Advertisement

ಅಫ್ಘಾನ್‌ ಕೂಡ ಅಪಾಯಕಾರಿ! ಭಾರತಕ್ಕೆ ಮೂರನೇ ಅಗ್ನಿಪರೀಕ್ಷೆ

12:04 AM Nov 03, 2021 | Team Udayavani |

ಅಬುಧಾಬಿ: ಮೊದಲು ಪಾಕಿಸ್ಥಾನ, ಬಳಿಕ ನ್ಯೂಜಿಲ್ಯಾಂಡ್‌ ವಿರುದ್ಧ ಸ್ಪರ್ಧೆಯೇ ನೀಡದ ಸೋತ ಭಾರತಕ್ಕೆ ಬುಧವಾರದ ಸೂಪರ್‌-12 ಮುಖಾಮುಖೀಯಲ್ಲಿ “ಡಾರ್ಕ್‌ ಹಾರ್ಸ್‌’ ಅಫ್ಘಾನಿಸ್ಥಾನದ ಸವಾಲು ಎದುರಾಗಲಿದೆ. ಆದರೆ ಭಾರತವಿಲ್ಲಿ ಆಡುವುದನ್ನು ನೋಡಿದರೆ ಸಾಮಾನ್ಯ ತಂಡಗಳೂ ಅಪಾಯಕಾರಿಯಾಗಿ ಗೋಚರಿಸುತ್ತಿವೆ. ಇದಕ್ಕೆ ಅಫ್ಘಾನ್‌ ಕೂಡ ಹೊರತಲ್ಲ.

Advertisement

ಅಫ್ಘಾನಿಸ್ಥಾನ ಈಗಾಗಲೇ 3 ಪಂದ್ಯಗಳನ್ನಾಡಿದ್ದು, 2 ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದೆ. ಇನ್ನೊಂದು ಗೆಲುವು ಸಾಧಿಸಿದರೆ ನಬಿ ಪಡೆ ನಾಕೌಟ್‌ ಸಾಧ್ಯತೆಯನ್ನು ಹೆಚ್ಚಿಸಿಕೊಳ್ಳಲಿದೆ. ಈಗಾಗಲೇ ಸೋತು ಸುಣ್ಣವಾಗಿರುವ ಭಾರತವನ್ನು ಬಗ್ಗುಬಡಿದು ಇತಿಹಾಸ ನಿರ್ಮಿಸುವುದು ಅಫ್ಘಾನ್‌ ಯೋಜನೆ. ಕೊನೆಯ ಪಂದ್ಯದಲ್ಲಿ ಅದು ನ್ಯೂಜಿಲ್ಯಾಂಡ್‌ ವಿರುದ್ಧ ಸೆಣಸಬೇಕಿದೆ.

ದುರ್ಬಲ ತಂಡಗಳಾದ ಸ್ಕಾಟ್ಲೆಂಡ್‌ ಮತ್ತು ನಮೀಬಿಯಾವನ್ನು ಸುಲಭದಲ್ಲೇ ಸೋಲಿಸಿದ ಅಫ್ಘಾನಿಸ್ಥಾನ, ಇನ್‌ಫಾರ್ಮ್ ಪಾಕಿಸ್ಥಾನವನ್ನೂ ಮಣಿಸುವ ಹಂತಕ್ಕೆ ಬಂದಿತ್ತು. ಆದರೆ ಆಸಿಫ್ ಅಲಿ 19ನೇ ಓವರ್‌ನಲ್ಲಿ 4 ಸಿಕ್ಸರ್‌ ಸಿಡಿಸಿ ಅಫ್ಘಾನ್‌ ಜಯವನ್ನು ತಡೆದಿದ್ದರು.

ಕೂಟಕ್ಕೂ ಮುನ್ನ ಹಾಟ್‌ ಫೇವರಿಟ್‌ ಆಗಿದ್ದ ಟೀಮ್‌ ಇಂಡಿಯಾ ಸದ್ಯ ಕಾಗದಲ್ಲೂ ಬಲಿಷ್ಠವಾಗಿಲ್ಲ. ಕೊಹ್ಲಿ ಪಂದ್ಯ ಗೆಲ್ಲುವುದಿರಲಿ, ಟಾಸ್‌ ಕೂಡ ಗೆಲ್ಲುತ್ತಿಲ್ಲ. ಹನ್ನೊಂದರ ಬಳಗದ ಆಯ್ಕೆಯ ಎಡವಟ್ಟು, ತಂಡವಾಗಿ ಆಡದಿರುವುದು, ಕೊಹ್ಲಿಯೇ ಹೇಳಿದಂತೆ ಎದೆಗಾರಿಕೆ ಇಲ್ಲದಿರುವುದೆಲ್ಲ ತಂಡದ ವೈಫ‌ಲ್ಯಕ್ಕೆ ಕಾರಣಗಳಾಗಿವೆ. ತಂಡದೊಳಗೇನಾದರೂ ರಾಜಕೀಯ ನಡೆಯುತ್ತಿದೆಯೇ ಎಂಬ ಅನುಮಾನವೂ ಕಾಡುತ್ತಿದೆ. ಅಫ್ಘಾನಿಸ್ಥಾನ ವಿರುದ್ಧವೂ ಭಾರತ ಸೋಲದಿರಲಿ ಎಂಬುದು ಕ್ರಿಕೆಟ್‌ ಅಭಿಮಾನಿಗಳ ಪ್ರಾರ್ಥನೆ!

ಅಫ್ಘಾನ್‌ ಎದುರು ಭಾರತದ ಗೇಮ್‌ಪ್ಲ್ರಾನ್‌ ಏನಿರಬಹುದು? ಕುತೂಹಲ ಸಹಜ. ದ್ವಿತೀಯ ಪಂದ್ಯಕ್ಕೆ ತಂಡದ ಆಡುವ ಬಳಗದಲ್ಲಿ ಕೆಲವು ಮಹತ್ವದ ಬದಲಾವಣೆ ಸಂಭವಿಸಿತ್ತು. ಆದರೂ ಅನುಭವಿ ಸ್ಪಿನ್ನರ್‌ ಆರ್‌. ಅಶ್ವಿ‌ನ್‌ ಅವರಿಗೆ ಅವಕಾಶ ಲಭಿಸಿರಲಿಲ್ಲ. ಅಫ್ಘಾನ್‌ ವಿರುದ್ಧ ಅವರು ಕಣಕ್ಕಿಳಿಯಬಹುದು. ರಶೀದ್‌, ಮುಜಿಬುರ್‌ ರೆಹಮಾನ್‌ ಅವರನ್ನೊಳಗೊಂಡ ಅಫ್ಘಾನ್‌ ಕೂಡ ಪ್ರಬಲ ಸ್ಪಿನ್‌ ಸಾಮರ್ಥ್ಯವನ್ನು ಹೊಂದಿದೆ.
ಓಪನಿಂಗ್‌ ಸ್ಥಾನಕ್ಕೆ ರೋಹಿತ್‌ ಶರ್ಮ ಮರಳುವ ಸಾಧ್ಯತೆ ಇದೆ. ಸೂರ್ಯಕುಮಾರ್‌ ಫಿಟ್‌ ಆದರೆ ಇಶಾನ್‌ ಕಿಶನ್‌ ಹೊರಗುಳಿಯಬಹುದು.

Advertisement

ಇದನ್ನೂ ಓದಿ:ಟಿ20 ವಿಶ್ವಕಪ್‌: ಅಜೇಯ ಪಾಕಿಸ್ಥಾನ ಸೆಮಿಫೈನಲಿಗೆ

ಭಾರತಕ್ಕೆ ನಾಕೌಟ್‌ ಕಷ್ಟ
ಅಂದಹಾಗೆ ಭಾರತಕ್ಕೆ ಉಳಿದಿರುವುದು ಮೂರು ಪಂದ್ಯ ಮಾತ್ರ. ಅಫ್ಘಾನ್‌ ಬಳಿಕ ಸ್ಕಾಟ್ಲೆಂಡ್‌ ಮತ್ತು ನಮೀಬಿಯಾವನ್ನು ಎದುರಿಸಬೇಕಿದೆ. ಈ ಮೂರನ್ನೂ ಗೆದ್ದರೆ 6 ಅಂಕ ಸಂಪಾದಿಸಬಹುದು. ರನ್‌ರೇಟ್‌ ಏರಬೇಕಾದರೆ ಅಸಾಮಾನ್ಯ ಜಯವನ್ನೇ ಸಾಧಿಸಬೇಕಿದೆ. ಆದರೂ ಕೊಹ್ಲಿ ತಂಡಕ್ಕೆ ನಾಕೌಟ್‌ ಸಾಧ್ಯವಿಲ್ಲ ಎಂದು ಧೈರ್ಯದಿಂದ ಹೇಳಬಹುದು.

ಇದಕ್ಕೆ ಕಾರಣವೂ ಸ್ಪಷ್ಟ. ಭಾರತವನ್ನು ಮಣಿಸಿರುವ ನ್ಯೂಜಿಲ್ಯಾಂಡ್‌ ಕೂಡ ಈ 3 ತಂಡಗಳನ್ನೇ ಎದುರಿಸಬೇಕಿದೆ. ಕಿವೀಸ್‌ ಪಡೆ ನಮೀಬಿಯಾ, ಸ್ಕಾಟ್ಲೆಂಡ್‌ಗೆ ಮಣಿಯುತ್ತದೆಂದು ಭಾವಿಸುವುದು ತಪ್ಪಾಗುತ್ತದೆ. ಆದರೆ ನ್ಯೂಜಿಲ್ಯಾಂಡ್‌-ಅಫ್ಘಾನಿಸ್ಥಾನ ನಡುವಿನ ಪಂದ್ಯದಲ್ಲಿ ಫೈಟ್‌ ಕಂಡುಬಂದೀತು. ಒಟ್ಟಾರೆಯಾಗಿ, ವಿಲಿಯಮ್ಸನ್‌ ಪಡೆಗೆ ಮುನ್ನಡೆಯುವ ಅವಕಾಶ ಹೆಚ್ಚು.

ಅಫ್ಘಾನ್‌ ವಿರುದ್ಧ ಭಾರತ ಅಜೇಯ
ಟಿ20 ವಿಶ್ವಕಪ್‌ನಲ್ಲಿ ಭಾರತ-ಅಫ್ಘಾನಿಸ್ಥಾನ ನಡುವಿನ 3ನೇ ಮುಖಾಮುಖೀ ಇದಾಗಿದೆ. ಹಿಂದಿನೆರಡೂ ಪಂದ್ಯಗಳಲ್ಲಿ ಭಾರತ ಜಯ ಸಾಧಿಸಿತ್ತು.

ಮೊದಲ ಜಯ ಗಳಿಸಿದ್ದು 2010ರಲ್ಲಿ. ಗ್ರಾಸ್‌ ಐಲೆಟ್‌ನಲ್ಲಿ ನಡೆದ ಈ ಪಂದ್ಯವನ್ನು ಧೋನಿ ಪಡೆ 7 ವಿಕೆಟ್‌ಗಳಿಂದ ಗೆದ್ದಿತ್ತು. ಅಫ್ಘಾನ್‌ ಗಳಿಸಿದ್ದು 8ಕ್ಕೆ 115 ರನ್‌ ಮಾತ್ರ. ಇದು ಆ ಕಾಲದಲ್ಲಿ ಭಾರತದ ವಿರುದ್ಧ ದಾಖಲಾದ ತಂಡವೊಂದರ ಕನಿಷ್ಠ ಗಳಿಕೆ ಆಗಿತ್ತು. ನೆಹ್ರಾ, ಪ್ರವೀಣ್‌ ಕುಮಾರ್‌ ಅವರ ಶಾರ್ಟ್‌ಪಿಚ್‌ ಎಸೆತಗಳಿಗೆ ಅಫ್ಘಾನ್‌ ಬಳಿ ಜವಾಬಿರಲಿಲ್ಲ. 5 ವಿಕೆಟ್‌ಗಳು ಬೌನ್ಸರ್‌ಗೆ ಹಾರಿ ಹೋಗಿದ್ದವು. 14.5 ಓವರ್‌ಗಳಲ್ಲಿ ಭಾರತ ಚೇಸ್‌ ಮಾಡಿತು. ಚೊಚ್ಚಲ ಪಂದ್ಯವಾಡಿದ ಮುರಳಿ ವಿಜಯ್‌ 48 ರನ್‌ ಮಾಡಿ ಮಿಂಚಿದರು.

ಅಫ್ಘಾನ್‌ ವಿರುದ್ಧ ಭಾರತ 2ನೇ ಜಯ ಸಾಧಿಸಿದ್ದು 2012ರ ಕೊಲಂಬೊ ಪಂದ್ಯದಲ್ಲಿ. ಅಂತರ 23 ರನ್‌. ಭಾರತ 5ಕ್ಕೆ 159 ರನ್‌ ಮಾಡಿದರೆ, ಅಫ್ಘಾನ್‌ 19.3 ಓವರ್‌ಗಳಲ್ಲಿ 136ಕ್ಕೆ ಆಲೌಟ್‌ ಆಯಿತು. ಕೊಹ್ಲಿ ಅವರಿಂದ ಈ ಪಂದ್ಯದ ಏಕೈಕ ಅರ್ಧ ಶತಕ ದಾಖಲಾಗಿತ್ತು (50). ಬಾಲಾಜಿ ಮತ್ತು ಯುವರಾಜ್‌ ತಲಾ 3 ವಿಕೆಟ್‌ ಕಿತ್ತರು.

Advertisement

Udayavani is now on Telegram. Click here to join our channel and stay updated with the latest news.

Next