Advertisement
ಟಿ20 ವಿಶ್ವಕಪ್ ಆರಂಭಿಕ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಕೇವಲ 51 ಎಸೆತಗಳಲ್ಲಿ ಕೌರ್ 103 ರನ್ ಬಾರಿಸಿದ್ದಾರೆ. ಪರಿಣಾಮ, 34 ರನ್ ಜಯದೊಂದಿಗೆ ಭಾರತದ ಶುಭಾರಂಭ.
ಮೊದಲ 13 ಎಸೆತಗಳಲ್ಲಿ ಕೇವಲ 5 ರನ್ ಮಾಡಿದ್ದ ಹರ್ಮನ್‌ಪ್ರೀತ್, ಈ ಹಂತದಿಂದ ಒಮ್ಮೆಲೇ “ಸ್ಫೋಟಕ ಮೋಡ್’ಗೆ ಪರಿವರ್ತನೆಗೊಂಡರು. 33 ಎಸೆತಗಳಲ್ಲಿ ಅರ್ಧ ಶತಕ ದಾಖಲಾಯಿತು. ಇನ್ನಷ್ಟು ಬಿರುಸುಗೊಂಡ ಕೌರ್, 49 ಎಸೆತ ಎದುರಿಸುವಷ್ಟರಲ್ಲಿ ಶತಕವನ್ನೂ ಬಾರಿಸಿದರು! 6ನೇ ಓವರಿನಲ್ಲಿ 40 ರನ್ನಿಗೆ 3 ವಿಕೆಟ್ ಬಿದ್ದಾಗ ಕ್ರೀಸ್ ಇಳಿದ ಕೌರ್ ಚುಟುಕು ಕ್ರಿಕೆಟಿನ ಅಸಾಮಾನ್ಯ ಬ್ಯಾಟಿಂಗ್ ಸಾಹಸವೊಂದಕ್ಕೆ ಸಾಕ್ಷಿಯದರು. ಇದರೊಂದಿಗೆ ಟಿ20 ವಿಶ್ವಕಪ್‌ಗೆ “ಫುಲ್ ಪ್ಯಾಕೇಜ್’ ಓಪನಿಂಗ್ ಲಭಿಸಿತು.
Related Articles
ಭಾರತದ ವಿಶ್ವದಾಖಲೆಯ ಮೊತ್ತಕ್ಕೆ ಕಿವೀಸ್ ಓಪನರ್ ಸುಝೀ ಬೇಟ್ಸ್ ಸಿಡಿಲಬ್ಬರದ ಆರಂಭವನ್ನೇ ನೀಡಿದರು. 6.3 ಓವರ್‌ಗಳಲ್ಲಿ 52 ರನ್ ಒಟ್ಟುಗೂಡಿತು. 14ನೇ ಓವರ್ ತನಕ ಕ್ರೀಸ್ ಆಕ್ರಮಿಸಿಕೊಂಡ ಬೇಟ್ಸ್ 50 ಎಸೆತಗಳಿಂದ 67 ರನ್ ಸಿಡಿಸಿದರು (8 ಬೌಂಡರಿ). ಆದರೆ ಇನ್ನೊಂದು ತುದಿಯಲ್ಲಿ ವಿಕೆಟ್ ಕೀಳುವ ಯೋಜನೆಯಲ್ಲಿ ಭಾರತ ಯಶಸ್ವಿಯಾಗಿತ್ತು. ಪದಾರ್ಪಣ ಪಂದ್ಯವಾಡಿದ ಡಿ. ಹೇಮಲತಾ ಮತ್ತು ಪೂನಂ ಯಾದವ್ ತಲಾ 3, ರಾಧಾ ಯಾದವ್ 2 ವಿಕೆಟ್ ಉರುಳಿಸಿದರು.
Advertisement
ಸಂಕ್ಷಿಪ್ತ ಸ್ಕೋರ್: ಭಾರತ-5 ವಿಕೆಟಿಗೆ 194 (ಹರ್ಮನ್‌ಪ್ರೀತ್ 103, ಜೆಮಿಮಾ 59, ತಹುಹು 18ಕ್ಕೆ 2). ನ್ಯೂಜಿಲ್ಯಾಂಡ್-9 ವಿಕೆಟಿಗೆ 160 (ಬೇಟ್ಸ್ 67, ಮಾರ್ಟಿನ್ 39, ಹೇಮಲತಾ 26ಕ್ಕೆ 3, ಪೂನಂ ಯಾದವ್ 33ಕ್ಕೆ 3, ರಾಧಾ ಯಾದವ್ 31ಕ್ಕೆ 2). ಪಂದ್ಯಶ್ರೇಷ್ಠ: ಹರ್ಮನ್‌ಪ್ರೀತ್ ಕೌರ್.
ಓಡಲಾಗುತ್ತಿಲ್ಲವೆಂದು ಸಿಕ್ಸರ್,ಬೌಂಡರಿ ಚಚ್ಚಿದ ಹರ್ಮನ್!ಮಾಮೂಲಿ ಕ್ರಿಕೆಟಿಗರಿಗೂ ಅದ್ಭುತ ಕ್ರಿಕೆಟಿಗರಿಗೂ ಏನು ವ್ಯತ್ಯಾಸ? ಸಮಸ್ಯೆಗಳಿಗೆ ಸಿಲುಕಿದರೆ ಮಾಮೂಲಿ ಕ್ರಿಕೆಟಿಗರು ಶರಣಾಗುತ್ತಾರೆ. ಅದ್ಭುತ ಕ್ರಿಕೆಟಿಗರು ಅದನ್ನೇ ಒಂದು ಸವಾಲಾಗಿ ಸ್ವೀಕರಿಸುತ್ತಾರೆ. ಭಾರತ ಮಹಿಳಾ ಟಿ20 ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅದ್ಭುತ ಕ್ರಿಕೆಟಿಗರ ಸಾಲಿಗೆ ಸೇರುತ್ತಾರೆ. ಇದು ಮಹಿಳಾ ಟಿ20 ವಿಶ್ವಕಪ್‌ನ ಉದ್ಘಾಟನಾ ಪಂದ್ಯದಲ್ಲಿ ಸಾಬೀತಾಗಿದೆ. ಶುಕ್ರವಾರ ರಾತ್ರಿ ನಡೆದ ಪಂದ್ಯದಲ್ಲಿ ಬೆನ್ನು ನೋವು ಮತ್ತು ಹೊಟ್ಟೆ ಸ್ನಾಯು ಸೆಳೆತಕ್ಕೆ ಸಿಲುಕಿದ್ದ ಹರ್ಮನ್, ಓಡಲು ಸಾಧ್ಯವಾಗದ ಸ್ಥಿತಿ ತಲುಪಿದ್ದರು. ಆಗವರು ಓಡುವುದನ್ನು ನಿಲ್ಲಿಸಿ, ಬೌಂಡರಿ, ಸಿಕ್ಸರ್‌ಗಳ ಸುರಿಮಳೆಗೈದು ಪಂದ್ಯವನ್ನೇ ಗೆಲ್ಲಿಸಿದರು!
ಶುಕ್ರವಾರ ಹರ್ಮನ್ ಶತಕ ಬಾರಿಸದಿದ್ದರೆ ಭಾರತದ ಪರಿಸ್ಥಿತಿ ಬಿಗಡಾಯಿಸುತ್ತಿತ್ತು. ಸೋಲುವ ಸಾಧ್ಯತೆಯೂ ಇತ್ತು. ಅಂತಹ ಕಷ್ಟದ ಪರಿಸ್ಥಿತಿಯಲ್ಲೂ ಹರ್ಮನ್ ಅದ್ಭುತ ಹೊಡೆತಗಳೊಂದಿಗೆ ತಂಡವನ್ನು ಮೇಲೆತ್ತಿದರು. ಪಂದ್ಯ ಮುಗಿದ ಮೇಲೆ ತಮ್ಮ ಸ್ಥಿತಿಯನ್ನು ಹರ್ಮನ್ ಹೇಳಿಕೊಂಡಿದ್ದಾರೆ. “ಶುಕ್ರವಾರ ಬೆಳಗ್ಗೆಯೇ ನನಗೆ ಬೆನ್ನುನೋವು ಇತ್ತು. ಪರಿಸ್ಥಿತಿ ಉತ್ತಮವಾಗಿಲ್ಲ ಅನ್ನಿಸಿತ್ತು. ಮೈದಾನಕ್ಕಿಳಿದಾಗಲೇ ಹೊಟ್ಟೆ ಸ್ನಾಯುಬಿಗಿತ ಉಂಟಾಗಿತ್ತು. ಬ್ಯಾಟ್ ಹಿಡಿದು ಅಂಕಣದಲ್ಲಿ ಓಡಲು ಶುರು ಮಾಡಿದಾಗ ಪರಿಸ್ಥಿತಿ ಇನ್ನಷ್ಟು ಹದೆಗೆಟ್ಟಿತು. ಬಿಗಿತ ಜೋರಾಯಿತು. ಕಡೆಗೆ ವಿಧಿಯಿಲ್ಲದೇ ಸಹ ಬ್ಯಾಟ್ಸ್‌ಮನ್ ಜೆಮಿಮಾ ಬಳಿ ತೆರಳಿ, ನೀನು ನನಗೆ ಸ್ಟ್ರೈಕ್ ನೀಡಿದರೆ ಚಚ್ಚಲು ಶುರು ಮಾಡುತ್ತೇನೆ ಎಂದೆ. ಈ ಪ್ರಯತ್ನದಲ್ಲಿ ಯಶಸ್ವಿಯಾದೆ. ಪಂದ್ಯವನ್ನು ಗೆಲ್ಲಲು 150ರಂತಹ ಸಣ್ಣ ಮೊತ್ತ ಸಾಕಾಗುವುದಿಲ್ಲವೆಂದು ನನಗೆ ಮುಂಚಿತವಾಗಿಯೇ ಗೊತ್ತಿತ್ತು’ ಎಂದು ಹರ್ಮನ್‌ಪ್ರೀತ್ ಹೇಳಿಕೊಂಡಿದ್ದಾರೆ.