ವೆಲ್ಲಿಂಗ್ಟನ್: ಯುವ ಆಟ ಗಾರರನ್ನು ಒಳಗೊಂಡ ಹಾರ್ದಿಕ್ ಪಾಂಡ್ಯ ನೇತೃತ್ವದ ಭಾರತೀಯ ತಂಡವು ಶುಕ್ರವಾರದಿಂದ ಆರಂಭವಾಗುವ 3 ಪಂದ್ಯಗಳ ಟಿ20 ಸರಣಿಯಲ್ಲಿ ನ್ಯೂಜಿ ಲ್ಯಾಂಡ್ ತಂಡವನ್ನು ಎದುರಿಸಲಿದೆ.
ಎರಡು ವರ್ಷಗಳ ಬಳಿಕ ನಡೆ ಯುವ ಮಂದಿನ ಟಿ20 ಕೂಟವನ್ನು ಗಮನದಲ್ಲಿಟ್ಟುಕೊಂಡು ಉಭಯ ತಂಡಗಳು ಈ ಸರಣಿಯಲ್ಲಿ ಆಡಲು ಸಿದ್ಧತೆ ನಡೆಸಿದೆ. ಮುಂದಿನ ವಿಶ್ವಕಪ್‌ನಲ್ಲಿ ತಂಡದ ನಾಯಕತ್ವ ವಹಿಸಲಿರುವ ಹಾರ್ದಿಕ್ ಪಾಂಡ್ಯ ಇದೀಗ ರೋಹಿತ್ ಶರ್ಮ ಅವರ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸುತ್ತಿದ್ದಾರೆ.
ಟಿ20 ಕ್ರಿಕೆಟ್‌ನ ಪರಿಣತ ಆಟಗಾರ ರನ್ನು ಮಾತ್ರ ತಂಡದಲ್ಲಿ ಸೇರಿಸಿಕೊಳ್ಳಲು ಆಡಳಿತವು ಉತ್ಸುಕವಾಗಿದೆ ಎಂದು ಪ್ರಭಾರ ಕೋಚ್ ವಿವಿಎಸ್ ಲಕ್ಷ್ಮಣ್ ಹೇಳಿದ್ದಾರೆ. ಮುಂದಿನ ವರ್ಷದ ವಿಶ್ವಕಪ್‌ಗಾಗಿ ಆಟಗಾರರು ಏಕದಿನ ಪಂದ್ಯಗಳತ್ತ ಗಮನ ಹರಿಸಿದರೂ ಭಾರತವು ಇಲ್ಲಿ ಮತ್ತು ಮುಂದಿನ ವಿಶ್ವಕಪ್ ಮೊದಲು ನಡೆಯುವ 9 ಟಿ20 ಪಂದ್ಯಗಳಲ್ಲಿ ಭರ್ಜರಿ ಪ್ರದರ್ಶನ ನೀಡಲು ಬಯಸಿದೆ.
ಮುಂದಿನ ಟಿ20 ವಿಶ್ವಕಪ್‌ನಲ್ಲಿ ರೋಹಿತ್, ವಿರಾಟ್ ಕೊಹ್ಲಿ ಆಡುವ ಸಾಧ್ಯತೆ ಕಡಿಮೆ ಇರುವ ಕಾರಣ ಭಾರತ ಭವಿಷ್ಯದ ಬಗ್ಗೆ ಈಗಲೇ ಯೋಜನೆ ರೂಪಿಸಿಕೊಳ್ಳುವುದು ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ಯುವ ಆಟಗಾರರನ್ನು ಹೆಚ್ಚಿನ ಪಂದ್ಯಗಳಲ್ಲಿ ಆಡಿಸುವುದು ಉತ್ತಮ. ಅಗ್ರ ಕ್ರಮಾಂಕದಲ್ಕಿಲ ರಿಷಬ್ ಪಂತ್ ಅವರಿಗೆ ಇನ್ನೊಂದು ಅವಕಾಶ ಕಲ್ಪಿಸಿದರೂ ಇಶಾನ್ ಕಿಶನ್ ಮತ್ತು ಶುಭ್‌ಮನ್ ಗಿಲ್ ಅವರು ಮೊದಲ ಪಂದ್ಯಕ್ಕೆ ಆರಂಭಿಕರಾಗಿ ಆಡುವ ಸಾಧ್ಯತೆಯಿದೆ. ಭಾರತದ ಈ ತಂಡ ದ್ವಿತೀಯ ದರ್ಜೆಯಾಗಿದ್ದರೂ ಸಾಕಷ್ಟು ಆಟಗಾರರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅನುಭವ ಹೊಂದಿದ್ದಾರೆ.
ನಾಲ್ಕು ವರ್ಷಗಳ ಹಿಂದೆ ಅಂಡರ್ 19 ವಿಶ್ವಕಪ್‌ನಲ್ಲಿ ಭರ್ಜರಿ ಆಟ ಪ್ರದರ್ಶಿಸಿದ್ದ ಗಿಲ್ ಇಲ್ಲಿ ಟಿ20 ಕ್ರಿಕೆಟ್‌ಗೆ ಪದಾರ್ಪಣೆಗೈಯುವ ಸಾಧ್ಯತೆಯಿದೆ. ಕಳೆದೊಂದು ವರ್ಷದಲ್ಲಿ ತಂಡದಲ್ಲಿ ಗಮನಾರ್ಹ ನಿರ್ವಹಣೆ ನೀಡುತ್ತಿದ್ದ ಕಿಶನ್ ಆರಂಭಿಕರಾಗಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಪ್ರಯತ್ನಿಸಬಹುದು. ಇನ್ನೊಂದು ಅವಕಾಶ ನೀಡಿರುವ ಸಂಜು ಸ್ಯಾಮ್ಸನ್ ಇಲ್ಲಿ ಮಿಂಚಬೇಕಾದ ಒತ್ತಡದಲ್ಲಿದ್ದಾರೆ.
ಭುವನೇಶ್ವರ್ ಕುಮಾರ್‌ಮತ್ತು ಅರ್ಷದೀಪ್ ಸಿಂಗ್ ಹೊಸ ಚೆಂಡಿನೊಂದಿಗೆ ದಾಳಿ ಆರಂಭಿಸುವ ನಿರೀಕ್ಷೆಯಿದೆ. ಹರ್ಷಲ್ ಪಟೇಲ್ ಮತ್ತು ಮೊಹಮ್ಮದ್ ಸಿರಾಜ್ ಇಲ್ಲಿ ಆಡುವ ಸಾಧ್ಯತೆಯಿದೆ.
ಪೂರ್ಣ ಪ್ರಮಾಣದ ತಂಡ
ಇದೇ ವೇಳೆ ನ್ಯೂಜಿಲ್ಯಾಂಡ್ ತಂಡವು ಕೇನ್ ವಿಲಿಯಮ್ಸನ್ ನಾಯಕತ್ವದಲ್ಲಿ ಪೂರ್ಣ ಪ್ರಮಾಣದ ತಂಡವನ್ನು ಕಣಕ್ಕಿಳಿಸುವ ನಿರೀಕ್ಷೆಯಿದೆ. ಟ್ರೆಂಟ್ ಬೌಲ್ಟ್ ಅನುಪಸ್ಥಿತಿಯಲ್ಲಿ ನ್ಯೂಜಿಲ್ಯಾಂಡ್ ತಂಡದ ವೇಗದ ಬೌಲರ್‌ಗಳನ್ನು ದಾಳಿಗೆ ಇಳಿಸಲು ಪ್ರಯತ್ನಿಸಲಿದೆ. ಓಪನರ್ ಮಾರ್ಟಿನ್ ಗಪ್ಟಿಲ್ ಆಡದ ಕಾರಣ ಫಿನ್ ಅಲೆನ್ ಅವರು ಅಗ್ರ ಕ್ರಮಾಂಕದಲ್ಲಿ ಡೆವೊನ್ ಕಾನ್ವೆ ಜತೆ ಆಡಲಿದ್ದಾರೆ.
ಟಿ20 ಸರಣಿ
ದಿನಾಂಕ ಸ್ಥಳ
ನ. 18 ವೆಲ್ಲಿಂಗ್ಟನ್
ನ. 20 ಮೌಂಟ್ ಮಾಂಗನುಯಿ
ನ. 22 ನೇಪಿಯರ್