆಳೆದಂತೆ ಹಿಂದಿನ ಆತ್ಮೀಯತೆ ಕಡಿಮೆಯಾಗುತ್ತಿದೆ. ಹಿಂದೆ ಪ್ರತಿಯೊಬ್ಬರೂ ನೋವು, ನಲಿವುಗಳನ್ನು ಪರಸ್ಪರ ಒಬ್ಬರಿಗೊಬ್ಬರು ಹಂಚಿಕೊಳ್ಳುತ್ತಿದ್ದರು.
ಆದರೆ, ಇಂದು ಎಲ್ಲವೂ ಮೊಬೈಲ್ ಮಯವಾಗಿದೆ. ಕ್ಷಣಾರ್ಧದಲ್ಲಿ ಸಂಪರ್ಕಕ್ಕೆ ಸಿಕ್ಕರು ಹಿಂದಿನ ಆತ್ಮೀಯತೆ ದೊರೆಯುತ್ತಿಲ್ಲ. ಇದನ್ನು ಹೋಗಲಾಡಿಸುವ ಸಲುವಾಗಿ ಪ್ರಕೃತಿಯೊಂದಿಗೆ ಬೆರೆಯುವ ಕೆಲಸವಾಗಬೇಕಿದ್ದು, ವಿದ್ಯಾರ್ಥಿಗಳು ಕೇವಲ ಅಂಕಗಳಿಗಾಗಿ ಓದದೇ, ತಮ್ಮಲ್ಲಿರುವ ಪ್ರತಿಬೆ ಅಭಿವೃದ್ಧಿಪಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಯುವರಾಜ ಕಾಲೇಜು ಪ್ರಾಂಶುಪಾಲ ಡಾ.ಆರ್.ಗಣೇಶ್, ಆಡಳಿತಾಧಿಕಾರಿ ಡಾ.ಎಚ್.ಎನ್.ಕಾಂತಲಕ್ಷಿ, ಪರೀûಾ ನಿಯಂತ್ರಣಾಧಿಕಾರಿ ಡಾ.ಬಿ.ಎಂ.ವೆಂಕಟೇಶ್, ಜ್ಞಾನವಾಹಿನಿ ಸಮಿತಿ ಸಂಚಾಲಕಿ ಡಾ.ಸಿ.ಸುಮಂಗಲ ಉಪಸ್ಥಿತರಿದ್ದರು.