ದುಬಾೖ: ಮಹತ್ವದ ನಿರ್ಧಾರ ವೊಂದರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಮುಂದಿನ ತಿಂಗಳು ಆರಂಭವಾಗುವ ವನಿತೆಯರ ಟಿ20 ವಿಶ್ವಕಪ್‌ನಿಂದಲೇ ಪುರುಷ ಮತ್ತು ವನಿತೆಯರ ವಿಶ್ವಕಪ್ ವಿಜೇತರಿಗೆ ಸಮಾನ ಬಹುಮಾನ ನಿಧಿ ನೀಡಲು ತೀರ್ಮಾನಿಸಿದೆ. ವನಿತೆಯರ ಟಿ20 ವಿಶ್ವಕಪ್ ಕೂಟದ ಒಟ್ಟಾರೆ ಬಹುಮಾನ ನಿಧಿಯಲ್ಲಿ ಶೇಕಡಾ 225ರಷ್ಟು ಏರಿಕೆ ಮಾಡಲಾಗಿದೆ. ಸಮಗ್ರವಾಗಿ 7. 95 ಮಿಲಿಯನ್ ಡಾಲರ್ ಬಹು ಮಾನ ನಿಧಿಯನ್ನು ಈ ವಿಶ್ವಕಪ್ ಒಳಗೊಂಡಿದೆ. ಈ ಹಿಂದಿನ ವನಿತಾ ವಿಶ್ವಕಪ್ 2.45 ಮಿಲಿಯನ್ ಡಾಲರ್ ನಿಧಿಯನ್ನು ಒಳಗೊಂಡಿತ್ತು.
ಈ ಬಾರಿಯ ವನಿತೆಯರ ಟಿ20 ವಿಶ್ವಕಪ್ ವಿಜೇತರು 2.34 ಮಿಲಿ ಯನ್ ಡಾಲರ್ ನಿಧಿ (ಸುಮಾರು 19.61 ಕೋಟಿ ರೂ.) ಯನ್ನು ಪಡೆಯಲಿದ್ದಾರೆ. ಇದು ಕಳೆದ ವಿಶ್ವಕಪ್‌ಗಿಂತ ಶೇಕಡಾ 134ರಷ್ಟು ಹೆಚ್ಚು. 2023ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ವಿಶ್ವಕಪ್‌ನ ವಿಜೇತರಾದ ಆಸ್ಟ್ರೇಲಿಯದ ವನಿತೆಯರಿಗೆ ಒಂದು ಮಿಲಿಯನ್ ಡಾಲರ್ ನಿಧಿ (8.38 ಕೋಟಿ ರೂ.)ಯನ್ನು ನೀಡಲಾಗಿತ್ತು ಎಂದು ಐಸಿಸಿ ಪ್ರಕಟನೆ ತಿಳಿಸಿದೆ.
ಈ ವರ್ಷದ ಆರಂಭದಲ್ಲಿ ನಡೆದ ಪುರುಷರ ಟಿ20 ವಿಶ್ವಕಪ್ ಚಾಂಪಿಯನ್ಸ್ ಭಾರತ ತಂಡವು 2.45 ಮಿಲಿಯನ್ ಡಾಲರ್ ನಿಧಿಯನ್ನು ಬಹುಮಾನವಾಗಿ ಪಡೆದಿತ್ತು. ಐಸಿಸಿ ವನಿತಾ ಟಿ20 ವಿಶ್ವಕಪ್ ಇಷ್ಟು ದೊಡ್ಡ ಮೊತ್ತದ ನಿಧಿಯನ್ನು ಪಡೆಯುವ ಮೊದಲ ಕೂಟವಾಗಿದೆ. ಇನ್ನು ಮುಂದೆ ಪುರುಷ ಮತ್ತು ವನಿತೆಯರ ಟಿ20 ವಿಶ್ವಕಪ್ ವಿಜೇತರು ಸಮಾನ ಬಹುಮಾನ ನಿಧಿ ಪಡೆಯಲಿದ್ದಾರೆ. ಇದು ಕ್ರಿಕೆಟ್ ಇತಿಹಾಸದ ಮಹತ್ವದ ಮೈಲುಗಲ್ಲು ಆಗಿ ಗುರುತಿಸುತ್ತದೆ ಎಂದು ಐಸಿಸಿ ತಿಳಿಸಿದೆ.
ವನಿತಾ ಟಿ20 ವಿಶ್ವಕಪ್‌ನ ರನ್ನರ್ ಅಪ್ ತಂಡವು 1.17 ಮಿಲಿಯರ್ ಡಾಲರ್ ನಗದನ್ನು ಪಡೆಯಲಿದೆ. ಇದು ಈ ಹಿಂದಿನ ವಿಶ್ವಕಪ್‌ನ ನಿಧಿಗಿಂತ ಶೇಕಡಾ 134ರಷ್ಟು ಹೆಚ್ಚು. ಕಳೆದ ವಿಶ್ವಕಪ್‌ನಲ್ಲಿ ರನ್ನರ್ ಅಪ್ ದಕ್ಷಿಣ ಆಫ್ರಿಕಾವು 5 ಲಕ್ಷ ಡಾಲರ್ ನಗದು ಪಡೆದಿತ್ತು.ಮುಂದಿನ ವನಿತಾ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಸೋತ ಎರಡು ತಂಡಗಳು 6.75 ಲಕ್ಷ ಡಾಲರ್ (ಹಿಂದಿನ ವಿಶ್ವಕಪ್‌ನಲ್ಲಿ 2.10 ಲಕ್ಷ ಡಾಲರ್) ನಗದು ಪಡೆಯಲಿವೆ.