Advertisement

Taj Mahal ಒಂದೇ ಪ್ರವಾಸಿ ತಾಣವಲ್ಲ…ಅಸಂಖ್ಯ ತಾಣಗಳಿವೆ: ಪ್ರಧಾನಿ ಮೋದಿ

12:01 AM May 28, 2024 | Team Udayavani |

ಹೊಸದಿಲ್ಲಿ: ಜಗತ್ತಿನ 7 ಅದ್ಭುತಗಳಲ್ಲಿ ಒಂದಾಗಿರುವ ತಾಜ್‌ ಮಹಲ್‌ವೊಂದೇ ಭಾರತದ ಪ್ರವಾಸೋದ್ಯಮ ತಾಣವಲ್ಲ. ಇನ್ನೂ ಅಸಂಖ್ಯ ಸ್ಥಳಗಳಿದ್ದು, ಅವುಗಳನ್ನು ಶೋಧ ಮಾಡಬೇಕಿದೆ. ಹಾಗಾಗಿ ಜಿ 20 ಶೃಂಗಸಭೆಯನ್ನು ದಿಲ್ಲಿಗೆ ಮಾತ್ರ ಸೀಮಿತಗೊಳಿಸದೇ ಇಡೀ ದೇಶಾದ್ಯಂತ ನಡೆಯುವಂತೆ ನೋಡಿಕೊಳ್ಳಲಾಯಿತು. ಆ ಮೂಲಕ ಭಾರತದ ಇಮೇಜ್‌ ಬದಲಿಸುವ ಪ್ರಯತ್ನ ಮಾಡಲಾಯಿತು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.

Advertisement

ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಭಾರತದ ವೈವಿಧ್ಯತೆ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಅವರು, “ಯಾವುದೇ ದೇಶ ಒಂದೇ ಸ್ತಂಭದ ಆಧಾರದ ಮೇಲೆ ಬೆಳೆಯಲು ಸಾಧ್ಯವಿಲ್ಲ. ಭಾರತವು ಅಪಾರ ಸಾಮರ್ಥ್ಯ ವನ್ನು ಹೊಂದಿದ ದೇಶವಾಗಿದೆ ಮತ್ತು ಪ್ರತೀ ಪ್ರಾಂತವು ತನ್ನದೇ ಆದ ವಿಶಿಷ್ಟ ಸಾಮರ್ಥ್ಯವನ್ನು ಹೊಂದಿದೆ. ಆ ಸಾಮರ್ಥ್ಯವನ್ನು ಹೊರ ತರಬೇಕಿದೆ. “ಒಂದು ಜಿಲ್ಲೆ ಒಂದು ಉತ್ಪನ್ನ'(ಒಡಿಒಪಿ) ಈ ನಿಟ್ಟಿನಲ್ಲಿ ಕೈಗೊಳ್ಳಲಾದ ಯೋಜನೆಯಾಗಿದೆ” ಎಂದು ಹೇಳಿದರು. ಪರೀûಾ ಪೇ ಚರ್ಚಾ ಮತ್ತು ಮನ್‌ ಕೀ ಬಾತ್‌ ತಿಂಗಳ ಕಾರ್ಯಕ್ರಮಗಳ ಮೂಲಕ ಭಾರತದ ಯುವ ಜನರನ್ನು ಅರಿತುಕೊಳ್ಳಲು ಸಾಧ್ಯವಾಗಿದೆ ಎಂದು ಹೇಳಿದರು. ಇಂದಿನ ಯುವಕರ ಆಕಾಂಕ್ಷೆಗಳು ಭಿನ್ನವಾಗಿವೆ. ಅವರು ತಮ್ಮ ಸಮಯ ಕ್ಕಿಂತಲೂ 10 ವರ್ಷ ಮುಂದೆ ಯೋಚಿಸುತ್ತಾರೆಂಬುದು ನನ್ನ ಗಮನಕ್ಕೆ ಬಂದಿದೆ. ಹಾಗಾಗಿಯೇ ನಾನು ಮೊದಲ ಬಾರಿಯ ಮತದಾರ ರನ್ನು ಸೆಳೆಯುವ ಪ್ರಯತ್ನ ಮಾಡುತ್ತಾ ಬಂದಿದ್ದೇನೆ. ಯುವಕರು ಒಂದೇ ಹಂತದಲ್ಲಿ ದೊಡ್ಡದನ್ನು ಸಾಧಿಸಲು ಬಯಸುತ್ತಿದ್ದಾರೆ. ಅವರಿಗೆ ಆ ಅವಕಾಶವನ್ನು ಒದಗಿಸಿಕೊಡಬೇಕಾಗಿದೆ. ದೊಡ್ಡ ಮಟ್ಟದಲ್ಲಿ ಸಂಪರ್ಕ ಸಾಧಿಸಲು ಸಾಧ್ಯವಾಗಲಿ ಎಂದು ಇಂಟರ್ನೆಟ್‌ ಶುಲ್ಕವನ್ನು ಕಡಿಮೆ ಮಾಡಲಾಗಿದೆ. ಇದರ ಉದ್ದೇಶ ಯುವಕರು ಡಿಜಿಟಲ್‌ ಮಾಧ್ಯಮವನ್ನು ಬಳಸಿಕೊಳ್ಳ ಬೇಕು ಮತ್ತು ಅದರಲ್ಲಿ ಯಶಸ್ಸು ಸಾಧಿಸಬೇಕು ಎಂಬುದಾಗಿತ್ತು ಎಂದು ಅವರು ತಿಳಿಸಿದರು.

ಭ್ರಷ್ಟಾಚಾರದ ವಿರುದ್ಧ ಶೂನ್ಯ ಸಹಿಷ್ಣುತೆ
ಭ್ರಷ್ಟಾಚಾರ ನಿಯಂತ್ರಣಕ್ಕೆ ಹೊಸ ನೀತಿಯನ್ನು ತರುವ ಉದ್ದೇಶವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಮೋದಿ, “”ಭ್ರಷ್ಟಾಚಾರದಿಂದ ದೇಶದ ಜನರು ಬೇಸತ್ತಿದ್ದಾರೆ. ನಾವು ಭ್ರಷ್ಟಾಚಾರ ಶೂನ್ಯ ಸಹಿಷ್ಣುತೆ ನೀತಿಯನ್ನು ಹೊಂದಿದ್ದೇವೆ. ಭ್ರಷ್ಟಾಚಾರಿಗಳ ವಿರುದ್ಧ ನಾವು ಪುರಾವೆಗಳ ಆಧಾರದ ಮೇಲೆ ಕ್ರಮ ಕೈಗೊಳ್ಳುತ್ತಿದ್ದೇವೆಯೇ ಹೊರತು ಗ್ರಹಿಕೆಯ ಆಧಾರದ ಮೇಲೆ ಅಲ್ಲ. 2019 ರ ಚುನಾವಣೆಗೆ ಮೊದಲು, ಭ್ರಷ್ಟಾಚಾರದ ಬಗ್ಗೆ ನಮ್ಮ ನಿಲುವು ಮತ್ತು ಕ್ರಮದ ಬಗ್ಗೆ ನಮ್ಮನ್ನು ಪ್ರಶ್ನಿಸಲಾಯಿತು. ಅಪರಾಧಿಗಳನ್ನು ಶಿಕ್ಷಿಸುವಲ್ಲಿ ಸರಕಾರ ಏಕೆ ತ್ವರಿತವಾಗಿಲ್ಲ ಎಂದು ಪ್ರಶ್ನಿಸಲಾಯಿತು. ಸ್ವತಂತ್ರ ಏಜೆನ್ಸಿಗಳು ಅವರ ವಿರುದ್ಧ ಕ್ರಮಕೈಗೊಳ್ಳುತ್ತವೆ ಮತ್ತು ಅದನ್ನು ಸತ್ಯಗಳ ಆಧಾರದ ಮೇಲೆ ಮಾಡಲಾಗುತ್ತದೆ ಎಂಬುದು ನಮ್ಮ ಸಂಪೂರ್ಣ ಪ್ರತಿಕ್ರಿಯೆಯಾಗಿತ್ತು. ಅಧಿಕಾರಿಗಳು ಸತ್ಯವನ್ನು ಹೊರ ತರಲು ಶ್ರಮಿಸಿದರು ಮತ್ತು ಇಂದು ದೊಡ್ಡ ಕುಳಗಳನ್ನು ಹಿಡಿದು ಕೋರ್ಟ್‌ ಕಟಕಟೆಗೆ ತರಲಾಗುತ್ತಿದೆ. ಆದರೆ ಪಟ್ಟಭದ್ರ ಹಿತಾಸಕ್ತಿ ಶಕ್ತಿಗಳು ನಮ್ಮನ್ನೇ ಪ್ರಶ್ನಿಸುತ್ತಿವೆ” ಎಂದು ಆರೋಪಿಸಿದರು.

ರಾಜೀವ್‌ ಆಡಳಿತದಲ್ಲಾಗಿದ್ದರೆ 8 ಲಕ್ಷ ಕೋ.ರೂ. ಹೋಗುತ್ತಿತ್ತು!
ನೇರ ನಗದು ವರ್ಗಾವಣೆ (ಡಿಬಿಟಿ) ಮೂಲಕ ನಮ್ಮ ಸರಕಾರವು ಫ‌ಲಾನುಭವಿಗಳ ಖಾತೆಗೆ 38 ಲಕ್ಷ ಕೋಟಿ ರೂ. ವರ್ಗಾವಣೆ ಮಾಡಿದರೆ. ಒಂದು ವೇಳೆ ರಾಜೀವ್‌ ಗಾಂಧಿ ಆಡಳಿತದಲ್ಲಾಗಿದ್ದರೆ ಇದು 8 ಲಕ್ಷ ಕೋಟಿ ರೂ. ಆಗುತ್ತಿತ್ತು. ಯಾಕೆಂದರೆ ಆಗ ರಾಜೀವ್‌ ಹೇಳಿಕೆಯಂತೆ(1 ರೂ. ಬಿಡುಗಡೆಯಾದರೆ ಫ‌ಲಾನುಭವಿಗೆ 15 ಪೈಸೆ) ಸುಮಾರು 25ರಿಂದ 30 ಲ. ರೂ. ಮಧ್ಯವರ್ತಿಗಳ ಪಾಲಾಗುತ್ತಿತ್ತು ಎಂದು ಹೇಳಿದರು.

ಯುಪಿಐ ಇಲ್ಲದಿದ್ದರೆ ಕೋವಿಡ್‌ ಪರಿಸ್ಥಿತಿ ನಿರ್ವಹಣೆ ಅಸಾಧ್ಯ
ಡಿಜಿಟಲ್‌ ಇಂಡಿಯಾ ಅಭಿಯಾನವನ್ನು ಸೇವಾ ಪೂರೈಕೆ ಕಂಪೆನಿಗಳಿಗೆ ಲಾಭ ಮಾಡಿಕೊಡಲು ಮಾಡಲಾಗಿದೆ ಎಂದು ವಿಪಕ್ಷಗಳು ಆರೋಪಿಸುತ್ತಿದ್ದವು. ಆದರೆ 21ನೇ ಶತಮಾನದಲ್ಲಿ ತಂತ್ರಜ್ಞಾನದ ಮಹತ್ವವನ್ನು ಅರಿತುಕೊಳ್ಳಲು ಅವು ವಿಫ‌ಲವಾದವು. ಆದರೆ ನಾವು ಇದಾವುದನ್ನು ಲೆಕ್ಕಿಸದೇ ಮುಂದುವರಿದವು. ಒಂದು ವೇಳೆ ಯುಪಿಐ ಇಲ್ಲದಿದ್ದರೆ ಕೋವಿಡ್‌ ಪರಿಸ್ಥಿತಿಯನ್ನು ಎದುರಿಸಲು ಸಾಧ್ಯವಾಗುತ್ತಿತ್ತೆ? ಯುಪಿಐ ತಂತ್ರಜ್ಞಾನವನ್ನು ಜಗತ್ತಿನ ಇತರ ರಾಷ್ಟ್ರಗಳು ಬಳಸುತ್ತಿವೆ ಎಂದು ಪ್ರಧಾನಿ ಮೋದಿ ಹೇಳಿದರು.

Advertisement

ಆತ್ಮನಿರ್ಭರ ಭಾರತದ ಮೂಲಕ ಉದ್ಯೋಗ ಸೃಷ್ಟಿ
ಆತ್ಮ ನಿರ್ಭರ ಭಾರತದ ಬಗ್ಗೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, “”ಒಂದು ವೇಳೆ ಅಮೆರಿಕನ್ನರು “ನಾವು ಅಮೆರಿಕನ್ನರು ಅಮೆರಿಕನ್‌ ವಸ್ತುಗಳನ್ನು ಖರೀದಿಸುತ್ತೇವೆ’ ಎಂದು ಹೇಳಿದರೆ ಅದನ್ನು ಹೆಮ್ಮೆ ಎಂದು ಪರಿಗಣಿಸುತ್ತಾರೆ. ಅದೇ ನಾನು “ವೋಕಲ್‌ ಫಾರ್‌ ಲೋಕಲ್‌’ಗೆ ಕರೆ ನೀಡಿದರೆ, ವಿಪಕ್ಷಗಳು ಜಾಗತೀಕರಣ ವಿರುದ್ಧವಾದ ನೀತಿ ಎಂದು ಟೀಕಿಸುತ್ತವೆ. ಈ ರೀತಿಯ ಪ್ರವೃತ್ತಿಯು ದೇಶವನ್ನು ಅಪಾಯಕ್ಕೆ ತಳ್ಳುತ್ತದೆ ಎಂದರು.

ಭಾರತವನ್ನು ಆತ್ಮ ನಿರ್ಭರ ದೇಶವನ್ನಾಗಿ ಮಾಡಲು ದೇಶದ ಮಾನವ ಸಂಪನ್ಮೂಲ ಶಕ್ತಿಯನ್ನು ಸರಿಯಾದ ದಿಕ್ಕಿನಲ್ಲಿ ಬಳಸಿಕೊಳ್ಳಬೇಕು. ಆತ್ಮ ನಿರ್ಭರ ಭಾರತ ಮೂಲಕ ಉದ್ಯೋಗ ಪೂರೈಕೆ ಮತ್ತು ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವುದಾಗಿದೆ. ರಾಷ್ಟ್ರವೇ ಮೊದಲು ಎಂಬುದನ್ನು ನನ್ನ ಸರಕಾರದ ಮಂತ್ರವಾಗಿದೆ” ಎಂದರು.

Advertisement

Udayavani is now on Telegram. Click here to join our channel and stay updated with the latest news.

Next