ಹಳೇಬೀಡು: ಲೋಕಕಲ್ಯಾಣಕ್ಕಾಗಿ ಮಹಾರುದ್ರಯಾಗದ ಮತ್ತು ಗಿರಿಜಾ ಕಲ್ಯಾಣ ಮಹೋತ್ಸವ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ನಡೆಯುತ್ತಿದ್ದ ಸಮಾರಂಭದ ಕಲ್ಯಾಣ ಮಂಟಪಕ್ಕೆ ತಹಶೀಲ್ದಾರ್ ಮಮತಾ ಅವರು ದಿಢೀರ್ ದಾಳಿ ನಡೆಸಿ ಲಕ್ಷಾಂತರ ರೂ.ಮೌಲ್ಯದ ಉಡುಗೊರೆ ವಸ್ತುಗಳನ್ನ ವೃತ್ತ ನಿರೀಕ್ಷಕ ಶ್ರೀಕಾಂತ್ ಅವರ ನೇತೃತ್ವದಲ್ಲಿ ವಶಪಡಿಸಿಕೊಳ್ಳಲಾಗಿದೆ.
ಪಟ್ಟಣದ ಪಾರ್ವತಮ್ಮ ನಂಜೇಗೌಡ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿದ್ದ ಮಹಾ ರುದ್ರಯಾಗದ ಕಾರ್ಯಕ್ರಮ ದಲ್ಲಿ ಭಾಗವಹಿಸಿದ ಭಕ್ತರಿಗೆ ಉಡುಗೊರೆ ನೀಡಲು ಸಂಗ್ರಹಿಸಿಟ್ಟಿದ್ದ ಅಪಾರ ಪ್ರಮಾಣದ ತೆಂಗಿನಕಾಯಿ, ಸ್ಟೀಲ್ ಬಾಕ್ಸ್ ಇನ್ನಿತರ ವಸ್ತುಗಳನ್ನ ವಶಪಡಿಸಿಕೊಳ್ಳಲಾಗಿದೆ.
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿ, ತಹಶೀಲ್ದಾರ್ ಮಮತಾ ಅವರು ಮಾನ್ಯ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಈಗಾಗಲೇ ಚುನಾವಣೆ ಘೋಷಣೆ ಆಗುವ ಮುನ್ನ ಅಕ್ರಮಗಳನ್ನು ತಡೆಯುವ ದೃಷ್ಟಿಯಿಂದ ನಾವು ಎಲ್ಲಾ ಭಾಗಗಳಲ್ಲಿಯೂ ಕೂಡ ಚೆಕ್ ಪೋಸ್ಟ್‌ಗಳನ್ನು ನಿರ್ಮಿಸಿದ್ದು, ಅಧಿಕಾರಿಗಳ ನೇತೃತ್ವದಲ್ಲಿ ತಪಾಸಣೆ ನಡೆಸಲಾಗುತ್ತಿದೆ. ದಾಖಲೆಯಿಲ್ಲದ ಯಾವುದೇ ವಸ್ತು ಕಂಡು ಬಂದರೂ ವಶಕ್ಕೆ ಪಡೆಯುತ್ತೇವೆ. ಅಕ್ರಮ ತಡೆಗೆ ಕಠಿಣ ಕ್ರಮಕೈಗೊಂಡಿದ್ದೇವೆ. ನಮಗೆ ಸ್ಥಳೀಯರು ನೀಡಿದ ಖಚಿತ ಮಾಹಿತಿ ಆಧಾರಿಸಿ ದಾಳಿ ನಡೆಸಿದ್ದು ಅಪಾರ ಪ್ರಮಾಣದ ದಾಖಲೆ ಇಲ್ಲದ ಉಡುಗೊರೆ ವಸ್ತುಗಳನ್ನ ವಶಪಡಿಸಿಕೊಂಡಿದ್ದೇವೆ ಎಂದರು.
ಉಡುಗೊರೆಗೂ ನನಗೂ ಸಂಬಂಧವಿಲ್ಲ : ಮಹಾ ರುದ್ರಯಾಗ ಮತ್ತು ಗಿರಿಜಾ ಕಲ್ಯಾಣ ಮಹೋತ್ಸವದಲ್ಲಿ ಭಕ್ತರಿಗೆ ನೀಡಲು ತಂದಿದ್ದಂತಹ ಉಡುಗೊರೆಗಳಿಗೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸ್ಥಳೀಯವಾಗಿ ಹಳೇಬೀಡಿನ ಜನರು ಹಮ್ಮಿಕೊಂಡಿರುವ ಧಾರ್ಮಿಕ ಕಾರ್ಯಕ್ರಮ ಇದಾಗಿದ್ದು, ಇದರಲ್ಲಿ ಭಾಗಿಯಾಗಿ ಶುಭ ಕೋರಿದ್ದೇನೆ. ಉಡುಗೊರೆಗೂ ನನಗೂ ಸಂಬಂಧವಿಲ್ಲ ಎಂದು ಬೇಲೂರು ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಹುಲ್ಲಳ್ಳಿ ಸುರೇಶ್ ತಿಳಿಸಿದ್ದಾರೆ.
ಯಾವುದೇ ಧಾರ್ಮಿಕ ಕಾರ್ಯ ಕ್ರಮಗಳನ್ನು ನೆರವೇರಿಸಿದರೂ ಕಾರ್ಯಕ್ರಮದಲ್ಲಿ ಭಾಗವಹಿಸಿದ ಹೆಣ್ಣು ಮಕ್ಕಳಿಗೆ ಅರಿಶಿಣ ಕುಂಕುಮ, ತೆಂಗಿನ ಕಾಯಿ ಹಾಗೂ ಸ್ಟೀಲ್ ಬಾಕ್ಸ್‌ಗಳನ್ನು ನೀಡುತ್ತೇವೆ. ಕಾರ್ಯಕ್ರಮ ನಡೆಸಲು ಗ್ರಾಪಂನಿಂದ ಅನುಮತಿ ಕೂಡ ಪಡೆದಿ ದ್ದೇವೆ. ಈ ದಾಳಿ ರಾಜಕೀಯ ಪ್ರೇರಿತ, ದುರುದ್ದೇಶದಿಂದ ಮಾಡಿರುವ ಪಿತೂರಿ. ನಾವಿದನ್ನ ಧೈರ್ಯವಾಗಿ ಎದುರಿಸುತ್ತೇವೆ.
– ದಿಲೀಪ್, ಕಾರ್ಯಕ್ರಮದ ಆಯೋಜಕ