ಗ್ರಾಮೀಣ ಭಾಗಗಳಲ್ಲಿ ಹಲವು ಆಚರಣೆಗಳಿವೆ. ಪ್ರತಿಯೊಂದು ಆಚರಣೆಯ ಹಿಂದೆಯೂ ಒಂದೊಂದು ಕಥೆಗಳಿರುತ್ತವೆ. ಅಂತಹ ಆಚರಣೆ ಯೊಂದನ್ನಿಟ್ಟುಕೊಂಡು ಈ ವಾರ ತೆರೆಗೆ ಬಂದಿರುವ ಚಿತ್ರ “ಟಗರುಪಲ್ಯ’. ಹರಕೆಯ ರೂಪದಲ್ಲಿ ಕುರಿಯೊಂದನ್ನು ಬಲಿಕೊಡುವ ಸನ್ನಿವೇಶದಿಂದ ಆರಂಭವಾಗುವ ಸಿನಿಮಾ ಮುಂದೆ ಹಲವು ತಿರುವುಗಳೊಂದಿಗೆ ಸಾಗುತ್ತದೆ.
ಈ ಸಿನಿಮಾದ ಪ್ಲಸ್ ಪಾಯಿಂಟ್ ಎಂದರೆ ಇಡೀ ಸಿನಿಮಾ ಹಳ್ಳಿ ಸೊಗಡಿನಲ್ಲಿ ಮೂಡಿಬಂದಿರುವುದು ಹಾಗೂ ಎಲ್ಲೂ ಬೋರ್ ಆಗದಂತೆ ಹೊಸ ಹೊಸ ವಿಚಾರಗಳೊಂದಿಗೆ ಸಾಗುವುದು. ಈ ಮೂಲಕ “ಟಗರು ಪಲ್ಯ’ ಒಂದು ಫ್ಯಾಮಿಲಿ ಡ್ರಾಮಾವಾಗಿ ಇಷ್ಟವಾಗುತ್ತದೆ.
ಸಿನಿಮಾದ ಬಹುತೇಕ ಕಥೆ ನಡೆಯುವುದು ಒಂದೇ ದಿನದಲ್ಲಿ. ಜೊತೆಗೆ ಲೊಕೇಶನ್ ಕೂಡಾ. ಹೀಗೆ ಸಾಗುವ ಕಥೆಯನ್ನು ನಿರ್ದೇಶಕ ಉಮೇಶ್ ಬೋರ್ ಆಗದಂತೆ ನಿರೂಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆ ಮಟ್ಟಿಗೆ ಮೊದಲ ನಿರ್ದೇಶನದಲ್ಲೇ ಭರವಸೆ ಮೂಡಿಸಿ ದ್ದಾರೆ. ಈ ಸಿನಿಮಾದ ಹೈಲೈಟ್ ಗಳಲ್ಲಿ ಪಾತ್ರಗಳು ಕೂಡಾ ಒಂದು. ಇಲ್ಲಿ ಬರುವ ಪಾತ್ರಗಳು, ಮ್ಯಾನರಿಸಂ ಎಲ್ಲವೂ ಭಿನ್ನವಾಗಿದೆ. ಜೊತೆಗೆ ಚಿತ್ರದ ಸಂಭಾಷಣೆ ಹಾಗೂ ಭಾಷೆ ಬಳಕೆ ಎಲ್ಲವೂ ಕಥೆಗೆ ಪೂರಕವಾಗಿದೆ. ಈ ಮೂಲಕ “ಟಗರು ಪಲ್ಯ’ ಒಂದು ಹೊಸ ಫೀಲ್‌ನೊಂದಿಗೆ ಸಾಗುವ ಸಿನಿಮಾ.
ರಂಗಾಯಣ ರಘು ಹಾಗೂ ತಾರಾ ಪಾತ್ರಗಳು ಸಿನಿಮಾದ ಹೈಲೈಟ್ ಎಂದರೆ ತಪ್ಪಲ್ಲ. ಈ ಚಿತ್ರದಲ್ಲಿ ನಾಗಭೂಷಣ್ ಹಾಗೂ ಅಮೃತಾನಾಯಕಿ. ಇಬ್ಬರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಮೊದಲ ಬಾರಿಗೆ ನಾಯಕಿಯಾಗಿ ತೆರೆಮೇಲೆ ಕಾಣಿಸಿಕೊಂಡಿರುವ ಅಮೃತಾ ಅಚ್ಚುಕಟ್ಟಾಗಿ ನಟಿಸುವ ಮೂಲಕ ಭವಿಷ್ಯದ ಭರವಸೆ ಮೂಡಿಸಿದ್ದಾರೆ. ಉಳಿದಂತೆ ವಾಸುಕಿ ವೈಭವ್, ಶ್ರೀನಾಥ್ ವಸಿಷ್ಠ, ಶರತ್ ಲೋಹಿತಾಶ್ವ, ಹುಲಿಕಾರ್ತಿಕ್, ಬಿರಾದಾರ್ ಸೇರಿದಂತೆ ಇತರರು ತಮ್ಮ ತಮ್ಮ ಪಾತ್ರಗಳಲ್ಲಿ ಮಿಂಚಿದ್ದಾರೆ
ರವಿಪ್ರಕಾಶ್ ರೈ