Advertisement

ಲೋಕಾ ಚುನಾವಣೆಗೆ ತಂತ್ರ ಹೆಣೆಯಲು ಸಮಿತಿ

06:00 AM Oct 09, 2018 | Team Udayavani |

ಬೆಂಗಳೂರು:ರಾಜ್ಯದಲ್ಲಿ ಮೂರು ಲೋಕಸಭಾ ಕ್ಷೇತ್ರಗಳಿಗೆ ಅನಿರೀಕ್ಷಿತ ಉಪ ಚುನಾವಣೆ ಘೋಷಣೆಯಾಗಿರುವುದರ ನಡುವೆಯೇ
ಮುಂಬರುವ ಲೋಕಸಭೆ ಚುನಾವಣೆಗೆ ಈಗಿನಿಂದಲೇ ಕಾರ್ಯತಂತ್ರ ಹೆಣೆಯಲು ರಾಜ್ಯ ಕಾಂಗ್ರೆಸ್‌ನಿಂದ ವಿಧಾನ ಪರಿಷತ್‌ ಸದಸ್ಯ ವಿ.ಎಸ್‌. ಉಗ್ರಪ್ಪ ನೇತೃತ್ವದಲ್ಲಿ  ಕಾರ್ಯತಂತ್ರ (ಸ್ಟ್ರಾಟರ್ಜಿ) ಸಮಿತಿ ರಚಿಸಲಾಗಿದೆ.

Advertisement

ಲೋಕಸಭಾ ಚುನಾವಣೆಗೆ ಪಕ್ಷ ಈಗಿನಿಂದಲೇ ವಿಭಾಗವಾರು ಯಾವ ರೀತಿಯ ಕಾರ್ಯತಂತ್ರಗಳನ್ನು ಅಳವಡಿಸಿಕೊಳ್ಳಬೇಕು ಎನ್ನುವ ಕುರಿತಂತೆ ಮಾಹಿತಿ ಸಂಗ್ರಹಿಸಲು ಪ್ರತಿ ವಿಭಾಗಕ್ಕೂ ಉಸ್ತುವಾರಿಗಳನ್ನು ನೇಮಿಸಲಾಗಿದೆ.

ಮೈಸೂರು ವಿಭಾಗಕ್ಕೆ ಮಾಜಿ ಶಾಸಕ ವಾಸು ಹಾಗೂ ವಿಧಾನ ಪರಿಷತ್‌ ಸದಸ್ಯ ಐವಾನ್‌ ಡಿಸೋಜಾ, ಬೆಳಗಾವಿ ವಿಭಾಗಕ್ಕೆ ಪ್ರಕಾಶ್‌ ರಾಠೊಡ್‌, ಬೆಂಗಳೂರು ವಿಭಾಗಕ್ಕೆ ಎಚ್‌.ಎಂ. ರೇವಣ್ಣ, ಕಲಬುರಗಿ ವಿಭಾಗಕ್ಕೆ ಕೆ.ಸಿ. ಕೊಂಡಯ್ಯ ಅವರನ್ನು ಉಸ್ತುವಾರಿಯಾಗಿ ನೇಮಿಸಲಾಗಿದ್ದು, ವಿಜಯ್‌ ಮತ್ತಿಕಟ್ಟಿ ಸಂಯೋಜಕರಾಗಿ ನೇಮಿಸಲಾಗಿದೆ.

ಸಮಿತಿ ಕೆಲಸ ಏನು ? ತಂತ್ರಗಾರಿಕೆ ಸಮಿತಿ 2018 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಪ್ರತಿ ವಾರ್ಡ್‌ ಮಟ್ಟದಲ್ಲಿ ಕಾಂಗ್ರೆಸ್‌ ಪಕ್ಷದ ಶಕ್ತಿ ಮತ್ತು ದೌರ್ಬಲ್ಯದ ಹಾಗೂ ಇತ್ತೀಚೆಗೆ ನಡೆದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪ್ರತಿ ವಾರ್ಡ್‌ ಮಟ್ಟದಲ್ಲಿ ಆಗಿರುವ ಬದಲಾವಣೆಯ ಬಗ್ಗೆ ಮಾಹಿತಿ ಸಂಗ್ರಹಿಸುವುದು. ಮುಂಬರುವ ಚುನಾವಣೆಯಲ್ಲಿ ವಾರ್ಡ್‌ ಮಟ್ಟದಲ್ಲಿ ಕಾಂಗ್ರೆಸ್‌ ಪರ ಮತ ಸೆಳೆಯಲು ಬೇಕಾದ ತಂತ್ರಗಾರಿಕೆ ಹೆಣೆಯುವ ಜವಾಬ್ದಾರಿ ಈ ತಂಡಕ್ಕೆ ವಹಿಸಲಾಗಿದೆ.

ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ನಗರ ಪ್ರದೇಶದ ಮತದಾರರು ಕಾಂಗ್ರೆಸ್‌ ಬಗ್ಗೆ ಯಾವ ರೀತಿಯ ಮನಸ್ಥಿತಿ ಹೊಂದಿದ್ದಾರೆ. ವಿಧಾನಸಭೆ ಚುನಾವಣೆಗೂ ನಗರ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ನಗರ ಮತದಾರರು ಕಾಂಗ್ರೆಸ್‌ ಬಗ್ಗೆ ಹೊಂದಿರುವ ಅಭಿಪ್ರಾಯವನ್ನು ಜಿಲ್ಲಾ ಹಾಗೂ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಿಂದ ಸಂಗ್ರಹಿಸಿ, ಮುಂದಿನ ಲೋಕಸಭೆ ಚುನಾವಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ನಗರ ಮತದಾರರನ್ನು ಕಾಂಗ್ರೆಸ್‌ ಕಡೆ ಸೆಳೆಯಲು ಈ ಸಮಿತಿ ಕಾರ್ಯತಂತ್ರ ರೂಪಿಸಬೇಕಿದೆ.

Advertisement

ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ರಚಿಸಿರುವ ಈ ಸಮಿತಿ ಬಗ್ಗೆ ಸದಸ್ಯರಿಂದಲೇ ಆಕ್ಷೇಪ ವ್ಯಕ್ತವಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಸ್ಥಳೀಯ ಸಂಸ್ಥೆಗಳ ಚುನಾವಣಾ ಫ‌ಲಿತಾಂಶಕ್ಕೂ ಲೋಕಸಭೆ ಚುನಾವಣೆಗೆ ಸಾಕಷ್ಟು ವ್ಯತ್ಯಾಸ ಇರುವುದರಿಂದ ಅದನ್ನು ಗಮನದಲ್ಲಿಟ್ಟುಕೊಂಡು ತಂತ್ರಗಾರಿಕೆ ಹೆಣೆಯುವುದರಿಂದ ಯಾವುದೇ ಪ್ರಯೋಜನ ಆಗುವುದಿಲ್ಲ ಎಂಬ ಅಭಿಪ್ರಾಯವನ್ನು ಕೆಲವು ಹಿರಿಯ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಮತ್ತೂಂದು ಮೂಲದ ಪ್ರಕಾರ ವಿಧಾನ ಪರಿಷತ್‌ ಸದಸ್ಯರಿಗೂ ಸಚಿವ ಸ್ಥಾನ ನೀಡಬೇಕೆಂದು ಒತ್ತಡ ಹೇರುತ್ತಿರುವವರಿಗೆ ಪರ್ಯಾಯ ಸ್ಥಾನ ಕಲ್ಪಿಸಲು ಈ ಜವಾಬ್ದಾರಿ ವಹಿಸಲಾಗಿದ್ದು, ಮುಂದಿನ ಲೋಕಸಭೆ ಚುನಾವಣೆವರೆಗೂ ಈ ಸಮಿತಿ ಕಾರ್ಯತಂತ್ರ ರೂಪಿಸಬೇಕಿರುವುದರಿಂದ, ಉಪ ಚುನಾವಣೆ ನಂತರ ಸಂಪುಟ ವಿಸ್ತರಣೆಗೆ ಮುಂದಾದರೂ ಸಚಿವಾಕಾಂಕ್ಷಿ ವಿಧಾನ ಪರಿಷತ್‌ ಸದಸ್ಯರನ್ನು ನಯವಾಗಿ ದೂರವಿಡಲು ಈ ಪ್ರಯತ್ನ ಮಾಡಲಾಗಿದೆ ಎಂಬ ಮಾತುಗಳೂ ಕೇಳಿ ಬರುತ್ತಿವೆ. ಪಕ್ಷದ ಅಧ್ಯಕ್ಷರು ನಮ್ಮ ಮೇಲೆ ಭರವಸೆ ಇಟ್ಟು ಈ ಜವಾಬ್ದಾರಿ ವಹಿಸಿದ್ದಾರೆ. ಅಧಿಕಾರ ವಂಚಿತರಾದರೂ ಪಕ್ಷದಲ್ಲಿ ಸಕ್ರೀಯರಾಗಿ ಕೆಲಸ ನಿರ್ವಹಿಸುವ ವಿಶ್ವಾಸದಿಂದ ಈ ಜವಾಬ್ದಾರಿ ವಹಿಸಿದ್ದಾರೆ. ಸಚಿವ ಸ್ಥಾನ ತಪ್ಪಿಸಲು, ಅಥವಾ ಯಾವುದೇ ಟಿಕೆಟ್‌ ತಪ್ಪಿಸಲು ಈ ಕೆಲಸ ವಹಿಸಿಲ್ಲ.
– ವಿ.ಎಸ್‌.ಉಗ್ರಪ್ಪ, ಸ್ಟ್ರಾಟರ್ಜಿ ಸಮಿತಿ ಅಧ್ಯಕ್ಷ.

Advertisement

Udayavani is now on Telegram. Click here to join our channel and stay updated with the latest news.

Next