ಹೊಸದಿಲ್ಲಿ : ಸೌರವ್ ಗಂಗೂಲಿ ಅಧ್ಯಕ್ಷತೆಯಲ್ಲಿ ನಡೆಯುವ ಶನಿವಾರದ ಮಹತ್ವದ ಬಿಸಿಸಿಐ ವರ್ಚುವಲ್ ಸಭೆಯಲ್ಲಿ ಅನೇಕ ವಿಷಯಗಳು ಇತ್ಯರ್ಥಗೊಳ್ಳುವ ಸಾಧ್ಯತೆ ಇದೆ. ಟಿ20 ವಿಶ್ವಕಪ್ ಆತಿಥ್ಯವನ್ನು ಭಾರತದಲ್ಲೇ ಉಳಿಸಿಕೊಳ್ಳುವುದು, 14ನೇ ಐಪಿಎಲ್‌ನ ಉಳಿದ ಪಂದ್ಯಗಳ ದಿನಾಂಕ ಹಾಗೂ ಸ್ಥಳವನ್ನು ನಿಗದಿಗೊಳಿಸುವುದು ಇದರಲ್ಲಿ ಮುಖ್ಯವಾದುದು.
ಹಾಗೆಯೇ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯಾವಳಿ ರದ್ದುಗೊಂಡಿರುವುದರಿಂದ ಕ್ರಿಕೆಟಿಗರಿಗೆ ನೀಡಲಾಗುವ ಸಂಭಾವನೆಯೂ ಇತ್ಯರ್ಥಗೊಳ್ಳಬೇಕಿದೆ.
“ಐಪಿಎಲ್ ದಿನಾಂಕ ಹಾಗೂ ಸ್ಥಳವನ್ನು ನಿಗದಿ ಗೊಳಿಸುವುದು ನಮ್ಮ ಮುಂದಿರುವ ಪ್ರಮುಖ ಅಜೆಂಡಾ. ಇದನ್ನು ಸೆ. 18-20ರ ನಡುವೆ ಆರಂಭಿಸಿ ಅ. 10ಕ್ಕೆ ಕೊನೆಗೊಳಿಸುವುದು ನಮ್ಮ ಮುಂದಿರುವ ಯೋಜನೆ. ಈಗಿನ ಸಾಧ್ಯತೆಯಂತೆ ಇದು ಯುಎಇಯ ಮೂರು ತಾಣಗಳಲ್ಲಿ ನಡೆಯಲಿದೆ’ ಎಂದು ಬಿಸಿಸಿಐ ಉನ್ನತ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ. ಶನಿವಾರ ಇದು ಅಧಿಕೃತಗೊಳ್ಳುವ ಸಾಧ್ಯತೆ ಇದೆ.
ಇದನ್ನೂ ಓದಿ :ಅಂತಿಮ ಏಕದಿನ ಪಂದ್ಯ : ಬಾಂಗ್ಲಾ ವಿರುದ್ಧ ಲಂಕೆಗೆ ಸಮಾಧಾನಕರ ಗೆಲುವು
ಟಿ20 ವಿಶ್ವಕಪ್ ಆಯೋಜನೆ
ಪ್ರತಿಷ್ಠಿತ ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿಯ ಆತಿಥ್ಯವನ್ನು ಭಾರತದಲ್ಲೇ ಉಳಿಸಿಕೊಳ್ಳಬೇಕಾದುದು ಬಿಸಿಸಿಐ ಮುಂದಿರುವ ಮತ್ತೂಂದು ಮಹತ್ವದ ಸವಾಲು. ಶನಿವಾರದ ಸಭೆಯಲ್ಲಿ ಇದನ್ನು ಚರ್ಚಿಸಿ, ಜೂ. ಒಂದರ ಐಸಿಸಿ ಸಭೆಯಲ್ಲಿ ಇದನ್ನು ಮಂಡಿಸಬೇಕಾಗುತ್ತದೆ. ದೇಶದಲ್ಲಿ ಕೊರೊನಾ ಪರಿಸ್ಥಿತಿ ನಿಯಂತ್ರಣಕ್ಕೆ ಬಂದರೆ ಟಿ20 ವಿಶ್ವಕಪ್ ಆಯೋಜನೆಗೆ ಯಾವುದೇ ಅಡ್ಡಿಯಾಗದು ಎಂಬುದೊಂದು ನಂಬಿಕೆ.