ಬ್ರಿಜ್‌ಟೌನ್: ಹಾಲಿ ಚಾಂಪಿಯನ್ ಇಂಗ್ಲೆಂಡ್ ಶನಿವಾರದ ಟಿ20 ವಿಶ್ವಕಪ್ ಮುಖಾಮುಖೀಯಲ್ಲಿ ಸಾಂಪ್ರದಾಯಿಕ ಎದುರಾಳಿ ಆಸ್ಟ್ರೇಲಿಯವನ್ನು ಎದುರಿಸಲಿದ್ದು, ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಸ್ಕಾಟ್ಲೆಂಡ್ ಎದುರಿನ ಪಂದ್ಯ ಮಳೆಯಿಂದ ರದ್ದುಗೊಂಡು ಅಂಕವನ್ನು ಹಂಚಿಕೊಂಡಿರುವುದೇ ಇದಕ್ಕೆ ಕಾರಣ.
ಇನ್ನೊಂದೆಡೆ ಒಮಾನ್ ವಿರುದ್ಧ 39 ರನ್ನುಗಳಿಂದ ಗೆದ್ದು ಬಂದಿರುವ ಆಸ್ಟ್ರೇಲಿಯ ಈಗಾಗಲೇ ಖಾತೆ ತೆರೆದಿದೆ. ಬಟ್ಲರ್ ಪಡೆಯನ್ನೂ ಮಣಿಸಿದರೆ ಆಸೀಸ್ ಮುನ್ನಡೆ ಸುಗಮಗೊಳ್ಳಲಿದೆ.
ಸ್ಕಾಟ್ಲೆಂಡ್ ವಿರುದ್ಧ ಇಂಗ್ಲೆಂಡ್ ತಂಡದ ಬೌಲಿಂಗ್ ಸಂಪೂರ್ಣ ವೈಫಲ್ಯ ಕಂಡಿತ್ತು. ವುಡ್, ಆರ್ಚರ್, ಜೋರ್ಡನ್, ಅಲಿ, ರಶೀದ್ ಅವರನ್ನೊಳಗೊಂಡ ಬೌಲಿಂಗ್ ಪಡೆಗೆ ಒಂದೂ ವಿಕೆಟ್ ಉರುಳಿಸಲಾಗಿರಲಿಲ್ಲ. ಸ್ಕಾಟ್ಲೆಂಡ್ 10 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 90 ರನ್ ಪೇರಿಸಿತ್ತು. ಇಂಗ್ಲೆಂಡ್ ಬ್ಯಾಟಿಂಗ್ ಫಾರ್ಮ್ ಅರಿಯಲು ಅವಕಾಶ ಲಭಿಸಿರಲಿಲ್ಲ.
ಒಮಾನ್ ವಿರುದ್ಧ ಆಸ್ಟ್ರೇಲಿಯದ ಪ್ರಧಾನ ವೇಗಿ ಪ್ಯಾಟ್ ಕಮಿನ್ಸ್ ಆಡಿರಲಿಲ್ಲ. ಇವರ ಬದಲು ಅವಕಾಶ ಪಡೆದ ನಥನ್ ಎಲ್ಲಿಸ್ ಗಮನಾರ್ಹ ಪ್ರದರ್ಶನ ನೀಡಿದ್ದರು. ಇಂಗ್ಲೆಂಡ್ ವಿರುದ್ಧ ಕಮಿನ್ಸ್ ಪ್ರವೇಶವಾಗಲಿದೆ. ಆಸೀಸ್ ಬ್ಯಾಟಿಂಗ್ ವಿಭಾಗದ ಕುರಿತು ಹೇಳುವುದಾದರೆ, ಗ್ಲೆನ್ ಮ್ಯಾಕ್ಸ್‌ವೆಲ್ ಇನ್ನೂ ಐಪಿಎಲ್ ಗುಂಗಿನಿಂದ ಹೊರಬಂದಂತಿಲ್ಲ. ಅಲ್ಲಿನಂತೆ ಇಲ್ಲಿಯೂ “ಗೋಲ್ಡನ್ ಡಕ್’ ನಂಟನ್ನು ಮುಂದುವರಿಸಿದ್ದಾರೆ! ಹೆಡ್ ಕೂಡ ಇದಕ್ಕೆ ಹೊರತಲ್ಲ. ಆದರೆ ಹಿರಿಯ ಬ್ಯಾಟರ್‌ಗಳಾದ ವಾರ್ನರ್, ಸ್ಟೋಯಿನಿಸ್ ಅರ್ಧ ಶತಕ ಬಾರಿಸಿರುವುದು ಸಮಾಧಾನಕರ ಸಂಗತಿ.