ನ್ಯೂಯಾರ್ಕ್: ಐಸಿಸಿ ಟಿ20 ವಿಶ್ವಕಪ್ 2024ಕ್ಕೆ ಫೇವರೇಟ್ ತಂಡಗಳಲ್ಲಿ ಒಂದಾಗಿ ಬಂದಿದ್ದ ಪಾಕಿಸ್ತಾನ ತಂಡವು ಮೊದಲೆರಡು ಪಂದ್ಯಗಳನ್ನು ಸೋತು ಹೊರಬೀಳುವ ಹಂತದಲ್ಲಿದೆ. ಮೊದಲ ಪಂದ್ಯದಲ್ಲಿ ಯುಎಸ್ಎ ವಿರುದ್ದ ಸೋಲು ಕಂಡಿದ್ದ ಬಾಬರ್ ಪಡೆ, ರವಿವಾರ ಭಾರತ ವಿರುದ್ದ ಸೋಲು ಕಂಡಿದೆ.
ನ್ಯೂಯಾರ್ಕ್ ನ ನಸ್ಸೌ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಭಾರತ ನೀಡಿದ್ದ 120 ರನ್ ಬೆನ್ನತ್ತಲು ಪಾಕಿಸ್ತಾನ ಪರದಾಡಿತು. ಪಂದ್ಯವನ್ನು ಆರು ರನ್ ಅಂತರದಿಂದ ಸೋತ ಪಾಕಿಸ್ತಾನ ಇನ್ನು ಸೂಪರ್ 8 ಹಂತಕ್ಕೆ ಏರುವುದು ಕಷ್ಟಕರವಾಗಿದೆ.
ಎರಡು ಪಂದ್ಯವಾಡಿರುವ ಪಾಕಿಸ್ತಾನ ಎರಡರಲ್ಲೂ ಸೋತು ಶೂನ್ಯ ಅಂಕ ಹೊಂದಿದೆ. ಮತ್ತೊಂದೆಡೆ ಭಾರತ ಮತ್ತು ಯುಎಸ್ಎ ತಂಡಗಳು ಎರಡು ಪಂದ್ಯ ಗೆದ್ದು ನಾಲ್ಕು ಅಂಕ ಸಂಪಾದಿಸಿದೆ. ಒಂದು ಗುಂಪಿನಿಂದ ಎರಡು ತಂಡಗಳು ಮಾತ್ರ ಸೂಪರ್ 8ಗೆ ಪ್ರವೇಶ ಪಡೆಯುವ ಕಾರಣದಿಂದ ಮುಂದಿನ ಹಂತಕ್ಕೇರಲು ಭಾರತ ಮತ್ತು ಯುಎಸ್ಎ ಮೊದಲ ಪ್ರಾಶಸ್ತ್ಯ ಹೊಂದಿದೆ.
ಪಾಕ್ ಹೇಗೆ ಮುಂದಿನ ಹಂತಕ್ಕೇರಬಹುದು?
ಮುಂದಿನ ಹಂತಕ್ಕೇರಲು ಪಾಕಿಸ್ತಾನ ತಂಡವು ಉಳಿದ ಎರಡೂ ಪಂದ್ಯಗಳನ್ನು ಗೆಲ್ಲಬೇಕು. ಐರ್ಲೆಂಡ್ ಮತ್ತು ಕೆನಡಾ ವಿರುದ್ದ ಪಾಕ್ ಆಡಲಿದೆ. ಅಷ್ಟೇ ಅಲ್ಲದೆ ಯುಎಸ್ಎ ಮತ್ತು ಕೆನಡಾ ತಂಡಗಳು ಗುಂಪು ಹಂತದಲ್ಲಿ ಉಳಿದ ಪಂದ್ಯಗಳನ್ನು ಗೆಲ್ಲಬಾರದು. ಈ ಹಂತದಲ್ಲಿ ಯುಎಸ್ಎ ತಂಡಕ್ಕಿಂತ ಹೆಚ್ಚು ರನ್ ರೇಟ್ ಪಡೆದರೆ ಪಾಕ್ ಸೂಪರ್ 8 ಹಂತಕ್ಕೆ ಅವಕಾಶ ಪಡೆಯಬಹುದು. ಇಲ್ಲದಿದ್ದರೆ ಗುಂಪು ಹಂತದಿಂದಲೇ ಇಸ್ಲಮಾಬಾದ್ ವಿಮಾನ ಏರುವುದು ಖಚಿತ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ 19 ಓವರ್ ಗಳಲ್ಲಿ 119 ರನ್ ಗಳಿಸಿದರೆ, ಪಾಕಿಸ್ತಾನ ತಂಡವು 20 ಓವರ್ ಗಳಲ್ಲಿ 113 ರನ್ ಮಾತ್ರ ಗಳಿಸಿತು. ನಾಲ್ಕು ಓವರ್ ಗಳಲ್ಲಿ ಕೇವಲ 14 ರನ್ ನೀಡಿ ಮೂರು ವಿಕೆಟ್ ಪಡೆದ ಜಸ್ಪ್ರೀತ್ ಬುಮ್ರಾ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.