ದುಬೈ: ಬುಧವಾರ ನಡೆದ ಟಿ20 ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಸ್ಕಾಟ್ಲೆಂಡ್ ವಿರುದ್ಧ ಸಣ್ಣ ಅಂತರದ ಜಯ ಸಾಧಿಸಿತು.
ಅಲ್ಲಿಗೆ ನ್ಯೂಜಿಲೆಂಡ್ ಸೆಮಿಫೈನಲ್‌ಗೆ ಇನ್ನಷ್ಟು ಸನಿಹವಾದಂತಾಗಿದೆ. ಪಾಕಿಸ್ತಾನ ಈಗಾಗಲೇ ಸೆಮಿಫೈನಲ್‌ಗೇರುವುದರಿಂದ, ನ್ಯೂಜಿಲೆಂಡ್ ಮುಂದೆ ಎರಡನೇ ತಂಡವಾಗಿ ಮೇಲೇರುವ ಅವಕಾಶ ಇದೆ.
ಬುಧವಾರದ ಮೊದಲ ಮುಖಾಮುಖಿಯಲ್ಲಿ ಆರಂಭಕಾರ ಮಾರ್ಟಿನ್ ಗಪ್ಟಿಲ್ ಅವರ ಅಬ್ಬರದ ಆಟದಿಂದ ನ್ಯೂಜಿಲೆಂಡ್ 20 ಓವರ್‌ಗಳಲ್ಲಿ 5 ವಿಕೆಟಿಗೆ 172 ರನ್ ರಾಶಿ ಹಾಕಿತು. ಅಮೋಘ ಬ್ಯಾಟಿಂಗ್ ಮೂಲಕ ಗಮನ ಸೆಳೆದ ಸ್ಕಾಟ್ಲೆಂಡ್ 20 ಓವರ್‌ಗಳಲ್ಲಿ 5 ವಿಕೆಟಿಗೆ 156 ರನ್ ತನಕ ಮುನ್ನುಗ್ಗಿ ಬಂತು. ಇದು 3 ಪಂದ್ಯಗಳಿಂದ ನ್ಯೂಜಿಲ್ಯಾಂಡಿಗೆ ಒಲಿದ ಎರಡನೇ ಜಯ.
ಗಪ್ಟಿಲ್ ಗುಡುಗು: 7 ಸಿಕ್ಸರ್, 6 ಬೌಂಡರಿ ಹೊಡೆತಗಳ ಮೂಲಕ ಅಬ್ಬರಿಸಿದ ಮಾರ್ಟಿನ್ ಗಪ್ಟಿಲ್ ನ್ಯೂಜಿಲೆಂಡಿನ ಅರ್ಧಕ್ಕೂ ಹೆಚ್ಚಿನ ಮೊತ್ತವನ್ನು ಒಬ್ಬರೇ ಬಾರಿಸಿದರು. ಗಪ್ಟಿಲ್ ಆರ್ಭಟ ಕಂಡಾಗ ಶತಕ ಬಾರಿಸುವುದು ಖಚಿತ ಎಂದೇ ಭಾವಿಸಲಾಗಿತ್ತು. ಆದರೆ 93 ರನ್ ಗಡಿಯಲ್ಲಿ ಎಡವಿದರು. ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅತ್ಯಧಿಕ 5 ಸಲ 90 ಪ್ಲಸ್ ರನ್ ಮಾಡಿದ ರೋಹಿತ್ ಶರ್ಮ ದಾಖಲೆಯನ್ನು ಗಪ್ಟಿಲ್ ಸರಿದೂಗಿಸಿದರು. 33 ರನ್ ಮಾಡಿದ ಗ್ಲೆನ್ ಫಿಲಿಪ್ಸ್ ಅವರದು ಅನಂತರದ ಹೆಚ್ಚಿನ ಗಳಿಕೆ. ಗಪ್ಟಿಲ್-ಫಿಲಿಪ್ಸ್ ಜೋಡಿಯಿಂದ 4ನೇ ವಿಕೆಟಿಗೆ 105 ರನ್ ಹರಿದು ಬಂತು.
ಇದನ್ನೂ ಓದಿ:ನ.5ರಂದು ಪ್ರಧಾನಿ ಮೋದಿ ಕೇದಾರನಾಥಕ್ಕೆ ಭೇಟಿ: ಆದಿ ಶಂಕರಾಚಾರ್ಯರ ಸಮಾಧಿ ಉದ್ಘಾಟನೆ
ಚೇಸಿಂಗ್ ವೇಳೆ ಸ್ಕಾಟ್ಲೆಂಡ್ ಪ್ರಚಂಡ ಜೋಶ್ ತೋರಿತು. ಕೊನೆಯ ಹಂತದಲ್ಲಿ ಮೈಕಲ್ ಲೀಸ್ಕ್ (ಅಜೇಯ 42) ಸಿಡಿದು ನಿಂತರು. 20 ಎಸೆತ ಎದುರಿಸಿದ ಅವರು 3 ಸಿಕ್ಸರ್, 3 ಬೌಂಡರಿ ಸಿಡಿಸಿ ಕಿವೀಸ್‌ಗೆ ಭೀತಿಯೊಡ್ಡಿದರು. ಆದರೆ ಅಂತಿಮ ಓವರ್‌ನಲ್ಲಿ 26 ರನ್ ತೆಗೆಯುವ ಸವಾಲು ಕಠಿಣವಾಗಿ ಪರಿಣಮಿಸಿತು.
ಸಂಕ್ಷಿಪ್ತ ಸ್ಕೋರ್: ನ್ಯೂಜಿಲೆಂಡ್ 20 ಓವರ್, 172/5 (ಗಪ್ಟಿಲ್ 93, ಫಿಲಿಪ್ಸ್ 33, ಶರೀಫ್ 28ಕ್ಕೆ 2). ಸ್ಕಾಟ್ಲೆಂಡ್ 20 ಓವರ್, 156/5 (ಲೀಸ್ಕ್ 42, ಕ್ರಾಸ್ 27, ಬೌಲ್ಟ್ 29ಕ್ಕೆ 2).