ಬರ್ಲಿನ್: ಕಾರ್ಲೋಸ್ ಅಲ್ಕರಾಜ್ ಅವರ ಅವಳಿ ಗೆಲುವಿನ ಸಾಹಸದಿಂದ ಟೀಮ್ ಯೂರೋಪ್ “ಲೇವರ್ ಕಪ್’ ಟೆನಿಸ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಅದು ಟೀಮ್ ವರ್ಲ್ಡ್ ವಿರುದ್ಧ 13-11 ಅಂತರದ ಗೆಲುವು ಸಾಧಿಸಿತು.
4 ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ವಿಜೇತ ಕಾರ್ಲೋಸ್ ಅಲ್ಕರಾಜ್ ನಿರ್ಣಾಯಕ ಪಂದ್ಯದಲ್ಲಿ ಟೇಲರ್ ಫ್ರಿಟ್ಜ್ ವಿರುದ್ಧ 6-2, 7-5 ಅಂತರದ ಜಯ ಕಾಣುವಲ್ಲಿ ಯಶಸ್ವಿಯಾದರು.
ಇದಕ್ಕೂ ಮುನ್ನ ಡಬಲ್ಸ್‌ನಲ್ಲಿ ಕ್ಯಾಸ್ಪರ್ ರೂಡ್ ಜತೆಗೂಡಿ ಆಡಿದ ಅಲ್ಕರಾಜ್, ಬೆನ್ ಶೆಲ್ಟನ್-ಫ್ರಾನ್ಸೆಸ್ ಥಿಯಾಫೊ ವಿರುದ್ಧ 6-2, 7-6 (8-6) ಗೆಲುವು ಗಳಿಸಿದ್ದರು. ಈ ಜಯದಿಂದ ಟೀಮ್ ಯೂರೋಪ್ “ಕಮ್ ಬ್ಯಾಕ್’ಗೆ ದಾರಿ ಮಾಡಿಕೊಂಡಿತು.
ರವಿವಾರದ 4 ಪಂದ್ಯಗಳಲ್ಲಿ ಟೀಮ್ ಯೂರೋಪ್ ಮೂರನ್ನು ಜಯಿಸಿತು. ಇವೆಲ್ಲವೂ ತಲಾ 3 ಅಂಕಗಳ ಪಂದ್ಯಗಳಾಗಿದ್ದವು. ಅಲ್ಕರಾಜ್-ರೂಡ್ ಡಬಲ್ಸ್ ಗೆದ್ದಾಗ ಟೀಮ್ ಯೂರೋಪ್ 7-8 ಹಿನ್ನಡೆಯಲ್ಲಿತ್ತು. ಬಳಿಕ ಬೆನ್ ಶೆಲ್ಟನ್ ಮತ್ತೂಂದು ಸಿಂಗಲ್ಸ್‌ನಲ್ಲಿ ಡ್ಯಾನಿಲ್ ಮೆಡ್ವೆಡೇವ್‌ಗೆ ಸೋಲುಣಿಸುವುದರೊಂದಿಗೆ ಟೀಮ್ ವರ್ಲ್ಡ್ ಸತತ 3ನೇ ಬಾರಿ ಪ್ರಶಸ್ತಿ ಎತ್ತುವ ಸಾಧ್ಯತೆಯನ್ನು ತೆರೆದಿರಿಸಿತು. ಆಗ ಅದು 11-7ರ ಮುನ್ನಡೆ ಗಳಿಸಿತ್ತು.
ಅಲ್ಕರಾಜ್‌ಗಿಂದ ಮೊದಲು ಅಲೆಕ್ಸಾಂಡರ್ ಜ್ವೆರೇವ್ 3 ಸೆಟ್‌ಗಳ ಹೋರಾಟದಲ್ಲಿ ಫ್ರಾನ್ಸೆಸ್ ಥಿಯಾಫೊಗೆ ಸೋಲುಣಿಸಿ ಅಂತರವನ್ನು 10-11ಕ್ಕೆ ಇಳಿಸಿದರು. ಮುಂದಿನದು ಅಲ್ಕರಾಜ್ ಅವರ ಸಿಂಗಲ್ಸ್ ಗೆಲುವಿನ ಸಾಹಸ.
ಇದು ಟೀಮ್ ವರ್ಲ್ಡ್ ಮತ್ತು ಟೀಮ್ ಯೂರೋಪ್ ನಡುವೆ, ಗಾಲ್ಫ್ನ “ರೈಡರ್ ಕಪ್’ ಮಾದರಿಯಲ್ಲಿ ನಡೆಯುವ ಟೆನಿಸ್ ಪಂದ್ಯಾವಳಿ. ಮೊದಲು 13 ಅಂಕ ಸಂಪಾದಿಸಿದ ತಂಡ ಚಾಂಪಿಯನ್ ಆಗುತ್ತದೆ.