ಮೆಲ್ಬರ್ನ್: ಐಸಿಸಿ ಟಿ20 ವಿಶ್ವಕಪ್ 2022 ಕೂಟದ ಸೂಪರ್ 12 ಹಂತದ ಅಂತಿಮ ಪಂದ್ಯದಲ್ಲಿ ನಿರೀಕ್ಷೆಯಂತೆಯೇ ಭಾರತ ತಂಡವು ಜಯಭೇರಿ ಸಾಧಿಸಿದೆ. ಪಂದ್ಯಕ್ಕೂ ಮೊದಲೇ ಸೆಮಿ ಫೈನಲ್ ಪ್ರವೇಶಿಸಿದ್ದ ಭಾರತ ತಂಡವು ಈ ಜಯದೊಂದಿಗೆ ಗ್ರೂಪ್ -2ರಲ್ಲಿ ಅಗ್ರ ಸ್ಥಾನ ತಲುಪಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡವು ಐದು ವಿಕೆಟ್ ನಷ್ಟಕ್ಕೆ 186 ರನ್ ಗಳಿಸಿದರೆ, ಜಬಾಬಿತ್ತ ಜಿಂಬಾಬ್ವೆ ತಂಡವು 17.2 ಓವರ್ ಗಳಲ್ಲಿ 115 ರನ್ ಗೆ ಆಲೌಟಾಯಿರು. ಈ ಮೂಲಕ ಭಾರತ ತಂಡವು 71 ರನ್ ಗಳ ಭರ್ಜರಿ ಜಯ ಸಾಧಿಸಿದೆ.
ನಾಯಕನಾಗಿ 50 ನೇ ಅಂತಾರಾಷ್ಟ್ರೀಯ ಪಂದ್ಯವಾಡಿದ ರೋಹಿತ್ ಶರ್ಮಾ ಅವರು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದರು. ಆದರೆ ಉತ್ತಮ ಪ್ರದರ್ಶನ ನೀಡದ ರೋಹಿತ್ 15 ರನ್ ಗೆ ಔಟಾದರು. ಆದರೆ ಭರ್ಜರಿಯಾಗಿ ಆಡಿದ ಕೆಎಲ್ ರಾಹುಲ್ ಮತ್ತೊಂದು ಅರ್ಧ ಶತಕ (51 ರನ್) ಬಾರಿಸಿದರು. ವಿರಾಟ್ 26 ರನ್ ಮಾಡಿದರೆ, ಕೊನೆಯಲ್ಲಿ ಸೂರ್ಯಕುಮಾರ್ ಯಾದವ್ ಸ್ಪೋಟಕವಾಗಿ ಬ್ಯಾಟ್ ಬೀಸಿದರು. ಕೇವಲ 25 ಎಸೆತ ಎದುರಿಸಿದ ಸೂರ್ಯ 61 ರನ್ ಬಾರಿಸಿದರು. ನಾಲ್ಕು ಸಿಕ್ಸರ್ ಮತ್ತು ಆರು ಬೌಂಡರಿ ಬಾರಿಸಿದರು.
ಗುರಿ ಬೆನ್ನತ್ತಿದ ಜಿಂಬಾಬ್ವೆ ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳಲಾರಂಭಿಸಿತು. ಮಾಧೆವೆರೆ ಮತ್ತು ಚಕಬ್ವಾ ಶೂನ್ಯಕ್ಕೆ ಔಟಾದರು. ಸಿಕಂದರ ರಜ ಮತ್ತು ರಿಯಾನ್ ಬುರ್ಲ್ ಅವರು ಸ್ವಲ್ಪ ಪ್ರತಿರೋಧ ತೋರಿದರು. ರಜ 34 ರನ್ ಗಳಿಸಿದರೆ ಬುರ್ಲ್ 35 ರನ್ ಬಾರಿಸಿದರು. ಭಾರತದ ಪರ ಅಶ್ವಿನ್ ಮೂರು ವಿಕೆಟ್ ಕಿತ್ತರೆ, ಹಾರ್ದಿಕ್ ಮತ್ತು ಶಮಿ ತಲಾ ಎರಡು ವಿಕೆಟ್ ಕಿತ್ತರು.
ಗ್ರೂಪ್ 2ರಲ್ಲಿ ಅಗ್ರ ಸ್ಥಾನ ಪಡೆದ ಭಾರತ ತಂಡವು ಗುರುವಾರ ಅಡಿಲೇಡ್ ಓವಲ್ ನಲ್ಲಿ ನಡೆಯಲಿರುವ ಎರಡನೇ ಸೆಮಿ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಮೊದಲ ಸೆಮಿ ಫೈನಲ್ ನಲ್ಲಿ ನ್ಯೂಜಿಲ್ಯಾಂಡ್ ಮತ್ತು ಪಾಕಿಸ್ಥಾನ ತಂಡಗಳು ಆಡಲಿದೆ.