Advertisement

ಗ್ರಾಮದ ಸಮಸ್ಯೆಗಳ ಪಟ್ಟಿ ಮಾಡಿದ ತಹಶೀಲ್ದಾರ್‌

12:13 PM Oct 15, 2021 | Team Udayavani |

ಕನಕಪುರ: ಸರ್ಕಾರದ ಆದೇಶದ ಬೆನ್ನಲ್ಲೇ ತಾಲೂಕು ಆಡಳಿತ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮ ಯಶಸ್ವಿ ಗೊಳಿಸಲು ಸಂಪೂರ್ಣ ಸಿದ್ಧತೆ ನಡೆಸಿ ಗಮನ ಸೆಳೆದಿದೆ. ಮನೆ ಮನೆ ಸಮೀಕ್ಷೆ: ಗ್ರಾಮ ಮಟ್ಟದಲ್ಲಿ ರೂಪಿಸುವ ಕಾರ್ಯಕ್ರಮಗಳ ಜವಾಬ್ದಾರಿ ಸ್ಥಳೀಯ ಅಥವಾ ಕೆಳ ಹಂತದ ಸಿಬ್ಬಂದಿಗೆ ಹೊರಸಿ ಕೈತೊಳೆದು ಕೊಳ್ಳುವ ಅಧಿಕಾರಿಗಳೇ ಹೆಚ್ಚು . ಆದರೆ ಜಿಲ್ಲಾಧಿಕಾರಿ ಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸ್ವತಃ ತಹಶೀಲ್ದಾರ್‌ ವಿಶ್ವನಾಥ್‌ ಖುದ್ದು ಗ್ರಾಮದ ಮನೆ ಮನೆಗೂ ಭೇಟಿ ನೀಡಿ ಸಮೀಕ್ಷೆ ನಡೆಸಿ ಸಾರ್ವಜನಿಕರ ಗಮನ ಸೆಳೆದಿದ್ದಾರೆ.

Advertisement

 ಗ್ರಾಮೀಣ ಸಮಸ್ಯೆಗಳ ಪರಿಹಾರ: ಕೋವಿಡ್‌ ನಿಂದಾಗಿ ಸ್ಥಗಿತಗೊಂಡಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಎಂಬ ವಿನೂತನ ಯೋಜನೆ ಪುನರಾರಂಭ ಮಾಡುವಂತೆ ಸರ್ಕಾರ ಸೂಚನೆ ನೀಡಿದೆ. ಸರ್ಕಾರದ ಯೋಜನೆಗಳು ಗ್ರಾಮೀಣ ಭಾಗದ ಜನರ ಮನೆ ಬಾಗಿಲಿಗೆ ತಲುಪಬೇಕು ಎಂಬ ಧ್ಯೇಯದೊಂದಿಗೆ ಆರಂಭ ಮಾಡಿರುವ ಕಾರ್ಯ ಕ್ರಮದಲ್ಲಿ ಕಂದಾಯ ಇಲಾಖೆ ಸಮಸ್ಯೆಗಳು, ಪಿಂಚಿಣಿ ಮಂಜೂರಾತಿ, ಪಡಿತರ ಚೀಟಿ, ಚುನಾವಣೆ ಗುರುತಿನ ಚೀಟಿ, ಆಶ್ರಯ ಮತ್ತು ಸ್ಮಶಾನಕ್ಕೆ ಭೂಮಿ ಕಾಯ್ದಿರಿಸುವ ಅರ್ಜಿಗಳ ಪರಿಶಿಲನೆ ಹಾಗೂ ಪೌತಿ ಖಾತೆಗೆ ಸಂಬಂಧಿಸಿದ ಸಮಸ್ಯೆ ಸಾಧ್ಯವಾದರೆ ಸ್ಥಳದಲ್ಲೇ ಅಥವಾ ಕಾಲಮಿತಿಯೊಳಗೆ ಬಗೆಹರಿಸಿ ಕೊಡುವುದು ಕಾರ್ಯಕ್ರಮದ ಉದ್ದೇಶ.

 ಗ್ರಾಮದ ಸಮಸ್ಯೆಗಳ ಪಟ್ಟಿ: ಮರು ಆರಂಭವಾಗಿರುವ ಕಾರ್ಯಕ್ರಮಕ್ಕೆ ತಾಲೂಕಿನ ಸಾತನೂರು ಹೋಬಳಿಯ ಗ್ರಾಪಂ ಕೇಂದ್ರ ಸ್ಥಾನ ಕಾಡಹಳ್ಳಿ ಗ್ರಾಮವನ್ನು ಆಯ್ಕೆ ಮಾಡಿಕೊಂಡಿದ್ದು 16ರಂದು ಶನಿವಾರ ನಡೆಯಲಿರುವ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ರಾಕೇಶ್‌ ಕುಮಾರ್‌ ನೇತೃತ್ವದಲ್ಲಿ ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ಇಕ್ರಂ ಹಾಗೂ ಇತರೆ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದ ಉದ್ದೇಶ ಈಡೇರಿಸುವ ನಿಟ್ಟಿನಲ್ಲಿ ತಹಶೀಲ್ದಾರ್‌ ವಿಶ್ವನಾಥ್‌ ಬುಧವಾರ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮಕ್ಕೆ ಆಯ್ಕೆ ಮಾಡಿಕೊಂಡಿರುವ ಕಾಡಹಳ್ಳಿ ಗ್ರಾಮಕ್ಕೆ ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಮನೆ ಮನೆ ಸಮೀಕ್ಷೆ ನಡೆಸಿ ಗ್ರಾಮದಲ್ಲಿರುವ ಸಮಸ್ಯೆಗಳನ್ನು ಪಟ್ಟಿ ಮಾಡಿ ಜನರಿಗೆ ತಿಳುವಳಿಕೆ ನೀಡಿದ್ದಾರೆ.

ಇದನ್ನೂ ಓದಿ;-  ಮೀಸಲು ಸೌಲಭ್ಯದ ಮೇಲೆ ಶೂನ್ಯ ಸವಾರಿ!

ಸ್ಥಳದಲ್ಲೇ ಸಮಸ್ಯೆ ಪರಿಹಾರಕ್ಕೆ ಸೂಚನೆ: ಗ್ರಾಮದಲ್ಲಿರುವ ಸುಮಾರು 200ಕ್ಕೂ ಹೆಚ್ಚು ಮನೆಗಳಿಗೆ ಭೇಟಿ ನೀಡಿದ್ದ ತಹಶೀಲ್ದಾರ್‌ ವಿಶ್ವನಾಥ್‌ ಅವರು ಗ್ರಾಮದಲ್ಲಿರುವ ವೃದ್ಧರು, ಹಿರಿಯರ ಸಮಸ್ಯೆ ಆಲಿಸಿ ಶನಿವಾರ ನಡೆಯುವ ಕಾರ್ಯಕ್ರಮದಲ್ಲಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಲು ಜನರಿಗೆ ತಿಳುವಳಿಕೆ ನೀಡಿದ್ದಾರೆ ಅಷ್ಟೆ ಅಲ್ಲದೆ ಯಾವ ಯಾವ ಇಲಾಖೆ ಸಮಸ್ಯೆಗಳು ಎಷ್ಟಿವೆ ಎಂಬ ಮಾಹಿತಿ ಕಲೆ ಹಾಕಿದರು. ಶನಿವಾರ ಕಾಡಹಳ್ಳಿ ಗ್ರಾಮದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬಹುತೇಕ ಸ್ಥಳೀಯರ ಸಮಸ್ಯೆಗಳು ಬಗೆಹರಿಸುವ ನಿಟ್ಟಿನಲ್ಲಿ ಸಕಲ ಸಿದ್ಧತೆ ನಡೆಸಿರುವ ತಾಲೂಕು ಆಡಳಿತ ಇತರೆ ತಾಲೂಕುಗಳಿಗೆ ಮಾದರಿಯಾಗಿದೆ. ಉಪತಹಶೀಲ್ದಾರ್‌ ಪ್ರವೀಣ್‌ ಸೇರಿದಂತೆ ಕಂದಾಯ ಇಲಾಖೆಯ ಆರ್‌ಐ ಮತ್ತು ವಿಎ ಹಾಗೂ ಸ್ಥಳೀಯ ಗ್ರಾಪಂ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next