ಮುಂಬೈ: ಮುಂಬರುವ ಟಿ20 ವಿಶ್ವಕಪ್ ಗೆ ಭಾರತ ತಂಡದ ಆಯ್ಕೆಗೆ ಕ್ಷಣಗಣನೆ ಆರಂಭವಾಗಿದೆ. ಮೇ.1ರೊಳಗೆ ತಂಡವನ್ನು ಪ್ರಕಟಿಸಬೇಕಿದ್ದು, ಅಭಿಮಾನಿಗಳ ಚಿತ್ತ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಅವರತ್ತ ನೆಟ್ಟಿದೆ
ತಂಡದಲ್ಲಿ ಹೆಚ್ಚು ಚರ್ಚೆಗೆ ಒಳಗಾಗಿರುವ ಸ್ಥಾನವೆಂದರೆ ಅದು ವಿಕೆಟ್ ಕೀಪರ್ ಬ್ಯಾಟರ್ ರದ್ದು. ಈ ಒಂದು ಸ್ಥಾನಕ್ಕೆ ಹಲವಾರು ಆಕಾಂಕ್ಷಿಗಳಿದ್ದು, ಎಲ್ಲರೂ ಸ್ಪರ್ಧೆ ಮಾಡುತ್ತಿದ್ದಾರೆ.
ರಿಷಭ್ ಪಂತ್, ಸಂಜು ಸ್ಯಾಮ್ಸನ್, ಕೆಎಲ್ ರಾಹುಲ್, ದಿನೇಶ್ ಕಾರ್ತಿಕ್, ಇಶಾನ್ ಕಿಶನ್, ಜಿತೇಶ್ ಶರ್ಮಾ ಅವರು ವಿಕೆಟ್ ಕೀಪಿಂಗ್ ಸ್ಥಾನಕ್ಕೆ ಪೈಪೋಟಿ ನಡೆಸುತ್ತಿದ್ದಾರೆ. ಇವರಲ್ಲಿ ಜಿತೇಶ್ ಶರ್ಮಾ ಹೊರತುಪಡಿಸಿ ಉಳಿದೆಲ್ಲಾ ಆಟಗಾರರು ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಇದು ಆಯ್ಕೆಗಾರರ ತಲೆನೋವು ಹೆಚ್ಚಿಸಿದೆ.
ರಿಷಭ್ ಪಂತ್ ಅವರು ಮೊದಲ ಆಯ್ಕೆಯ ವಿಕೆಟ್ ಕೀಪರ್ ಆಗಿರಲಿದ್ದಾರೆ ಎಂದು ಈ ಮೊದಲು ವರದಿಯಾಗಿತ್ತು. ಆದರೆ ಇದೀಗ ಪಂತ್ ಬದಲಿಗೆ ರಾಜಸ್ಥಾನ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಅವರಿಗೆ ಅವಕಾಶ ನೀಡಲು ಬಿಸಿಸಿಐ ಮುಂದಾಗಿದೆ ಎನ್ನಲಾಗುತ್ತಿದೆ.
ಇನ್-ಫಾರ್ಮ್ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಬ್ ಪಂತ್ ಎರಡನೇ ಆಯ್ಕೆಯಾಗಬಹುದು ಅಥವಾ ಅವರನ್ನು ಕೈಬಿಡಬಹುದು ಎನ್ನುತ್ತಿದೆ ವರದಿ. ಪ್ರಸ್ತುತ ನಡೆಯುತ್ತಿರುವ ಐಪಿಎಲ್ ನಲ್ಲಿ ಪಂತ್ ಮತ್ತು ಸ್ಯಾಮ್ಸನ್ ಇಬ್ಬರೂ ಅದ್ಭುತ ಪ್ರದರ್ಶನ ನೀಡುತ್ತಿದ್ದು, ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ.