Advertisement

T20 World Cup;ಕ್ರಿಕೆಟ್‌ ಅಚ್ಚರಿಯ ತವಕದಲ್ಲಿ ಅಮೆರಿಕ

11:11 PM Jun 01, 2024 | Team Udayavani |

ಡಲ್ಲಾಸ್‌: ಬೇಸ್‌ಬಾಲ್‌ ನಾಡಾದ ಅಮೆರಿಕದಲ್ಲಿ ಇನ್ನೊಂದು ತಿಂಗಳ ಕಾಲ ಬರೀ ಕ್ರಿಕೆಟ್‌ ಗಾಳಿಯೇ ಬೀಸಲಿದೆ. ಅದೂ ಟಿ20 ವಿಶ್ವಕಪ್‌ ಹವಾ. ವೆಸ್ಟ್‌ ಇಂಡೀಸ್‌ ಜತೆಗೆ 9ನೇ ಚುಟುಕು ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯ ಆತಿಥ್ಯ ವಹಿಸಿರುವ ಅಮೆರಿಕಕ್ಕೆ ಇದೊಂದು ನೂತನ, ವಿಶಿಷ್ಟ ಹಾಗೂ ಅಪೂರ್ವ ಅನುಭವ.

Advertisement

ಕ್ರಿಕೆಟ್‌ನಲ್ಲೂ ಅಚ್ಚರಿ ಮೂಡಿಸಬೇಕೆಂಬ ತವಕ ಅಮೆರಿಕದ್ದು. ಇದೇ ಮೊದಲ ಬಾರಿ ವಿಶ್ವಕಪ್‌ ಅಂಗಳದಲ್ಲಿ ಕಾಣಿಸಿರುವ ಅಮೆರಿಕ, ಉದ್ಘಾಟನ ಪಂದ್ಯದಲ್ಲಿ ಕೆನಡಾವನ್ನು ಎದುರಿಸಲಿದೆ. ಅಮೆರಿಕದಂತೆ ಕೆನಡಾ ಕೂಡ ಮೊದಲ ಬಾರಿಗೆ ವಿಶ್ವಕಪ್‌ ಆಡುತ್ತಿದೆ.

ವಿದೇಶಿಗರದೇ ಸಿಂಹಪಾಲು
ಅಮೆರಿಕ ಮತ್ತು ಕೆನಡಾ ತಂಡಗಳ ಕ್ರಿಕೆಟ್‌ ಅನುಭವ ಅಷ್ಟಕ್ಕಷ್ಟೇ. ಆದರೆ ಎರಡೂ ತಂಡಗಳಲ್ಲಿ ವಿದೇಶಿ ಕ್ರಿಕೆಟಿಗರೇ ಬಹಳಷ್ಟು ಸಂಖ್ಯೆಯಲ್ಲಿ ತುಂಬಿಕೊಂಡಿರುವುದರಿಂದ ಪಂದ್ಯ ರೋಚಕವಾಗಿ ಸಾಗುವುದರಲ್ಲಿ ಅನುಮಾನವಿಲ್ಲ.

ಈ ಎರಡೂ ತಂಡಗಳ ನಾಯಕರು ವಿದೇಶಿ ಮೂಲದವರು. ಅಮೆರಿಕದ ಸಾರಥಿ ಮೋನಾಕ್‌ ಪಟೇಲ್‌ ಮೂಲತಃ ಗುಜರಾತ್‌ನ ಆನಂದ್‌ನವರು. ಇವರು ವಿಕೆಟ್‌ ಕೀಪರ್‌-ಬ್ಯಾಟರ್‌. 2016ರಿಂದಲೇ ಅಮೆರಿಕದಲ್ಲಿ ನೆಲೆಸಿದ್ದಾರೆ. ಅರ್ಹತಾ ಸುತ್ತಿನಲ್ಲಿ ಅಮೆರಿಕ ಪರ ಅತ್ಯಧಿಕ 208 ರನ್‌ ಮಾಡಿದ ಹೆಗ್ಗಳಿಕೆ ಇವರದು.

ಒಂದು ಕಾಲದಲ್ಲಿ ನ್ಯೂಜಿಲ್ಯಾಂಡ್‌ ಪರ ಹೊಡಿಬಡಿ ಆಟವಾಡುತ್ತಿದ್ದ ಕೋರಿ ಆ್ಯಂಡರ್ಸನ್‌ ಈಗ ಅಮೆರಿಕ ತಂಡದ ಪ್ರಮುಖ ಆಟಗಾರ. ಅಮೆರಿಕದ ಕೋಚ್‌ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಸ್ಟುವರ್ಟ್‌ ಲಾ. ಅಮೆರಿಕವೀಗ ಪೂರ್ಣ ಪ್ರಮಾಣದ ಐಸಿಸಿ ಸದಸ್ಯತ್ವ ಹೊಂದಿದ ಬಾಂಗ್ಲಾದೇಶದ ವಿರುದ್ಧ ಟಿ20 ಸರಣಿ ಗೆದ್ದ ಮೂಡ್‌ನ‌ಲ್ಲಿದೆ. ಇದಕ್ಕೂ ಮುನ್ನ ಕೆನಡಾವನ್ನೂ 4-0 ಅಂತರದಿಂದ ಹಿಮ್ಮೆಟ್ಟಿಸಿತ್ತು.

Advertisement

ಮುಂಬೈ ಮತ್ತು ರಾಜಸ್ಥಾನ್‌ ರಾಯಲ್ಸ್‌ ತಂಡದ ಮಾಜಿ ಎಡಗೈ ಸ್ಪಿನ್ನರ್‌ ಹರ್ಮೀತ್‌ ಸಿಂಗ್‌, ಡೆಲ್ಲಿ ಹಾಗೂ ಆರ್‌ಸಿಬಿಯ ಮಾಜಿ ಬ್ಯಾಟರ್‌ ಮಿಲಿಂದ್‌ ಕುಮಾರ್‌ ಕೂಡ ಅಮೆರಿಕ ತಂಡದಲ್ಲಿದ್ದಾರೆ. ಯುಎಸ್‌ಎ ಪರ ಅತ್ಯಧಿಕ ಪಂದ್ಯಗಳನ್ನಾಡಿರುವ ಸೌರಭ್‌ ನೇತ್ರಾವಲ್ಕರ್‌, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯಧಿಕ ರನ್‌ ಬಾರಿಸಿರುವ ಆರಂಭಕಾರ ಸ್ಟೀವನ್‌ ಟೇಲರ್‌ ಮತ್ತಿಬ್ಬರು ಹೀರೋಗಳು. ಕೆನಡಾ ಪರ 18 ಟಿ20 ಪಂದ್ಯ ಆಡಿರುವ ಆಲ್‌ರೌಂಡರ್‌ ನಿತೀಶ್‌ ಕುಮಾರ್‌ ಈಗ ಯುಎಸ್‌ಎ ಪಾಳೆಯದಲ್ಲಿದ್ದಾರೆ.

ಪಾಕ್‌ ಮೂಲದ ನಾಯಕ
ಕೆನಡಾದ ನಾಯಕ, ಎಡಗೈ ಸ್ಪಿನ್ನರ್‌ ಆಗಿರುವ ಸಾದ್‌ ಬಿನ್‌ ಜಾಫ‌ರ್‌ ಪಾಕಿಸ್ಥಾನದವರು. ಅಗ್ರ ಕ್ರಮಾಂಕದ ಬ್ಯಾಟರ್‌ ಆರನ್‌ ಜಾನ್ಸನ್‌, ಎಡಗೈ ಸೀಮರ್‌ ಕಲೀಂ ಸಾನಾ ಮೇಲೆ ತಂಡ ಹೆಚ್ಚಿನ ನಿರೀಕ್ಷೆ ಇರಿಸಿದೆ.

ತಂಡಗಳು
ಅಮೆರಿಕ: ಮೋನಾಕ್‌ ಪಟೇಲ್‌ (ನಾಯಕ), ಆರನ್‌ ಜೋನ್ಸ್‌, ಆ್ಯಂಡ್ರೀಸ್‌ ಗೌಸ್‌, ಕೋರಿ ಆ್ಯಂಡರ್ಸನ್‌, ಅಲಿ ಖಾನ್‌, ಹರ್ಮೀತ್‌ ಸಿಂಗ್‌, ಜೆಸ್ಸಿ ಸಿಂಗ್‌, ಮಿಲಿಂದ್‌ ಕುಮಾರ್‌, ನಿಸರ್ಗ್‌ ಪಟೇಲ್‌, ನಿತೀಶ್‌ ಕುಮಾರ್‌, ನೊಶ್ತುಷ್‌ ಕೆಂಜಿಗೆ, ಸೌರಭ್‌ ನೇತ್ರಾವಲ್ಕರ್‌, ಶೇಡ್ಲಿ ವಾನ್‌ ಶಾಕ್‌ವಿಕ್‌, ಸ್ಟೀವನ್‌ ಟೇಲರ್‌, ಶಯಾನ್‌ ಜಹಾಂಗಿರ್‌.

ಕೆನಡಾ: ಸಾದ್‌ ಬಿನ್‌ ಜಾಫ‌ರ್‌ (ನಾಯಕ), ಆರನ್‌ ಜಾನ್ಸನ್‌, ರವೀಂದರ್‌ಪಾಲ್‌ ಸಿಂಗ್‌, ನವನೀತ್‌ ಧಾಲೀವಾಲ್‌, ಕಲೀಂ ಸಾನಾ, ದಿಲಾನ್‌ ಹೆಲಿಜರ್‌, ಜೆರೆಮಿ ಗಾರ್ಡನ್‌, ನಿಖೀಲ್‌ ದತ್ತ, ಪರ್ಗತ್‌ ಸಿಂಗ್‌, ನಿಕೋಲಸ್‌ ಕಿರ್ಟನ್‌, ರಯ್ನಾಖಾನ್‌ ಪಠಾಣ್‌, ಜುನೇದ್‌ ಸಿದ್ದಿಕಿ, ದಿಲ್‌ಪ್ರೀತ್‌ ಬಾಜ್ವಾ, ಶ್ರೇಯಸ್‌ ಮೋವ, ರಿಶಿವ್‌ ಜೋಶಿ.

ಅಮೆರಿಕ ತಂಡದಲ್ಲಿ ಮೂಡಿಗೆರೆ ಕ್ರಿಕೆಟಿಗ!
ವಿದೇಶಿ ಗರಿಂದಲೇ ತುಂಬಿರುವ ಅಮೆರಿಕ ತಂಡದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಆಟಗಾರನೂ ಇದ್ದಾರೆ! ಇವರೇ ನೋಸ್ತುಶ್‌ ಕೆಂಜಿಗೆ. ಮೂಡಿಗೆರೆ ತಾಲೂಕಿನ ಕೆಂಜಿಗೆ ಗ್ರಾಮದವರು.

ನೋಸ್ತುಶ್‌ ಜನನ ಅಮೆರಿಕದಲ್ಲಿ ಆಯಿತು (1991). ಆಗ ಇವರ ತಂದೆ ಪ್ರದೀಪ್‌ ಕೆಂಜಿಗೆ ಅರಿಝೋನಾದಲ್ಲಿ ಉದ್ಯೋಗದಲ್ಲಿದ್ದರು. ತನ್ನ ಮಗನಿಗೊಂದು ಸೂಕ್ತ ಹೆಸರು ತಿಳಿಸಿ ಎಂದು ಅಲ್ಲಿನವರಲ್ಲಿ ಕೇಳಿದಾಗ “ನೋಸ್ತುಶ್‌’ ಎಂದು ಸೂಚಿಸಿದರು. ಇದರರ್ಥ “ಮರುಭೂಮಿಯ ಸಿಂಹ’.

ನೋಸ್ತುಶ್‌ ಮೂಡಿಗೆರೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ನಡೆಸಿದ ಬಳಿಕ ಬೆಂಗಳೂರಿನ ದಯಾನಂದ ಸಾಗರ್‌ ಕಾಲೇಜ್‌ನಲ್ಲಿ ಎಂಜಿನಿಯರಿಂಗ್‌ ಪದವಿ ಪಡೆದರು. ಸ್ವಸ್ತಿಕ್‌ ಕ್ರಿಕೆಟರ್ ಕ್ಲಬ್‌ ಪರ ಕ್ರಿಕೆಟ್‌ ಆಡಿ, ಬಳಿಕ ಉದ್ಯೋಗ ಸಲುವಾಗಿ ಅಮೆರಿಕಕ್ಕೆ ತೆರಳಿದರು. ಎಡಗೈ ಸ್ಪಿನ್ನರ್‌ ಹಾಗೂ ಬಲಗೆ ಬ್ಯಾಟರ್‌ ಆಗಿರುವ ನೋಸ್ತುಶ್‌, 40 ಏಕದಿನ ಪಂದ್ಯಗಳಿಂದ 38 ವಿಕೆಟ್‌, 4 ಟಿ20 ಪಂದ್ಯಗಳಿಂದ 4 ವಿಕೆಟ್‌ ಕೆಡವಿದ್ದಾರೆ.

30 ವರ್ಷಗಳ ಹಿಂದಿನ ಫಿಫಾ ಆತಿಥ್ಯದ ನೆನಪು
ಕ್ರಿಕೆಟಿನ ಗಂಧ ಗಾಳಿ ಅರಿಯದ ಅಮೆರಿಕಕ್ಕೆ ಟಿ20 ವಿಶ್ವಕಪ್‌ ಆತಿಥ್ಯ ನೀಡಿದ್ದಕ್ಕೆ ಕೆಲವೆಡೆ ಅಸಮಾಧಾನ ವ್ಯಕ್ತವಾಗಿದೆ. ಇದಕ್ಕೆ ಸಮಾ ಧಾನಕರ ಉತ್ತರ ಲಭಿಸಬೇಕಾದರೆ ಸರಿಯಾಗಿ 30 ವರ್ಷ ಹಿಂದೆ ಪಯಣಿಸಬೇಕು.

1994ರಲ್ಲಿ ಅಮೆರಿಕಕ್ಕೆ ಫಿಫಾ ವಿಶ್ವಕಪ್‌ ಫ‌ುಟ್‌ಬಾಲ್‌ ಆತಿಥ್ಯ ಲಭಿಸಿದಾಗಲೂ ಇಂಥದೇ ಅಭಿಪ್ರಾಯ ಸಾರ್ವತ್ರಿಕವಾಗಿತ್ತು. ಆಗ ಅಮೆರಿಕದಲ್ಲಿ ಫ‌ುಟ್‌ಬಾಲ್‌ ಜನಪ್ರಿಯ ವಾಗಿರಲಿಲ್ಲ. ಆದರೆ ಒಂದು ತಿಂಗಳ ಫ‌ುಟ್‌ಬಾಲ್‌ ವಿಶ್ವಕಪ್‌ ನಿರೀಕ್ಷೆಗೂ ಮೀರಿದ ಯಶಸ್ಸು ಸಾಧಿಸಿತು. ಪಂದ್ಯಕ್ಕೆ ಸರಾಸರಿ 68,991 ವೀಕ್ಷಕರಂತೆ ಒಟ್ಟು 3,587,538 ವೀಕ್ಷಕರು ಪಂದ್ಯಾವಳಿಯನ್ನು ಕಣ್ತುಂಬಿಸಿಕೊಂಡು ದಾಖಲೆಯನ್ನೇ ಬರೆದಿದ್ದರು. ಇದೇ ಜನಪ್ರಿಯತೆ ಕ್ರಿಕೆಟಿಗೂ ಯಾಕೆ ಸಿಗಬಾರದು ಎಂಬ ನಂಬಿಕೆಯಿಂದಲೇ ಐಸಿಸಿ ಅಮೆರಿಕಕ್ಕೆ ವಿಶ್ವಕಪ್‌ ಆತಿಥ್ಯ ನೀಡಿದೆ!

ಅಮೆರಿಕದಲ್ಲಿ ಭಾರತ, ಪಾಕಿಸ್ಥಾನ ಹಾಗೂ ಇನ್ನಿತರ ಕ್ರಿಕೆಟ್‌ ದೇಶಗಳ ಅಪಾರ ಸಂಖ್ಯೆಯ ಅಭಿಮಾನಿಗಳಿರುವುದರಿಂದ ವಿಶ್ವಕಪ್‌ ಖಂಡಿತ ಯಶಸ್ಸು ಕಾಣಲಿದೆ ಎಂಬ ನಂಬಿಕೆ ಇದೆ.

ವೆಸ್ಟ್‌ ಇಂಡೀಸ್‌ಗೆ ದುರ್ಬಲ ಎದುರಾಳಿ
ಗಯಾನಾ: ಎರಡು ಬಾರಿ ವಿಶ್ವಕಪ್‌ ಗೆದ್ದಿರುವ ಮೊದಲ ತಂಡವೆಂಬ ಹೆಗ್ಗಳಿಕೆಯುಳ್ಳ ಆತಿಥೇಯ ವೆಸ್ಟ್‌ ಇಂಡೀಸ್‌ ಈ ಬಾರಿಯ ನೆಚ್ಚಿನ ತಂಡಗಳಲ್ಲೊಂದು. ರವಿವಾರ ನಡೆಯುವ ಮೊದಲ ಪಂದ್ಯದಲ್ಲಿ ಅದು ದುರ್ಬಲ ಪಪುವಾ ನ್ಯೂ ಗಿನಿಯ (ಪಿಎನ್‌ಜಿ) ವಿರುದ್ಧ ಸೆಣಸಲಿದೆ. ಇದು “ಸಿ’ ವಿಭಾಗದ ಮುಖಾಮುಖಿ.

2022ರ ಕೊನೆಯ ಪಂದ್ಯಾವಳಿಯಲ್ಲಿ ಸ್ಕಾಟ್ಲೆಂಡ್‌ ಮತ್ತು ಐರ್ಲೆಂಡ್‌ ವಿರುದ್ಧ ಸೋಲುಂಡು ಪ್ರಧಾನ ಸುತ್ತಿಗೆ ಏರುವಲ್ಲಿ ವಿಫ‌ಲವಾದ ವೆಸ್ಟ್‌ ಇಂಡೀಸ್‌, 2,982 ದಿನಗಳ ಹಿಂದಕ್ಕೆ ಪಯಣಿಸಬೇಕಿದೆ (2016). ಅಂದು ಈಡನ್‌ ಗಾರ್ಡನ್ಸ್‌ನಲ್ಲಿ ಬೆನ್‌ ಸ್ಟೋಕ್ಸ್‌ ಅವರ ಅಂತಿಮ ಓವರ್‌ನಲ್ಲಿ ಕಾರ್ಲೋಸ್‌ ಬ್ರಾತ್‌ವೇಟ್‌ ಸತತ 4 ಸಿಕ್ಸರ್‌ ಬಾರಿಸಿ ವೆಸ್ಟ್‌ ಇಂಡೀಸನ್ನು 2ನೇ ಸಲ ಪಟ್ಟಕ್ಕೇರಿಸಿದ್ದರು.
ವೆಸ್ಟ್‌ ಇಂಡೀಸ್‌ಗೆ ಎರಡೂ ಸಲ ಚಾಂಪಿಯನ್‌ ಕಿರೀಟ ತೊಡಿಸಿದ ನಾಯಕ ಡ್ಯಾರನ್‌ ಸಮ್ಮಿ ಈಗ ಕೋಚ್‌ ಆಗಿದ್ದಾರೆ. ರೋವ¾ನ್‌ ಪೊವೆಲ್‌ ಸಾರಥ್ಯದ ತಂಡದಲ್ಲಿ ಸ್ಫೋಟಕ ಆಟಗಾರರೇ ತುಂಬಿದ್ದಾರೆ. ಪಿಎನ್‌ಜಿ ವಿರುದ್ಧ ಮೊದಲು ಬ್ಯಾಟಿಂಗ್‌ ನಡೆಸಿದರೆ ಬೃಹತ್‌ ಮೊತ್ತ ದಾಖಲಾಗುವುದರಲ್ಲಿ ಅನುಮಾನವಿಲ್ಲ.

ಅಭ್ಯಾಸ ಪಂದ್ಯ ಗೆದ್ದ ಲಂಕಾ, ಅಫ್ಘಾನ್‌

ಲಾಡರ್‌ಹಿಲ್‌ (ಯುಎಸ್‌ಎ): ಟಿ20 ವಿಶ್ವಕಪ್‌ ಅಭ್ಯಾಸ ಪಂದ್ಯಗಳಲ್ಲಿ ಶ್ರೀಲಂಕಾ ಮತ್ತು ಅಫ್ಘಾನಿಸ್ಥಾನ ತಂಡಗಳು ಜಯ ಸಾಧಿಸಿವೆ. ಇವು ಕ್ರಮವಾಗಿ ಐರ್ಲೆಂಡ್‌ ಮತ್ತು ಸ್ಕಾಟ್ಲೆಂಡ್‌ ವಿರುದ್ಧ ಗೆದ್ದು ಬಂದವು.

ಲಾಡರ್‌ಹಿಲ್‌ನಲ್ಲಿ ನಡೆದ ಪಂದ್ಯದಲ್ಲಿ ಶ್ರೀಲಂಕಾ 41 ರನ್ನುಗಳಿಂದ ಐರ್ಲೆಂಡ್‌ಗೆ ಆಘಾತವಿಕ್ಕಿತು. ಮೊದಲು ಬ್ಯಾಟಿಂಗ್‌ ನಡೆಸಿದ ಲಂಕಾ 8ಕ್ಕೆ 163 ರನ್‌ ಪೇರಿಸಿದರೆ, ಐರ್ಲೆಂಡ್‌ 18.2 ಓವರ್‌ಗಳಲ್ಲಿ 122ಕ್ಕೆ ಕುಸಿಯಿತು.

ಲಂಕೆಯ ಮಧ್ಯಮ ವೇಗಿ ದಸುನ್‌ ಶಣಕ 23ಕ್ಕೆ 4 ವಿಕೆಟ್‌ ಕಿತ್ತು ಘಾತಕವಾಗಿ ಪರಿಣಮಿಸಿದರು. ಬ್ಯಾಟಿಂಗ್‌ನಲ್ಲೂ ಮಿಂಚಿದ ಅವರು 23 ರನ್‌ ಮಾಡಿದರು. ಅಜೇಯ 32 ರನ್‌ ಮಾಡಿದ ಏಂಜೆಲೊ ಮ್ಯಾಥ್ಯೂಸ್‌ ಲಂಕಾ ಸರದಿಯ ಟಾಪ್‌ ಸ್ಕೋರರ್‌. ನಾಯಕ ವನಿಂದು ಹಸರಂಗ 26, ಆರಂಭಕಾರ ಪಥುಮ್‌ ನಿಸ್ಸಂಕ 22 ರನ್‌ ಹೊಡೆದರು. ಐರ್ಲೆಂಡ್‌ ಪರ ಜೋಶುವ ಲಿಟ್ಲ ಮತ್ತು ಬ್ಯಾರ್ರಿ ಮೆಕಾರ್ಟಿ ತಲಾ 2 ವಿಕೆಟ್‌ ಉಎಉಳಿಸಿದರು.

ಐರ್ಲೆಂಡ್‌ ಒಂದು ಹಂತದಲ್ಲಿ 4ಕ್ಕೆ 94 ರನ್‌ ಗಳಿಸಿ ತಿರುಗೇಟು ನೀಡುವ ಹಾದಿಯಲ್ಲಿತ್ತು. ಆದರೆ ಅನಂತರ ಲಂಕಾ ದಾಳಿಗೆ ತತ್ತರಿಸಿ 28 ರನ್‌ ಅಂತರದಲ್ಲಿ ಉಳಿದ ಆರೂ ವಿಕೆಟ್‌ ಕಳೆದುಕೊಂಡಿತು.

ಅಫ್ಘಾನ್‌ಗೆ 55 ರನ್‌ ಜಯ
ಪೋರ್ಟ್‌ ಆಫ್ ಸ್ಪೇನ್‌: ಇಲ್ಲಿ ನಡೆದ ಸ್ಕಾಟ್ಲೆಂಡ್‌ ವಿರುದ್ಧದ ಅಭ್ಯಾಸ ಪಂದ್ಯವನ್ನು ಅಫ್ಘಾನಿಸ್ಥಾನ 55 ರನ್ನುಗಳಿಂದ ಜಯಿಸಿತು. ಅಫ್ಘಾನ್‌ 8ಕ್ಕೆ 178 ರನ್‌ ಪೇರಿಸಿದರೆ, ಸ್ಕಾಟ್ಲೆಂಡ್‌ 9ಕ್ಕೆ 123 ರನ್‌ ಮಾಡಿ ಶರಣಾಯಿತು.

ಅಫ್ಘಾನ್‌ ಪರ ಆರಂಭಕಾರ ಗುಲ್ಬದಿನ್‌ ನೈಬ್‌ ಸರ್ವಾಧಿಕ 69, ಅಜ್ಮತುಲ್ಲ ಒಮರ್‌ಜಾಯ್‌ 48 ರನ್‌ ಮಾಡಿದರು. ಬಳಿಕ ಅಫ್ಘಾನ್‌ ಸಾಂ ಕ ಬೌಲಿಂಗ್‌ ಮೂಲಕ ಮೇಲುಗೈ ಸಾಧಿಸಿತು. 7 ಮಂದಿ ವಿಕೆಟ್‌ ಉರುಳಿಸುವಲ್ಲಿ ಯಶಸ್ವಿಯಾ ದರು. ಕರೀಂ ಜನ್ನತ್‌ ಮತ್ತು ಮುಜೀಬ್‌ ಉರ್‌ ರೆಹಮಾನ್‌ ತಲಾ 2 ವಿಕೆಟ್‌ ಉರುಳಿಸಿದರು. 34 ರನ್‌ ಮಾಡಿದ ಮಾರ್ಕ್‌ ವ್ಯಾಟ್‌ ಸ್ಕಾಟ್ಲೆಂಡ್‌ ಸರದಿಯ ಗರಿಷ್ಠ ಸ್ಕೋರರ್‌.

ಗಯಾನಾದಲ್ಲಿ ಸಂಗೀತ ಸಂಜೆ
ಟಿ20 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯ ಉದ್ಘಾಟನ ಸಮಾರಂಭ ಗಯಾನಾದಲ್ಲಿ, ವೆಸ್ಟ್‌ ಇಂಡೀಸ್‌-ಪಪುವಾ ನ್ಯೂ ಗಿನಿಯ ನಡುವಿನ 2ನೇ ಪಂದ್ಯಕ್ಕೂ ಮೊದಲು ನಡೆಯಲಿದೆ. ಇಲ್ಲಿ ಸಂಗೀತಕ್ಕೆ ಪ್ರಾಧಾನ್ಯ ನೀಡಲಾಗಿದೆ.

ಟ್ರಿನಿಡಾಟ್‌ನ ಸ್ಟಾರ್‌ ಸಿಂಗರ್‌ ಡೇವಿಡ್‌ ರೂಡರ್‌, ಇರ್ಫಾನ್‌ ಅಲ್ವೇಸ್‌, ಚಟನೀ ಮ್ಯೂಸಿಕ್‌ ಸ್ಟಾರ್‌ ರವಿ ಬಿ., ಡಿಜೆಗಳಾದ ಅನ್ನಾ, ಅಲ್ಟ್ರಾ ಅವರೆಲ್ಲ ಗಯಾನಾ ನ್ಯಾಶನಲ್‌ ಸ್ಟೇಡಿಯಂನಲ್ಲಿ ಏರ್ಪಡುವ ಸಂಗೀತ ಸಂಭ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next