ದುಬಾೖ: ವೆಸ್ಟ್ ಇಂಡೀಸ್ ವಿರುದ್ಧದ ಏಕೈಕ ಟಿ-20 ಪಂದ್ಯದಲ್ಲಿ 9 ವಿಕೆಟ್ ಅಂತರದ ಭಾರೀ ಸೋಲುಂಡ ಭಾರತಕ್ಕೆ ಮತ್ತೂಂದು ಹಿನ್ನಡೆಯಾಗಿದೆ. ಟೀಮ್ ರಾಂಕಿಂಗ್ನಲ್ಲಿ ಒಂದು ಸ್ಥಾನ ಕುಸಿದು 5ಕ್ಕೆ ಬಂದು ನಿಂತಿದೆ.
ಇನ್ನೊಂದೆಡೆ, ಭಾರತವನ್ನು ಹಿಂದಿಕ್ಕಿದ ವೆಸ್ಟ್ ಇಂಡೀಸ್ 4ನೇ ಸ್ಥಾನಕ್ಕೇರಿದೆ. ಸದ್ಯ ವಿಂಡೀಸ್ 117 ಹಾಗೂ ಭಾರತ 115 ಅಂಕಗಳನ್ನು ಹೊಂದಿವೆ. ಈ ಪಂದ್ಯಕ್ಕೂ ಮುನ್ನ ವಿಂಡೀಸ್ ಭಾರತಕ್ಕಿಂತ 4 ಅಂಕಗಳ ಹಿನ್ನಡೆಯಲ್ಲಿತ್ತು.
ನ್ಯೂಜಿಲ್ಯಾಂಡ್ ಅಗ್ರಸ್ಥಾನದಲ್ಲಿ ಮುಂದುವರಿದಿದ್ದು, ಇಂಗ್ಲೆಂಡ್ ಮತ್ತು ಪಾಕಿಸ್ಥಾನ ಅನಂತರದ ಸ್ಥಾನದಲ್ಲಿವೆ. ಬಾಂಗ್ಲಾದೇಶ ಕೊನೆಯ ಸ್ಥಾನದಲ್ಲೇ ಉಳಿದುಕೊಂಡಿದೆ. ಬಾಂಗ್ಲಾಕ್ಕಿಂತ ಮೇಲೆ ಅಫ್ಘಾನಿಸ್ಥಾನವಿದೆ.
ಬ್ಯಾಟಿಂಗ್ ರಾಂಕಿಂಗ್ನಲ್ಲಿ ವಿರಾಟ್ ಕೊಹ್ಲಿ ಅವರ ನಂ.1 ಸ್ಥಾನಕ್ಕೆ ಯಾವುದೇ ಧಕ್ಕೆ ಆಗಿಲ್ಲ. ಆರನ್ ಫಿಂಚ್ 2ನೇ, ಕೇನ್ ವಿಲಿಯಮ್ಸನ್ 3ನೇ ಸ್ಥಾನದಲ್ಲಿದ್ದಾರೆ. ರವಿವಾರ ಭಾರತದ ವಿರುದ್ಧ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿ ಅಜೇಯ 125 ರನ್ ಸಿಡಿಸಿದ ಎವಿನ್ ಲೆವಿಸ್ 4ನೇ ಸ್ಥಾನಕ್ಕೆ ಲಗ್ಗೆ ಇರಿಸಿದ್ದಾರೆ.
ಬೌಲಿಂಗ್ ವಿಭಾಗದಲ್ಲಿ ಇಮಾದ್ ವಾಸಿಮ್ ಮೊದಲ ಸ್ಥಾನ ಕಾಯ್ದುಕೊಂಡಿದ್ದಾರೆ. ಜಸ್‌ಪ್ರೀತ್ ಬುಮ್ರಾ, ಇಮ್ರಾನ್ ತಾಹಿರ್, ರಶೀದ್ ಖಾನ್ ಅನಂತರದ ಸ್ಥಾನದಲ್ಲಿದ್ದಾರೆ.
ಟಿ-20 ರಾಂಕಿಂಗ್: 1. ನ್ಯೂಜಿಲ್ಯಾಂಡ್ (125), 2. ಇಂಗ್ಲೆಂಡ್ (123), 3. ಪಾಕಿಸ್ಥಾನ (121), 4. ವೆಸ್ಟ್ ಇಂಡೀಸ್ (117), 5. ಭಾರತ (115), 6. ಆಸ್ಟ್ರೇಲಿಯ (110), 7. ದಕ್ಷಿಣ ಆಫ್ರಿಕಾ (110), 8. ಶ್ರೀಲಂಕಾ (95), 9. ಅಫ್ಘಾನಿಸ್ಥಾನ (86), 10. ಬಾಂಗ್ಲಾದೇಶ (78).