Advertisement

T20 WC; ಹೊಸ ರೂಪ ಪಡೆದ ಸೆಮಿ ರೇಸ್; ಭಾರತ, ಆಸೀಸ್, ಅಫ್ಘಾನ್ ಪಯಣ ಹೇಗೆ? ಇಲ್ಲಿದೆ ಮಾಹಿತಿ

11:52 AM Jun 23, 2024 | Team Udayavani |

ಕಿಂಗ್ಸ್ ಟೌನ್: ಬಲಿಷ್ಠ ಆಸ್ಟ್ರೇಲಿಯಾ ವಿರುದ್ದದ ಅಫ್ಘಾನಿಸ್ತಾನ ತಂಡದ ಪ್ರಸಿದ್ದ ಗೆಲುವಿನ ಬಳಿಕ ಐಸಿಸಿ ಟಿ20 ವಿಶ್ವಕಪ್ 2024ರ ಸೂಪರ್ 8 ಕದನ ಹೊಸ ರೂಪ ಪಡೆದಿದೆ. ಅಫ್ಘಾನ್ ತಂಡದ ಅಚ್ಚರಿಯ ಗೆಲುವಿನ ಕಾರಣದಿಂದ ಸೆಮಿ ಫೈನಲ್ ಗೆ ಯಾವ ತಂಡ ಅರ್ಹತೆ ಪಡೆಯಬಹುದು ಎನ್ನುವ ಕುತೂಹಲ ಗರಿಗೆದರಿದೆ.

Advertisement

ಇಂದು ಕಿಂಗ್ಸ್ ಟೌನ್ ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನ್ ಆರು ವಿಕೆಟ್ ನಷ್ಟದಲ್ಲಿ 148 ರನ್ ಗಳಿಸಿದರೆ, ಆಸ್ಟ್ರೇಲಿಯಾ ತಂಡವು 127 ರನ್ ಗಳಿಗೆ ಆಲೌಟಾಯಿತು. ಈ ಮೂಲಕ ಅಫ್ಘಾನ್ ತಂಡವು 21 ರನ್ ಅಂತರದ ಗೆಲುವು ಸಾಧಿಸಿತು.

ಸೂಪರ್ 8 ನ ಗುಂಪು 1ರಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಸುಲಭವಾಗಿ ಸೆಮಿ ಫೈನಲ್ ಗೆ ಅರ್ಹತೆ ಪಡೆಯಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಇಂದಿನ ಪಂದ್ಯದ ಫಲಿತಾಂಶದ ಬಳಿಕ ಅಫ್ಘಾನ್ ಕೂಡಾ ಸೆಮಿ ರೇಸ್ ನಲ್ಲಿ ಜೀವಂತವಾಗಿದೆ.

ಸೂಪರ್ 8 ಹಂತದ ಮೊದಲೆರಡು ಪಂದ್ಯಗಳನ್ನು ಗೆದ್ದ ಭಾರತ 2.425 ರನ್ ರೇಟ್ ನೊಂದಿಗೆ ಮೊದಲ ಸ್ಥಾನದಲ್ಲಿದೆ. ಭಾರತ ಸೆಮಿ ಫೈನಲ್ ಗೆ ತಲುಪುವ ಅವಕಾಶ ಹೆಚ್ಚು. ಸದ್ಯ ಆಸೀಸ್ ಮತ್ತು ಅಫ್ಘಾನ್ ತಲಾ ಎರಡು ಅಂಕಗಳೊಂದಿಗೆ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದೆ.

ಭಾರತದ ಪಯಣ ಹೇಗೆ

Advertisement

ರೋಹಿತ್ ಬಳಗವು ಮುಂದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ದ ಆಡಲಿದೆ. ಈ ಪಂದ್ಯ ಗೆದ್ದರೆ ಭಾರತ ಸೆಮಿ ಫೈನಲ್ ಗೆ ಪ್ರವೇಶ ಪಡೆಯಲಿದೆ. ಒಂದು ವೇಳೆ ಸೋತರೂ ಭಾರತದ ರನ್ ರೇಟ್ ಉತ್ತಮವಾಗಿರುವ ಕಾರಣ ಭಾರತ ಬಹುತೇಕ ಸೆಮಿಗೆ ಹೋಗಲಿದೆ. ಆದರೆ ಅತಿ ದೊಡ್ಡ ಸೋಲು ಭಾರತದ ಪಯಣವನ್ನು ತಡೆಯಬಹುದು.

ಆಸ್ಟ್ರೇಲಿಯಾ

ಅಫ್ಘಾನ್ ವಿರುದ್ದದ ಸೋಲಿನಿಂದ ಆಘಾತಗೊಂಡಿರುವ ಆಸೀಸ್ ಗೆ ಮುಂದಿನ ಪಂದ್ಯವು ಮಾಡು ಇಲ್ಲವೆ ಮಡಿ ಪಂದ್ಯ. ಅದೂ ಅಜೇಯವಾಗಿರುವ ಭಾರತದ ವಿರುದ್ದ. ಈ ಪಂದ್ಯದಲ್ಲಿ ಸೋತರೆ ಆಸೀಸ್ ಪಯಣ ಬಹುತೇಕ ಮುಗಿದಂತೆ. ಆಸ್ಟ್ರೇಲಿಯವು ಭಾರತದ ವಿರುದ್ಧ ಸೋಲನ್ನು ಅನುಭವಿಸಿದರೆ ಮತ್ತು ಅಫ್ಘಾನಿಸ್ತಾನವು ತನ್ನ ಮುಂದಿನ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಸೋಲಿಸಿದರೆ, ಆಫ್ಘನ್ನರು ಭಾರತದ ಜೊತೆಯಲ್ಲಿ ಸೆಮಿಫೈನಲ್‌ ಗೆ ಪ್ರವೇಶಿಸುತ್ತಾರೆ ಅದೇ ವೇಳೆ ಆಸ್ಟ್ರೇಲಿಯಾ ಮನೆಗೆ ತೆರಳಬೇಕಾಗುತ್ತದೆ.

ಅಫ್ಘಾನಿಸ್ತಾನ

ಅದ್ಭುತ ಆಟದಿಂದ ಆಸೀಸ್ ಗೆ ಸೋಲುಣಿಸಿರುವ ಅಫ್ಘಾನ್ ಮೊದಲ ಬಾರಿಗೆ ವಿಶ್ವಕಪ್ ಸೆಮಿ ಫೈನಲ್ ತಲುಪುವ ಅವಕಾಶ ಹೊಂದಿದೆ. ಆಸೀಸ್ ಭಾರತ ವಿರುದ್ದ ಸೋತರೆ, ಅಫ್ಘಾನಿಸ್ತಾನವು ತನ್ನ ಮುಂದಿನ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಸೋಲಿಸಿದರೆ ರಶೀದ್ ಬಳಗ ಸೆಮಿಗೆ ತಲುಪಲಿದೆ. ಭಾರತ ಮತ್ತು ಆಸ್ಟ್ರೇಲಿಯಾ ಪಂದ್ಯವು ಅಫ್ಘಾನ್ ಪಂದ್ಯಕ್ಕೆ ಮೊದಲು ನಡೆಯಲಿರುವ ಕಾರಣ ಇದು ಅವರಿಗೆ ಲಾಭವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next