ಗುವಾಹಟಿ: ಏಕದಿನ ವಿಶ್ವಕಪ್ ವಿಜೇತ ಆಸ್ಟ್ರೇಲಿಯಾ ತಂಡವು ಟಿ20 ಸರಣಿಯಲ್ಲಿ ಗೆಲುವಿನ ಹುಡುಕಾಟದಲ್ಲಿ ಭಾರತದ ವಿರುದ್ದದ ಐದು ಪಂದ್ಯಗಳ ಟಿ20 ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಸೋಲು ಕಂಡಿರುವ ಕಾಂಗರೂ ಪಡೆ, ಸರಣಿ ಉಳಿಸಬೇಕಾದರೆ ಇಂದಿನ ಪಂದ್ಯ ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿದೆ.
ಆದರೆ ಇದೀಗ ಮುಂದಿನ ಮೂರು ಪಂದ್ಯಗಳಿಗೆ ಆಸೀಸ್ ತಂಡದಲ್ಲಿ ಹಲವು ಬದಲಾವಣೆ ಮಾಡಲಾಗಿದೆ. ವಿಶ್ವಕಪ್ ನಲ್ಲಿ ಆಡಿದ್ದ ಆಟಗಾರರಿಗೆ ವಿರಾಮ ನೀಡಲಾಗಿದ್ದು, ಅವರು ತವರಿಗೆ ತೆರಳಿದ್ದಾರೆ.
ಗ್ಲೆನ್ ಮ್ಯಾಕ್ಸವೆಲ್, ಮಾರ್ಕಸ್ ಸ್ಟೋಯಿನಸ್, ಜೋಶ್ ಇಂಗ್ಲಿಶ್, ಸೀನ್ ಅಬೋಟ್, ಸ್ಟೀವ್ ಸ್ಮಿತ್ ಮತ್ತು ಆ್ಯಡಂ ಜಂಪಾ ಅವರು ಮುಂದಿನ ಪಂದ್ಯಗಳಿಗೆ ಲಭ್ಯವಿರುವುದಿಲ್ಲ. ಅವರಲ್ಲಿ ಸ್ಮಿತ್ ಮತ್ತು ಜಂಪಾ ಈಗಾಗಲೇ ತವರಿಗೆ ತೆರಳಿದ್ದಾರೆ.
ವಿಶ್ವಕಪ್ ಆಡಿದವರಲ್ಲಿ ಟ್ರಾವಿಸ್ ಹೆಡ್ ಮಾತ್ರ ಟಿ20 ತಂಡದಲ್ಲಿ ಉಳಿಯುತ್ತಾರೆ. ಹೆಡ್ ಆರಂಭಿಕ ಹಲವು ಪಂದ್ಯಗಳಲ್ಲಿ ಆಡಿರಲಿಲ್ಲ, ಆದರೆ ನಿರ್ಣಾಯಕ ಸಮಯದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು.
ಇದೀಗ ಆಸೀಸ್ ಸ್ಕ್ವಾಡ್ ಗೆ ಬೆನ್ ಮೆಕ್‌ಡರ್ಮಾಟ್, ಜೋಶ್ ಫಿಲಿಪ್, ಬೆನ್ ಡ್ವಾರ್ಶುಯಿಸ್ ಮತ್ತು ಕ್ರಿಸ್ ಗ್ರೀನ್ ಸೇರಿಕೊಂಡಿದ್ದಾರೆ.
ಆಸ್ಟ್ರೇಲಿಯದ ತಂಡ: ಮ್ಯಾಥ್ಯೂ ವೇಡ್ (ನಾ), ಜೇಸನ್ ಬೆಹ್ರೆನ್‌ಡಾರ್ಫ್, ಟಿಮ್ ಡೇವಿಡ್, ಬೆನ್ ಡ್ವಾರ್ಶುಯಿಸ್, ನಾಥನ್ ಎಲ್ಲಿಸ್, ಕ್ರಿಸ್ ಗ್ರೀನ್, ಆರನ್ ಹಾರ್ಡಿ, ಟ್ರಾವಿಸ್ ಹೆಡ್, ಬೆನ್ ಮೆಕ್‌ಡರ್ಮಾಟ್, ಜೋಶ್ ಫಿಲಿಪ್, ತನ್ವೀರ್ ಸಂಘ, ಮ್ಯಾಟ್ ಶಾರ್ಟ್, ಕೇನ್ ರಿಚರ್ಡ್‌ಸನ್