ಗ್ರಾಸ್ ಐಲೆಟ್ (ಸೇಂಟ್ ಲೂಸಿಯ): ‘ಬೆಸ್ಟ್ ಫಾರ್ ಲಾಸ್ಟ್’ ಎಂಬಂತೆ ತನ್ನ ಕೊನೆಯ ಪಂದ್ಯದಲ್ಲಿ ಗೆಲುವಿನ ಖಾತೆ ತೆರೆದ ಶ್ರೀಲಂಕಾ, ‘ಡಿ’ ವಿಭಾಗದ ತೃತೀಯ ಸ್ಥಾನಿಯಾಗಿ ಈ ಬಾರಿಯ ಟಿ20 ವಿಶ್ವಕಪ್ ಆಟವನ್ನು ಕೊನೆಗೊಳಿಸಿದೆ.
2 ಸೋಲು ಹಾಗೂ ಒಂದು ಪಂದ್ಯ ರದ್ದುಗೊಂಡ ಪರಿಣಾಮ ಶ್ರೀಲಂಕಾ ಬಹಳ ಬೇಗ ಕೂಟದಿಂದ ಹೊರಬಿದ್ದಿತ್ತು. ಕೊನೆಯ ಮುಖಾಮುಖಿಯಲ್ಲಿ ನೆದರ್ಲೆಂಡ್ಸ್ ವಿರುದ್ಧ 83 ರನ್ ಗೆಲುವು ಸಾಧಿಸಿ ಅಷ್ಟರ ಮಟ್ಟಿಗೆ ಸಮಾಧಾನಪಟ್ಟಿತು. “ಡಿ’ ವಿಭಾಗದಿಂದ ಸೂಪರ್-8 ಪ್ರವೇಶಿಸಿದ ದಕ್ಷಿಣ ಆಫ್ರಿಕಾ ಮತ್ತು ಬಾಂಗ್ಲಾದೇಶಕ್ಕಿಂತ ಹೆಚ್ಚಿನ ರನ್‌ರೇಟನ್ನು ಲಂಕಾ ಹೊಂದಿರುವುದು ವಿಶೇಷ.
ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 6 ವಿಕೆಟಿಗೆ 201 ರನ್ ಪೇರಿಸಿದರೆ, ನೆದರ್ಲೆಂಡ್ಸ್ 16.4 ಓವರ್‌ಗಳಲ್ಲಿ 118ಕ್ಕೆ ಕುಸಿಯಿತು. ಲಂಕೆಯ ಈ ಬೃಹತ್ ಮೊತ್ತದಲ್ಲಿ ಯಾರಿಂದಲೂ ಅರ್ಧ ಶತಕ ದಾಖಲಾಗಲಿಲ್ಲ. ಚರಿತ ಅಸಲಂಕ, ಏಂಜೆಲೊ ಮ್ಯಾಥ್ಯೂಸ್ ಅವರ ಆಕ್ರಮಣಕಾರಿ ಬ್ಯಾಟಿಂಗ್‌ನಿಂದ ಲಂಕಾ ಮೊತ್ತ ಇನ್ನೂರರ ಗಡಿ ದಾಟಿತು. ಅಸಲಂಕ 21 ಎಸೆತಗಳಿಂದ 46 ರನ್ ಬಾರಿಸಿದರು. ಈ ಆಕ್ರಮಣಕಾರಿ ಆಟದ ವೇಳೆ 5 ಸಿಕ್ಸರ್, ಒಂದು ಬೌಂಡರಿ ಸಿಡಿಯಲ್ಪಟ್ಟಿತು. ಮ್ಯಾಥ್ಯೂಸ್ 15 ಎಸೆತ ಎದುರಿಸಿ ಅಜೇಯ 30 ರನ್ ಹೊಡೆದರು. ಆರಂಭಕಾರ ಕುಸಲ್ ಮೆಂಡಿಸ್ ಕೂಡ 46 ರನ್ ಕೊಡುಗೆ ಸಲ್ಲಿಸಿದರು.
ನೆದರ್ಲೆಂಡ್ಸ್ ಸರದಿಯಲ್ಲಿ ಗಮನ ಸೆಳೆದದ್ದು ಇಬ್ಬರು ಮಾತ್ರ. ಆರಂಭಕಾರ ಮೈಕಲ್ ಲೆವಿಟ್ ಮತ್ತು ನಾಯಕ ಸ್ಕಾಟ್ ಎಡ್ವರ್ಡ್ಸ್. ಇಬ್ಬರೂ ತಲಾ 31 ರನ್ ಮಾಡಿದರು.
ಸಂಕ್ಷಿಪ್ತ ಸ್ಕೋರ್: ಶ್ರೀಲಂಕಾ-6 ವಿಕೆಟಿಗೆ 201 (ಮೆಂಡಿಸ್ 46, ಅಸಲಂಕ 46, ಧನಂಜಯ 34, ಮ್ಯಾಥ್ಯೂಸ್ ಅಜೇಯ 30, ವಾನ್ ಬೀಕ್ 45ಕ್ಕೆ 2). ನೆದರ್ಲೆಂಡ್ಸ್-16.4 ಓವರ್‌ಗಳಲ್ಲಿ 118 (ಲೆವಿಟ್ 31, ಎಡ್ವರ್ಡ್ಸ್ 31, ತುಷಾರ 24ಕ್ಕೆ 3, ಪತಿರಣ 12ಕ್ಕೆ 2, ಹಸರಂಗ 25ಕ್ಕೆ 2).
ಪಂದ್ಯಶ್ರೇಷ್ಠ: ಚರಿತ ಅಸಲಂಕ.