ಮುಂಬೈ: ಐಸಿಸಿ ಟಿ20 ವಿಶ್ವಕಪ್ 2024ರಲ್ಲಿ ಆಡುವ ಭಾರತ ಪುರುಷರ ತಂಡದ ಮೊದಲ ಬ್ಯಾಚ್ ಈಗಾಗಲೇ ಅಮೆರಿಕಕ್ಕೆ ತೆರಳಿದೆ. ಶನಿವಾರ ಸಂಜೆ ಮುಂಬೈನಿಂದ ರೋಹಿತ್ ಶರ್ಮಾ ನೇತೃತ್ವದಲ್ಲಿ ಮೊದಲ ಬ್ಯಾಚ್ ನಲ್ಲಿ ಹಲವು ಆಟಗಾರರು ಮತ್ತು ಕೋಚಿಂಗ್ ಸಿಬ್ಬಂದಿ ಯುಎಸ್ ಗೆ ಪ್ರಯಾಣ ಬೆಳೆಸಿದ್ದಾರೆ.
ಟೀಂ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರು ಮೊದಲ ಬ್ಯಾಚ್ ನಲ್ಲಿ ಪ್ರಯಾಣ ಮಾಡಿಲ್ಲ. ವಿರಾಟ್ ಅವರ ಪೇಪರ್ ವರ್ಕ್ ಮುಗಿಯದ ಕಾರಣ ಅವರು ಮೊದಲ ವಿಮಾನದಲ್ಲಿ ಹೊರಟಿಲ್ಲ ಎನ್ನಲಾಗಿತ್ತು. ಆದರೆ ಇದೀಗ ವಿರಾಟ್ ಅವರು ವಿಶ್ರಾಂತಿ ಬಯಸಿದ ಕಾರಣದಿಂದ ರೋಹಿತ್ ಬಳಗದ ಜೊತೆ ತೆರಳಿಲ್ಲ ಎಂದು ವರದಿಯಾಗಿದೆ.
ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ ವರದಿಯ ಪ್ರಕಾರ, ವಿರಾಟ್ ಕೊಹ್ಲಿ ಅವರು ಐಪಿಎಲ್ ಬಳಿಕ ಸಣ್ಣ ವಿರಾಮವನ್ನು ಬಿಸಿಸಿಐ ಬಳಿ ಕೇಳಿದ್ದರು. ಬಿಸಿಸಿಐ ಅನುಮತಿ ನೀಡಿದೆ. ಹೀಗಾಗಿ ವಿರಾಟ್ ತೆರಳಿಲ್ಲ.
ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ ಅವರು ಕೂಡಾ ಬಿಸಿಸಿಐ ಬಳಿ ಮೊದಲೇ ಅನುಮತಿ ಪಡೆದು ವಿಮಾನ ತಪ್ಪಿಸಿದ್ದಾರೆ ಎಂದು ವರದಿಯಾಗಿದೆ. ದುಬೈನಲ್ಲಿ ವೈಯಕ್ತಿಕ ಕೆಲಸ ಇರುವ ಕಾರಣ ಶನಿವಾರದ ವಿಮಾನದಲ್ಲಿ ಪ್ರಯಾಣಿಸಿಲ್ಲ. ಆದರೆ ತಂಡದ ಉಪನಾಯಕ ಹಾರ್ದಿಕ್ ಪಾಂಡ್ಯ ಅವರ ಬಗ್ಗೆ ಯಾವುದೇ ಖಚಿತ ಮಾಹಿತಿ ಲಭ್ಯವಾಗಿಲ್ಲ. ಮೂಲಗಳ ಪ್ರಕಾರ ಅವರು ಲಂಡನ್ ನಲ್ಲಿದ್ದಾರೆ, ಅಲ್ಲಿಂದಲೇ ಅಮೆರಿಕ ತೆರಳಲಿದ್ದಾರೆ.
“ಕೊಹ್ಲಿ ಅವರು ತಡವಾಗಿ ತಂಡವನ್ನು ಸೇರಿಕೊಳ್ಳುತ್ತಾರೆ ಎಂದು ನಮಗೆ ಮೊದಲೇ ತಿಳಿಸಿದ್ದರು, ಅದಕ್ಕಾಗಿಯೇ ಬಿಸಿಸಿಐ ಅವರ ವೀಸಾ ನೇಮಕಾತಿಯನ್ನು ನಂತರದ ದಿನಾಂಕಕ್ಕೆ ಇರಿಸಿದೆ. ಅವರು ಮೇ 30 ರ ಮುಂಜಾನೆ ನ್ಯೂಯಾರ್ಕ್ ಗೆ ಹಾರುವ ನಿರೀಕ್ಷೆಯಿದೆ” ಎಂದು ಬಿಸಿಸಿಐ ಅಧಿಕಾರಿಯೊಬ್ಬರು ದಿ ಇಂಡಿಯನ್ ಎಕ್ಸ್‌ಪ್ರೆಸ್ ಗೆ ತಿಳಿಸಿದ್ದಾರೆ.
ವಿರಾಟ್ ಕೊಹ್ಲಿ, ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ ಅವರು ಜೂನ್ 1ರಂದು ನಡೆಯಲಿರುವ ಬಾಂಗ್ಲಾ ವಿರುದ್ದದ ಅಭ್ಯಾಸ ಪಂದ್ಯವನ್ನು ತಪ್ಪಿಸಿಕೊಳ್ಳಲಿದ್ದಾರೆ.
ಕೋಚ್ ರಾಹುಲ್ ದ್ರಾವಿಡ್ ಮತ್ತು ಸಹಾಯಕ ಸಿಬ್ಬಂದಿ, ನಾಯಕ ರೋಹಿತ್ ಶರ್ಮಾ, ರವೀಂದ್ರ ಜಡೇಜ, ಜಸ್ಪ್ರೀತ್ ಬುಮ್ರಾ, ಅಕ್ಷರ್ ಪಟೇಲ್, ಮೊಹಮ್ಮದ್ ಸಿರಾಜ್, ಶಿವಂ ದುಬೆ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಕುಲದೀಪ್ ಯಾದವ್, ಅರ್ಷದೀಪ್ ಸಿಂಗ್, ಶುಭಮನ್ ಗಿಲ್, ಖಲೀಲ್ ಅಹ್ಮದ್ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ.