Advertisement

ಇಂದೋರ್‌ನಲ್ಲಿ ಇಂದು ಕ್ಲೀನ್‌ ಸ್ವೀಪ್‌ಗೆ ಸ್ಕೆಚ್‌; ಅಂತಿಮ ಟಿ20 ಮುಖಾಮುಖಿ

10:59 PM Oct 03, 2022 | Team Udayavani |

ಇಂದೋರ್‌: ದಕ್ಷಿಣ ಆಫ್ರಿಕಾ ವಿರುದ್ಧ ತವರಲ್ಲಿ ಮೊದಲ ಸಲ ಟಿ20 ಸರಣಿ ಗೆದ್ದ ಸಡಗರದಲ್ಲಿರುವ ಭಾರತವೀಗ ಇನ್ನೊಂದು ಹೆಜ್ಜೆ ಮುಂದಿರಿಸಿ ಕ್ಲೀನ್‌ ಸ್ವೀಪ್‌ಗೆ ಸ್ಕೆಚ್‌ ಹಾಕಿದೆ. ಇಂದೋರ್‌ನಲ್ಲಿ ಮಂಗಳವಾರ ಅಂತಿಮ ಮುಖಾಮುಖಿ ಏರ್ಪಡಲಿದ್ದು, ಇದನ್ನೂ ಗೆದ್ದು ವಿಜಯದಶಮಿಯನ್ನು ಆಚರಿಸುವುದು ಹಾಗೂ ಟಿ20 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಗೆ ಒಂದು ಹಂತದ ಆತ್ಮವಿಶ್ವಾಸ ಗಳಿಸುವುದು ರೋಹಿತ್‌ ಪಡೆಯ ಯೋಜನೆ.

Advertisement

ಭಾರತ ಈ ಪಂದ್ಯಕ್ಕಾಗಿ ಸಣ್ಣ ಮಟ್ಟದ ಪ್ರಯೋಗ ನಡೆಸುವ ಸಾಧ್ಯತೆ ಇದೆ. ಮೊದಲೆರಡು ಪಂದ್ಯಗಳಲ್ಲಿ ಆಡದವರನ್ನು ಇಲ್ಲಿ ಆಡಿಸಬಹುದು. ಇಲ್ಲಿ ಶ್ರೇಯಸ್‌ ಅಯ್ಯರ್‌ ಕಣಕ್ಕಿಳಿ ಯುವುದು ಬಹುತೇಕ ಖಚಿತ. ವಿರಾಟ್‌ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದ್ದು, ಮಧ್ಯಮ ಕ್ರಮಾಂಕದ ಸ್ಪೆಷಲಿಸ್ಟ್‌ ಬ್ಯಾಟರ್‌ ಆಗಿರುವವರು ಅಯ್ಯರ್‌ ಮಾತ್ರ. ಉಳಿದಂತೆ ಬೌಲಿಂಗ್‌ ವಿಭಾ ಗದಲ್ಲಿ ಹೆಚ್ಚಿನ ಬದಲಾವಣೆ ಸಂಭವಿ ಸಬಹುದು. ಉಮೇಶ್‌ ಯಾದವ್‌, ಶಾಬಾಜ್‌ ಅಹ್ಮದ್‌, ಮೊಹಮ್ಮದ್‌ ಸಿರಾಜ್‌, ಯಜುವೇಂದ್ರ ಚಹಲ್‌ ಅವರಲ್ಲಿ ಕೆಲವರಿಗೆ ಅವಕಾಶ ಲಭಿಸುವ ಸಾಧ್ಯತೆ ಇದೆ.

ಬೌಲಿಂಗ್‌ ಕಳಪೆಯೇ?
ಸರಣಿ ವಶಪಡಿಸಿಕೊಂಡರೂ ಭಾರತದ ಸಮಸ್ಯೆಗಳಿನ್ನೂ ಪರಿಹಾರ ಗೊಂಡಿಲ್ಲ ಎಂಬುದು ಅನೇಕರ ಅಭಿಪ್ರಾಯ. ಮುಖ್ಯವಾಗಿ ಬೌಲಿಂಗ್‌ ಸಮಸ್ಯೆ ಎದ್ದು ಕಾಣುತ್ತದೆ. ಗುವಾಹಟಿ ಯಲ್ಲಿ ಡೇವಿಡ್‌ ಮಿಲ್ಲರ್‌ ಮತ್ತು ಕ್ವಿಂಟನ್‌ ಡಿ ಕಾಕ್‌ ಮುನುಗ್ಗಿ ಬರುವ ವೇಳೆ ಟೀಮ್‌ ಇಂಡಿಯಾದ ಬೌಲಿಂಗ್‌ ಸಂಪೂರ್ಣ ಚಿಂದಿಯಾಗಿತ್ತು. ಆದರೆ ತಿರುವನಂತಪುರ ಮೊದಲ ಪಂದ್ಯ ದಲ್ಲಿ ದಕ್ಷಿಣ ಆಫ್ರಿಕಾವನ್ನು 106ಕ್ಕೆ ನಿಯಂತ್ರಿಸಿದ್ದು ಇದೇ ಬೌಲಿಂಗ್‌ ಪಡೆ ಎಂಬುದನ್ನು ಮರೆಯು ವಂತಿಲ್ಲ. ಅರ್ಥಾತ್‌, ಬೌಲಿಂಗ್‌ ಟ್ರ್ಯಾಕ್‌ನಲ್ಲಿ ಭಾರತದ ದಾಳಿ ಪರಿಣಾಮಕಾರಿ ಯಾಗಿಯೇ ಇತ್ತು.

ಗುವಾಹಟಿಯ ಬ್ಯಾಟಿಂಗ್‌ ಸ್ವರ್ಗದಲ್ಲಿ ಸಂಪೂರ್ಣ ಹಳಿ ತಪ್ಪಿತು, ಅಷ್ಟೇ. ಗುವಾಹಟಿಯಲ್ಲಿ ಎರಡೂ ತಂಡ ಗಳಿಗೆ ಉರುಳಿಸಲು ಸಾಧ್ಯವಾದದ್ದು ತಲಾ 3 ವಿಕೆಟ್‌ ಮಾತ್ರ. ಇಲ್ಲಿ 6 ವಿಕೆಟಿಗೆ 458 ರನ್‌ ಹರಿದು ಬಂದಿತ್ತು. ಒಂದು ಶತಕ, ಮೂರು ಅರ್ಧ ಶತಕ ದಾಖಲಾಗಿತ್ತು. ಹೀಗಾಗಿ ಇಂಥ ಟ್ರ್ಯಾಕ್‌ನಲ್ಲಿ ಬೌಲಿಂಗ್‌ ವಿಫ‌ಲಗೊಂಡಿತು ಎಂದು ದೂರುವುದರಲ್ಲಿ ಅರ್ಥವಿಲ್ಲ ಎಂದೂ ವಿಶ್ಲೇಷಿಸಲಾಗುತ್ತಿದೆ.

ಎರಡು ಪಂದ್ಯ, ನಾಲ್ಕೇ ವಿಕೆಟ್‌!
ದಕ್ಷಿಣ ಆಫ್ರಿಕಾ ಪಾಲಿಗೆ ಇದೊಂದು ಪ್ರತಿಷ್ಠೆಯ ಕಾಳಗ. ಐಪಿಎಲ್‌ ಆಡಿದ ಸಾಕಷ್ಟು ಅನುಭವಿಗಳಿದ್ದರೂ ಅವರಿಲ್ಲಿ ನಿರೀಕ್ಷಿತ ಯಶಸ್ಸು ಕಂಡಿಲ್ಲ. ಬೌಲಿಂಗ್‌ ವಿಭಾಗವಂತೂ ಘೋರ ವೈಫ‌ಲ್ಯ ಕಂಡಿದೆ. ಎರಡು ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ಬೌಲರ್‌ಗಳಿಗೆ ಉರುಳಿಸಲು ಸಾಧ್ಯವಾದದ್ದು 4 ವಿಕೆಟ್‌ ಮಾತ್ರ ಎಂಬುದನ್ನು ಗಮನಿಸಬೇಕು. ಒಂದು ರನೌಟ್‌ ಆಗಿತ್ತು.

Advertisement

ಬ್ಯಾಟಿಂಗ್‌ ವಿಭಾಗವೂ ಇದಕ್ಕೆ ಹೊರತಲ್ಲ. ಗುವಾಹಟಿಯಲ್ಲಿ ಕಿಲ್ಲರ್‌ ಮಿಲ್ಲರ್‌ ಮತ್ತು ಕ್ವಿಂಟನ್‌ ಡಿ ಕಾಕ್‌ ಸಿಡಿದು ನಿಂತಿದ್ದನ್ನು ಹೊರತುಪಡಿಸಿದರೆ ಹರಿಣಗಳ ಬ್ಯಾಟಿಂಗ್‌ “ಟೋಟಲಿ ಫೇಲ್‌’ ಎಂದೇ ಹೇಳಬೇಕು. ಟಿ20 ವಿಶ್ವಕಪ್‌ಗ್ೂ ಮುನ್ನ ಡಿ ಕಾಕ್‌ ಮತ್ತು ಮಿಲ್ಲರ್‌ ಅತ್ಯಗತ್ಯ ಫಾರ್ಮ್ ಕಂಡುಕೊಂಡದ್ದು ಹರಿಣಗಳ ಪಾಲಿನ ಸಮಾಧಾನಕರ ಸಂಗತಿ.

ಆದರೆ ನಾಯಕ ಟೆಂಬ ಬವುಮ ಈ ಸರಣಿಯಲ್ಲಿನ್ನೂ ಖಾತೆಯನ್ನೇ ತೆರೆಯದಿರುವುದು ದಕ್ಷಿಣ ಆಫ್ರಿಕಾ ಪಾಲಿನ ಗಂಡಾಂತರಕಾರಿ ಸುದ್ದಿ. ಎರಡೂ ಪಂದ್ಯಗಳಲ್ಲಿ ಬವುಮ ಸೊನ್ನೆ ಸುತ್ತಿ ಹೋಗಿದ್ದಾರೆ. ಒಂದರಲ್ಲಿ 4 ಎಸೆತ, ಇನ್ನೊಂದರಲ್ಲಿ 7 ಎಸೆತ ಎದುರಿಸಿದ್ದಾರೆ. ದೀಪಕ್‌ ಚಹರ್‌ ಅವರ ಒಂದು ಓವರ್‌ ಅನ್ನು ಮೇಡನ್‌ ಮಾಡಿದ್ದೂ ಇವರೇ!

ಟೆಂಬ ಬವುಮ ಸಾಲಲ್ಲಿರುವ ಮತ್ತೋರ್ವ ಬ್ಯಾಟರ್‌ ರಿಲೀ ರೋಸ್ಯೂ. ಇವರದೂ ಎರಡು ಪಂದ್ಯಗಳಲ್ಲಿ ಶೂನ್ಯ ಸಂಪಾದನೆ.

ಸೂರ್ಯಕುಮಾರ್‌ ಸಿಕ್ಸರ್‌ ದಾಖಲೆ
ಭಾರತದ ನೂತನ ಡ್ಯಾಶಿಂಗ್‌ ಬ್ಯಾಟರ್‌ ಸೂರ್ಯಕುಮಾರ್‌ ಯಾದವ್‌ ದಾಖಲೆಗಳ ಮೇಲೆ ದಾಖಲೆ ಪೇರಿಸುತ್ತ ಹೋಗುತ್ತಿದ್ದಾರೆ. ಗುವಾಹಟಿ ಪಂದ್ಯದಲ್ಲಿ ಅವರು ನೂತನ ಸಿಕ್ಸರ್‌ ಮೈಲುಗಲ್ಲಿ ನೆಟ್ಟರು. ಕ್ಯಾಲೆಂಡರ್‌ ವರ್ಷವೊಂದರ ಟಿ20 ಪಂದ್ಯಗಳಲ್ಲಿ 50 ಸಿಕ್ಸರ್‌ ಸಿಡಿಸಿದ ವಿಶ್ವದ ಮೊದಲ ಕ್ರಿಕೆಟಿಗನೆನಿಸಿದರು.
ಕಳೆದ ವರ್ಷ ಮೊಹಮ್ಮದ್‌ ರಿಜ್ವಾನ್‌ 42 ಸಿಕ್ಸರ್‌ ಬಾರಿಸಿದ್ದು ದಾಖಲೆಯಾಗಿತ್ತು. ಇದನ್ನು ಸೂರ್ಯ ಆಸ್ಟ್ರೇಲಿಯ ಎದುರಿನ ಹೈದರಾಬಾದ್‌ ಪಂದ್ಯದಲ್ಲಿ ಹಿಂದಿಕ್ಕಿದ್ದರು. ಗುವಾಹಟಿ ಪಂದ್ಯದ ಬಳಿಕ ಇದು 52ಕ್ಕೆ ಏರಿದೆ. ನ್ಯೂಜಿಲ್ಯಾಂಡ್‌ ಆರಂಭಕಾರ ಮಾರ್ಟಿನ್‌ ಗಪ್ಟಿಲ್‌ 2021ರಲ್ಲಿ 41 ಸಿಕ್ಸರ್‌ ಬಾರಿಸಿದ್ದು, 3ನೇ ಸ್ಥಾನದಲ್ಲಿದ್ದಾರೆ.

ದಕ್ಷಿಣ ಆಫ್ರಿಕಾ ಎದುರಿನ ಗುವಾಹಟಿ ಪಂದ್ಯದಲ್ಲಿ ಸೂರ್ಯ ಕೇವಲ 22 ಎಸೆತಗಳಿಂದ 61 ರನ್‌ ಮಾಡಿದ್ದರು. ಇದು 5 ಸಿಕ್ಸರ್‌ಗಳನ್ನು ಒಳಗೊಂಡಿತ್ತು.

ಇಂದೋರ್‌ನಲ್ಲಿದು ಮೂರನೇ ಪಂದ್ಯ
ಇಂದೋರ್‌ನ “ಹೋಳ್ಕರ್‌ ಸ್ಟೇಡಿಯಂ’ನಲ್ಲಿ ನಡೆಯಲಿರುವ 3ನೇ ಟಿ20 ಪಂದ್ಯ ಇದಾಗಿದೆ. ಹಿಂದಿನೆರಡೂ ಪಂದ್ಯಗಳನ್ನು ಶ್ರೀಲಂಕಾ ವಿರುದ್ಧ ಆಡಲಾಗಿತ್ತು. ಎರಡನ್ನೂ ಭಾರತ ಗೆದ್ದಿತ್ತು.

ಮೊದಲ ಮುಖಾಮುಖಿ ಏರ್ಪಟ್ಟದ್ದು 2017ರಲ್ಲಿ. ಭಾರತದ ಗೆಲುವಿನ ಅಂತರ 88 ರನ್‌. ರೋಹಿತ್‌ ಶರ್ಮ (118) ಮತ್ತು ಕೆ.ಎಲ್‌. ರಾಹುಲ್‌ (89) ಜೋಡಿಯ ಅಸಾಮಾನ್ಯ ಬ್ಯಾಟಿಂಗ್‌ ಸಾಹಸದಿಂದ ಭಾರತ 5ಕ್ಕೆ 260 ರನ್‌ ರಾಶಿ ಹಾಕಿತು. ಶ್ರೀಲಂಕಾ 17.2 ಓವರ್‌ಗಳಲ್ಲಿ 172ಕ್ಕೆ ಆಲೌಟ್‌ ಆಯಿತು. ಚಹಲ್‌ 4, ಕುಲದೀಪ್‌ ಯಾದವ್‌ 3 ವಿಕೆಟ್‌ ಉರುಳಿಸಿದರು.

2020ರ ಕೊನೆಯ ಮುಖಾಮುಖಿಯಲ್ಲಿ ಭಾರತದ ಗೆಲುವಿನ ಅಂತರ 7 ವಿಕೆಟ್‌. ಶ್ರೀಲಂಕಾ 9ಕ್ಕೆ 142 ರನ್‌ ಗಳಿಸಿದರೆ, ಕೊಹ್ಲಿ ಪಡೆ 17.3 ಓವರ್‌ಗಳಲ್ಲಿ 3ಕ್ಕೆ 144 ರನ್‌ ಮಾಡಿತು. ಶಾದೂìಲ್‌ 3, ಸೈನಿ, ಕುಲದೀಪ್‌ ತಲಾ 2 ವಿಕೆಟ್‌ ಉರುಳಿಸಿದರು. ಚೇಸಿಂಗ್‌ ವೇಳೆ ರಾಹುಲ್‌ ಪಂದ್ಯದಲ್ಲೇ ಸರ್ವಾಧಿಕ 45, ಧವನ್‌ 32, ಅಯ್ಯರ್‌ 34, ಕೊಹ್ಲಿ ಅಜೇಯ 30 ರನ್‌ ಮಾಡಿದರು.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next