ಆಗ್ರಾ : ವಿಶ್ವ ಪ್ರಸಿದ್ಧ ತಾಜ್ ಮಹಲ್‌ನ ನಿರ್ಬಂಧಿತ ಪ್ರದೇಶದಲ್ಲಿ 400 ವರ್ಷಗಳಷ್ಟು ಹಳೆಯ ಶಿವ ದೇವಾಲಯವಿದ್ದು ಅದಕ್ಕೆ ಹೋಗುವ ಮಾರ್ಗಕ್ಕೆ ತಾಜ್ ಮಹಲ್ ಆವರಣದಿಂದ ಅಡ್ಡಿಯಾಗುತ್ತಿದೆ ಎಂಬ ಕಾರಣಕ್ಕೆ ವಿಹಿಂಪ ಕಾರ್ಯಕರ್ತರದ್ದೆನ್ನಲಾದ ಒಂದು ಗುಂಪು ಕಳೆದ ಭಾನುವಾರ ತಾಜ್ ಮಹಲ್‌ನ ಪಶ್ಚಿಮ ದ್ವಾರವನ್ನು ಧ್ವಂಸಗೊಳಿಸಿದ ಘಟನೆ ನಡೆದಿದೆ.
ಭಾರತೀಯ ಪುರಾತತ್ವ ಇಲಾಖೆ ಆಗ್ರಾ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದೆ. ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ವಿಹಿಂಪ ಗುಂಪು ಸುತ್ತಿಗೆ, ಕಬ್ಬಿಣದ ರಾಡ್ ಬಳಸಿ ದ್ವಾರವನ್ನು ಧ್ವಂಸಗೊಳಿಸುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದ್ದು ಅದೀಗ ವೈರಲ್ ಆಗಿದೆ.
ತಾಜ್ ಮಹಲ್‌ನ ಪಶ್ಚಿಮ ದ್ವಾರದ ಬಳಿಕದಲ್ಲಿ ಸಿಗುವ ಬಸಾಯ್ ಘಾಟ್‌ನಲ್ಲಿರುವ ಸಿದ್ಧೇಶ್ವರ ದೇವಸ್ಥಾನಕ್ಕೆ ಹೋಗಲು ಇನ್ನೊಂದು ಬದಲಿ ಮಾರ್ಗ ಇದೆ ಎಂದು ಪೊಲೀಸರು ಹೇಳಿರುವ ಹೊರತಾಗಿಯೂ ಉದ್ರಿಕ್ತ ಗುಂಪು ದ್ವಾರವನ್ನು ಒಡೆದು ಹಾಕಿರುವುದಾಗಿ ಮಾಧ್ಯಮ ವರದಿಗಳು ತಿಳಿಸಿವೆ.
ಪೊಲೀಸರು ವಿಹಿಂಪ ಕಾರ್ಯಕರ್ತರ ವಿರುದ್ಧ ಎಫ್ಐಆರ್ ದಾಖಲಿಸಿರುವುದಾಗಿ ಮೂಲಗಳು ತಿಳಿಸಿವೆ.