Advertisement

ಟಿ20 ವಿಶ್ವಕಪ್‌: ಅಫ್ಘಾನಿಸ್ಥಾನಗೆ ಗೆಲುವಿನ ವಿದಾಯ

10:56 PM Oct 31, 2021 | Team Udayavani |

ದುಬಾೖ: ಅನನುಭವಿ ನಮೀಬಿಯಾವನ್ನು 62 ರನ್ನುಗಳಿಂದ ಮಣಿಸಿದ ಅಫ್ಘಾನಿಸ್ಥಾನ, ತನ್ನ ಮಾಜಿ ನಾಯಕ ಅಸ್ಗರ್ ಅಫ್ಘಾನ್‌ಗೆ ಗೆಲುವಿನ ವಿದಾಯ ಹೇಳಿತು. ಇದರೊಂದಿಗೆ ಟಿ20 ವಿಶ್ವಕಪ್‌ನಲ್ಲಿ ಎರಡನೇ ಜಯವನ್ನು ಸಾಧಿಸಿದ ಮೊಹಮ್ಮದ್‌ ನಬಿ ಪಡೆ ತನ್ನ ದ್ವಿತೀಯ ಸ್ಥಾನವನ್ನು ಇನ್ನಷ್ಟು ಗಟ್ಟಿಗೊಳಿಸಿತು.

Advertisement

ರವಿವಾರದ ದುಬಾೖ ಮೇಲಾಟದಲ್ಲಿ ಟಾಸ್‌ ಗೆದ್ದ ಅಫ್ಘಾನಿಸ್ಥಾನ 5 ವಿಕೆಟಿಗೆ 160 ರನ್‌ ಗಳಿಸಿ ಸವಾಲೊಡ್ಡಿತು. ನಮೀಬಿಯಾಕ್ಕೆ ಮೂರಂಕೆಯ ಗಡಿಯನ್ನೂ ತಲುಪಲಾಗಲಿಲ್ಲ. 9 ವಿಕೆಟಿಗೆ 98 ರನ್‌ ಮಾಡಿತು.

ಅಫ್ಘಾನಿಸ್ಥಾನ ಮೊದಲ ಪಂದ್ಯದಲ್ಲಿ ಸ್ಕಾಟ್ಲೆಂಡ್‌ಗೆ ಸೋಲುಣಿಸಿತ್ತು. ಬಳಿಕ ಪಾಕಿಸ್ಥಾನಕ್ಕೆ ಶರಣಾಯಿತು. ನಮೀಬಿಯಾ ಎದುರಿನ ಗೆಲುವು ನಿರೀಕ್ಷಿತವಾಗಿತ್ತು. ಅಫ್ಘಾನ್‌ ರನ್‌ರೇಟ್‌ ಈಗ ಪ್ಲಸ್‌ 3.097ರಷ್ಟಿದೆ. ಮುಂದೆ ಭಾರತ ಮತ್ತು ನ್ಯೂಜಿಲ್ಯಾಂಡ್‌ ತಂಡಗಳ ಕಠಿನ ಸವಾಲು ಅಫ್ಘಾನಿಸ್ಥಾನದ ಮುಂದಿದೆ. ಇನ್ನೊಂದೆಡೆ ನಮೀಬಿಯಾ 2 ಪಂದ್ಯಗಳಲ್ಲಿ ಅನುಭವಿಸಿದ ಮೊದಲ ಸೋಲು ಇದಾಗಿದೆ.

ಸಂಕ್ಷಿಪ್ತ ಸ್ಕೋರ್‌: ಅಫ್ಘಾನಿಸ್ಥಾನ-5 ವಿಕೆಟಿಗೆ 160 (ಶಾಜಾದ್‌ 45, ನಬಿ ಔಟಾಗದೆ 32, ಅಫ್ಘಾನ್‌ 31, ಈಟನ್‌ 21ಕ್ಕೆ 2, ಟ್ರಂಪಲ್‌ಮ್ಯಾನ್ 34ಕ್ಕೆ 2). ನಮೀಬಿಯಾ-9 ವಿಕೆಟಿಗೆ 98 (ವೀಸ್‌ 26, ಟ್ರಂಪಲ್‌ಮ್ಯಾನ್ ಔಟಾಗದೆ 12, ಎರಾಸ್ಮಸ್‌ 12, ಹಮೀದ್‌ 9ಕ್ಕೆ 3, ನವೀನ್‌ 26ಕ್ಕೆ 3, ನೈಬ್‌ 19ಕ್ಕೆ 2). ಪಂದ್ಯಶ್ರೇಷ್ಠ: ನವೀನ್‌ ಉಲ್‌ ಹಕ್‌.

ಕೊನೆಯ ಪಂದ್ಯ ಆಡಿದ ಅಸ್ಗರ್ ಅಫ್ಘಾನ್‌
ನಮೀಬಿಯಾ ವಿರುದ್ಧದ ಪಂದ್ಯಕ್ಕೂ ಮುನ್ನ ಅಫ್ಘಾನಿಸ್ಥಾನ ತಂಡದ ಮಾಜಿ ನಾಯಕ ಅಸ್ಗರ್ ಅಫ್ಘಾನ್‌ ತಮ್ಮ ವಿದಾಯದ ಸುದ್ದಿಯನ್ನು ಬಿತ್ತರಿಸಿ ಅಚ್ಚರಿ ಮೂಡಿಸಿದರು. ಇದೇ ತನ್ನ ಕೊನೆಯ ಅಂತಾರಾಷ್ಟ್ರೀಯ ಕ್ರಿಕೆಟ್‌ ಪಂದ್ಯ ಎಂಬುದಾಗಿ ಘೋಷಿಸಿದರು.

Advertisement

ಇದನ್ನೂ ಓದಿ:ನ. 5ಕ್ಕೆ ಪ್ರಧಾನಿ ಉತ್ತರಾಖಂಡ ಭೇಟಿ : ಕಾರ್ಯಕ್ರಮ ರಂಗು ಹೆಚ್ಚಿಸಲಿರುವ ಸಾಧು-ಸಂತರು

ಕಳೆದೊಂದು ದಶಕದಿಂದ ಅಫ್ಘಾನಿಸ್ಥಾನ ತಂಡದ ಆಧಾರಸ್ತಂಭವೇ ಆಗಿದ್ದ ಬಲಗೈ ಬ್ಯಾಟ್ಸ್‌ಮನ್‌ ಅಸ್ಗರ್ ಅಫ್ಘಾನ್‌ ಮೊದಲು ಅಸ್ಗರ್ ಸ್ತಾನಿಕ್‌ಜಾಯ್‌ ಎಂಬ ಹೆಸರಿನಿಂದ ಗುರುತಿಸಲ್ಪಟ್ಟಿದ್ದರು. ಇವರು 6 ಟೆಸ್ಟ್‌, 115 ಏಕದಿನ ಹಾಗೂ 75 ಟಿ20 ಪಂದ್ಯಗಳ ಅನುಭವಿ. ಈ 3 ಮಾದರಿಯ ಪಂದ್ಯಗಳಲ್ಲಿ ಕ್ರಮವಾಗಿ 440 ರನ್‌, 2,467 ಹಾಗೂ 1,358 ರನ್‌ ಬಾರಿಸಿದ್ದಾರೆ. ಇದು 2 ಶತಕಗಳನ್ನು ಒಳಗೊಂಡಿದೆ. ಬಾರಿಸಿದ ಒಟ್ಟು ಅರ್ಧ ಶತಕಗಳ ಸಂಖ್ಯೆ 19. ರವಿವಾರದ ಅಂತಿಮ ಇನ್ನಿಂಗ್ಸ್‌ನಲ್ಲಿ 31 ರನ್‌ ಮಾಡಿದರು. ಅಸYರ್‌ 2009ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಪದಾರ್ಪಣೆ ಮಾಡಿದ್ದರು. ಅವರ 12 ವರ್ಷಗಳ ಕ್ರಿಕೆಟ್‌ ಬದುಕಿಗೆ ರವಿವಾರ ತೆರೆ ಬಿತ್ತು.

ಪಾಕ್‌ ವಿರುದ್ಧ ಸೋತ ಆಘಾತ
ಅಸ್ಗರ್ ಅಫ್ಘಾನ್‌ ಟಿ20 ವಿಶ್ವಕಪ್‌ ನಡುವಲ್ಲೇ ಕ್ರಿಕೆಟಿಗೆ ನಿವೃತ್ತಿ ಘೋಷಿಸಿದ್ದು ಅಚ್ಚರಿಯೆನಿಸಿದೆ. ಇನ್ನಿಂಗ್ಸ್‌ ಮುಗಿದ ಬಳಿಕ ಪ್ರತಿಕ್ರಿಯಿಸಿದ ಅಫ್ಘಾನ್‌ ಇದಕ್ಕೆ ಕಾರಣ ನೀಡಿದರು. ಪಾಕಿಸ್ಥಾನ ವಿರುದ್ಧ ಅನುಭವಿಸಿದ ಆಘಾತಕಾರಿ ಸೋಲಿನಿಂದ ಬೇಸತ್ತು ತಾನು ಈ ನಿರ್ಧಾರಕ್ಕೆ ಬಂದಿದ್ದೇನೆ ಎಂದಿದ್ದಾರೆ.

“ಪಾಕ್‌ ಎದುರಿನ ಸೋಲು ನಮ್ಮೆಲ್ಲರಿಗೂ ಬಹಳ ಆಘಾತ ತಂದೊಡ್ಡಿದೆ. ಕಿರಿಯ ಆಟಗಾರರಿಗೂ ನಾನು ದಾರಿ ಬಿಡಬೇಕಿದೆ. ಇದಕ್ಕೆ ಇದೇ ಸೂಕ್ತ ಸಮಯ ಎಂದು ಭಾವಿಸಿದ್ದೇನೆ’ ಎಂದು ಅಫ್ಘಾನ್‌ ಭಾವುಕರಾಗಿ ನುಡಿದರು.

Advertisement

Udayavani is now on Telegram. Click here to join our channel and stay updated with the latest news.

Next