ಪರ್ತ್: ಸಣ್ಣ ಮೊತ್ತ ಪೇರಿಸಿಯೂ ದಿಟ್ಟ ಹೋರಾಟವೊಂದನ್ನು ಪ್ರದರ್ಶಿಸಿದ ಅಫ್ಘಾನಿಸ್ಥಾನ ತಂಡ ಇಂಗ್ಲೆಂಡ್ ಎದುರಿನ ಸೂಪರ್-12 ಪಂದ್ಯದಲ್ಲಿ ವೀರೋಚಿತ ಸೋಲು ಕಂಡಿದೆ. ಇಂಗ್ಲೆಂಡ್ 5 ವಿಕೆಟ್ ಅಂತರದ ಪ್ರಯಾಸದ ಗೆಲುವು ದಾಖಲಿಸಿದೆ.
ಎಡಗೈ ಮಧ್ಯಮ ವೇಗಿ ಸ್ಯಾಮ್ ಕರನ್ ದಾಳಿಗೆ ತತ್ತರಿಸಿದ ಅಫ್ಘಾನಿಸ್ಥಾನ 19.4 ಓವರ್‌ಗಳಲ್ಲಿ 112ಕ್ಕೆ ಕುಸಿಯಿತು. ಕರನ್ 3.4 ಓವರ್‌ಗಳಲ್ಲಿ ಕೇವಲ 10 ರನ್ನಿತ್ತು 5 ವಿಕೆಟ್ ಕೆಡವಿದರು. ಈ ಸಣ್ಣ ಮೊತ್ತವನ್ನು ಇಂಗ್ಲೆಂಡ್ ಸುಲಭದಲ್ಲಿ ಬೆನ್ನಟ್ಟಬಹುದೆಂಬ ನಿರೀಕ್ಷೆ ಇತ್ತು. ಆದರೆ ಅಫ್ಘಾನ್ ಬೌಲರ್ ಅಷ್ಟು ಸುಲಭದಲ್ಲಿ ಪಟ್ಟು ಸಡಿಲಿಸಲಿಲ್ಲ. ಗೆಲುವಿಗಾಗಿ ಬಟ್ಲರ್ ಬಳಗ 18.1 ಓವರ್ ತನಕ ಕಾಯಬೇಕಾಯಿತು. 113 ರನ್ ಮಾಡಲು 5 ವಿಕೆಟ್‌ಗಳನ್ನೂ ಕಳೆದುಕೊಂಡಿತು.
ಚೇಸಿಂಗ್ ವೇಳೆ ಜಾಸ್ ಬಟ್ಲರ್ (18), ಅಲೆಕ್ಸ್ ಹೇಲ್ಸ್ (19), ಡೇವಿಡ್ ಮಲಾನ್ (18), ಬೆನ್ ಸ್ಟೋಕ್ಸ್ (2) ಮತ್ತು ಹ್ಯಾರಿ ಬ್ರೂಕ್ (7) ವಿಕೆಟ್‌ಗಳನ್ನು ಇಂಗ್ಲೆಂಡ್ ಕಳೆದುಕೊಂಡಿತು. ಲಿಯಮ್ ಲಿವಿಂಗ್‌ಸ್ಟೋನ್ ಅಜೇಯ 29 ರನ್ ಹೊಡೆದರು. ಅಫ್ಘಾನ್‌ನ 5 ಬೌಲರ್ ಒಂದೊಂದು ವಿಕೆಟ್ ಹಂಚಿಕೊಂಡರು.
ಅಫ್ಘಾನಿಸ್ಥಾನ ಬ್ಯಾಟಿಂಗ್ ಸರದಿಯಲ್ಲಿ ಇಬ್ರಾಹಿಂ ಜದ್ರಾನ್ ಸರ್ವಾಧಿಕ 32, ಉಸ್ಮಾನ್ ಘನಿ 30 ರನ್ ಮಾಡಿದರು. ಸ್ಯಾಮ್ ಕರನ್ ಹೊರತುಪಡಿಸಿದರೆ ಮಿಂಚಿದ ಇಂಗ್ಲೆಂಡ್ ಸರದಿಯ ಬೌಲರ್‌ಗಳೆಂದರೆ ಬೆನ್ ಸ್ಟೋಕ್ಸ್ ಮತ್ತು ಮಾರ್ಕ್ ವುಡ್. ಇಬ್ಬರೂ ತಲಾ 2 ವಿಕೆಟ್ ಕೆಡವಿದರು. ಉಳಿದೊಂದು ವಿಕೆಟ್ ಕ್ರಿಸ್ ವೋಕ್ಸ್ ಪಾಲಾಯಿತು.
ಸಂಕ್ಷಿಪ್ತ ಸ್ಕೋರ್: ಅಫ್ಘಾನಿಸ್ಥಾನ-19.4 ಓವರ್‌ಗಳಲ್ಲಿ 112 (ಇಬ್ರಾಹಿಂ ಜದ್ರಾನ್ 32, ಉಸ್ಮಾನ್ ಘನಿ 30, ನಜೀಬುಲ್ಲ 13, ಸ್ಯಾಮ್ ಕರನ್ 10ಕ್ಕೆ 5, ಬೆನ್ ಸ್ಟೋಕ್ಸ್ 19ಕ್ಕೆ 2, ಮಾರ್ಕ್ ವುಡ್ 23ಕ್ಕೆ 2). ಇಂಗ್ಲೆಂಡ್-18.1 ಓವರ್‌ಗಳಲ್ಲಿ 5 ವಿಕೆಟಿಗೆ 119 (ಲಿವಿಂಗ್‌ಸ್ಟೋನ್ ಔಟಾಗದೆ 29, ಅಲೆಕ್ಸ್ ಹೇಲ್ಸ್ 19, ಜಾಸ್ ಬಟ್ಲರ್ 18, ಡೇವಿಡ್ ಮಲಾನ್ 18, ನಬಿ 16ಕ್ಕೆ 1, ರಶೀದ್ ಖಾನ್ 17ಕ್ಕೆ 1, ಮುಜೀಬ್ 22ಕ್ಕೆ 1, ಫರೀದ್ ಮಲಿಕ್ 23ಕ್ಕೆ 1, ಫಾರೂಖಿ 24ಕ್ಕೆ 1).
ಪಂದ್ಯಶ್ರೇಷ್ಠ: ಸ್ಯಾಮ್ ಕರನ್.