“ಆಗಷ್ಟೇ ಕಾರಲ್ಲಿ ಬಂದ ಆ ಪತ್ರಕರ್ತೆ, ಸಿಗರೇಟ್ ಸೇದುತ್ತಲೇ ತನ್ನ ಮನೆಯ ಗೇಟ್ ತೆರೆದು ಇನ್ನೇನು ಒಳ ಹೋಗಬೇಕು ಅನ್ನುವ ಹೊತ್ತಿಗೆ, ಬೈಕ್‌ನಲ್ಲಿ ಹೆಲ್ಮೆಟ್ ಧರಿಸಿ ಬಂದ ಇಬ್ಬರು ವ್ಯಕ್ತಿಗಳ ಪೈಕಿ ಒಬ್ಬನು ಬೈಕ್ ಕೆಳಗಿಳಿದು, ಹಿಂದೆ ಮುಂದೆ ನೋಡದೆ ಗನ್ ಹಿಡಿದು ಆ ಪತ್ರಕರ್ತೆಯ ಎದೆಗೆ ಶೂಟ್ ಮಾಡುತ್ತಾನೆ. ನೋಡ ನೋಡುತ್ತಿದ್ದಂತೆಯೇ ಪತ್ರಕರ್ತೆ ನೆಲಕ್ಕುರುಳಿ ಪ್ರಾಣ ಬಿಡುತ್ತಾಳೆ. ಆ ಹಂತಕ ಅಲ್ಲಿಂದ ಪರಾರಿಯಾಗುತ್ತಾನೆ…’
ಇದನ್ನು ಓದಿದಾಗ, ಈ ಘಟನೆ ಎಲ್ಲೋ ನಡೆದ ನೆನಪಿದೆಯಲ್ಲಾ ಎಂಬ ಪ್ರಶ್ನೆ ಎದುರಾಗಬಹುದು. ಆ ಪ್ರಶ್ನೆಗೆ ಉತ್ತರ, ಹೌದು, ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ಕೂಡ ಇದೇ ರೀತಿಯಾಗಿತ್ತು. ಆದರೆ, ಆ ಘಟನೆಯ ಪ್ರಸ್ತಾಪ ಇಲ್ಲೇಕೆ ಎಂಬ ಮತ್ತೂಂದು ಪ್ರಶ್ನೆಯೂ ಕಾಡಬಹುದು. ಅದಕ್ಕೆ ಉತ್ತರ “ಮಿಸ್ಟರ್ ನಟ್ವರ್‌ಲಾಲ್’. ಹೌದು, ತನುಷ್ ಅಭಿನಯದ “ನಟ್ವರ್‌ಲಾಲ್’ ಚಿತ್ರದಲ್ಲಿ ಗೌರಿ ಲಂಕೇಶ್ ಅವರ ಹತ್ಯೆಯಾದಂತಹ ಘಟನೆ ಇಟ್ಟುಕೊಂಡೇ ಚಿತ್ರದಲ್ಲೊಂದು ಅದೇ ರೀತಿಯ ದೃಶ್ಯ ಚಿತ್ರೀಕರಿಸಲಾಗಿದೆ.
ಹಾಗಾದರೆ, “ಮಿಸ್ಟರ್ ನಟ್ವರ್‌ಲಾಲ್’ ಚಿತ್ರಕ್ಕೂ ಗೌರಿ ಲಂಕೇಶ್ ಅವರ ಹತ್ಯೆಯಾದ ಘಟನೆಯ ಚಿತ್ರಣಕ್ಕೂ ಏನಾದರೂ ಸಂಬಂಧವಿದೆಯಾ? ಈ ಕುರಿತು ವಿವರ ಕೊಡುವ ನಾಯಕ ಕಮ್ ನಿರ್ಮಾಪಕ ತನುಷ್, “ಗೌರಿ ಲಂಕೇಶ್ ಅವರ ಪ್ರಕರಣಕ್ಕೂ ಚಿತ್ರದಲ್ಲಿರುವ ದೃಶ್ಯಕ್ಕೂ ಯಾವುದೇ ಸಂಬಂಧವಿಲ್ಲ. ಆದರೆ, ಚಿತ್ರೀಕರಣಕ್ಕೆ ಹೋಗುವ ಮುನ್ನವೇ, ಕಥೆ, ಚಿತ್ರಕಥೆ ರೆಡಿಮಾಡಿಕೊಂಡು ಆ ರೀತಿಯ ದೃಶ್ಯ ಚಿತ್ರಿಸುವ ಯೋಚನೆ ನಿರ್ದೇಶಕರಿಗಿತ್ತು.
ಚಿತ್ರದಲ್ಲಿ ಪತ್ರಕರ್ತೆಯೊಬ್ಬಳನ್ನು ಮನೆಯ ಬಳಿ ಗನ್ ಹಿಡಿದು ಹಂತಕನೊಬ್ಬ ಶೂಟ್ ಮಾಡಿ ಪರಾರಿಯಾಗುವ ದೃಶ್ಯವನ್ನು ರಾತ್ರಿ ವೇಳೆ ಚಿತ್ರೀಕರಿಸಲಾಗಿದೆ. ಯಾಕೆ ಆ ಪತ್ರಕರ್ತೆಯನ್ನು ಆ ಹಂತಕ ಗುಂಡಿಕ್ಕಿ ಹತ್ಯೆ ಮಾಡುತ್ತಾನೆ ಎಂಬುದನ್ನು ಚಿತ್ರದಲ್ಲೇ ನೋಡಬೇಕು. ಹಾಗಂತ ಇಲ್ಲಿ ಯಾವುದೇ ರೀತಿಯ ಗೊಂದಲಗಳಿಲ್ಲ. ಚಿತ್ರದ ಕಥೆ ಕೇಳಿದಂತೆ ಚಿತ್ರೀಕರಿಸಲಾಗಿದೆಯಷ್ಟೇ. ಅದನ್ನಿಲ್ಲಿ ಚಿತ್ರೀಕರಿಸಲು ಮುಖ್ಯ ಕಾರಣ, ಚಿತ್ರದ ನಾಯಕ. “ಮಿಸ್ಟರ್ ನಟ್ವರ್‌ಲಾಲ್’ ಒಬ್ಬ ನಟೋರಿಯಸ್.
ದೊಡ್ಡ ಮೋಸಗಾರ. ಆದರೆ, ಅವನಿಗೂ ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಆದರೆ, ಚಿತ್ರದ ಕಥೆ ಮತ್ತು ನಾಯಕನ ಪಾತ್ರಕ್ಕೆ “ಮಿಸ್ಟರ್ ನಟ್ವರ್‌ಲಾಲ್’ ಶೀರ್ಷಿಕೆ ಸೂಕ್ತವೆನಿಸಿದ್ದರಿಂದ ಹೆಸರಿಡಲಾಗಿದೆ. ಪತ್ರಕರ್ತೆಯನ್ನು ಗುಂಡಿಕ್ಕಿ ಕೊಲ್ಲುವ ದೃಶ್ಯ ಕೂಡ ಕಥೆ, ಚಿತ್ರಕಥೆಗೆ ಪೂರಕವೆನಿಸಿದೆ’ ಎಂಬುದು ತನುಷ್ ಮಾತು. ಪತ್ರಕರ್ತೆಯಾಗಿ “ಟಗರು’ ಸರೋಜ ಖ್ಯಾತಿಯ ತ್ರಿವೇಣಿ ರಾವ್ ನಟಿಸಿದ್ದಾರೆ. ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಲವ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರಕ್ಕೆ ವಿಲಿಯಂ ಡೇವಿಡ್ ಛಾಯಾಗ್ರಹಣವಿದೆ.