Advertisement

T20; ಮಸ್ಟ್‌  ವಿನ್‌ ಒತ್ತಡದಲ್ಲಿ ಭಾರತ; ವಿಂಡೀಸ್‌ಗೆ ಸರಣಿ ನಿರೀಕ್ಷೆ

12:11 AM Aug 08, 2023 | Team Udayavani |

ಪ್ರೊವಿಡೆನ್ಸ್‌ (ಗಯಾನಾ):  ಐಪಿಎಲ್‌ನಲ್ಲಿ ದೊಡ್ಡ ಹೀರೋಗಳಾಗಿ ಮೆರೆಯುವ ಟೀಮ್‌ ಇಂಡಿಯಾ ಆಟಗಾರರು ವೆಸ್ಟ್‌ ಇಂಡೀಸ್‌ ನೆಲದಲ್ಲಿ ಪರದಾಟ ನಡೆಸುತ್ತಿರುವುದು ಅಚ್ಚರಿ ಹಾಗೂ ಆಘಾತ ಮೂಡಿಸಿದೆ. ಮೊದಲೆರಡೂ ಟಿ20 ಪಂದ್ಯಗಳನ್ನು ಬ್ಯಾಟಿಂಗ್‌ ವೈಫ‌ಲ್ಯದಿಂದ ಕಳೆದು ಕೊಂಡಿರುವ ಪಾಂಡ್ಯ ಪಡೆಯೀಗ ಸರಣಿಯನ್ನೂ ಕಳೆದುಕೊಳ್ಳುವ ಭೀತಿಗೆ ಸಿಲುಕಿದೆ. ಮಂಗಳವಾರ ಪ್ರೊವಿಡೆನ್ಸ್‌ ಅಂಗಳದಲ್ಲೇ ನಿರ್ಣಾಯಕ ಪಂದ್ಯ ನಡೆಯಲಿದ್ದು, ಗೆದ್ದರಷ್ಟೇ ಭಾರತಕ್ಕೆ ಉಳಿಗಾಲ ಎಂಬುದು ಸದ್ಯದ ಸ್ಥಿತಿ.

Advertisement

ಇನ್ನೊಂದೆಡೆ ತವರಿನಂಗಳದಲ್ಲೇ ಟೆಸ್ಟ್‌ ಹಾಗೂ ಏಕದಿನ ಸರಣಿಗಳೆರೆನ್ನೂ ಕಳೆದುಕೊಂಡಿರುವ ವೆಸ್ಟ್‌ ಇಂಡೀಸ್‌, ಟಿ20 ಸರಣಿಯನ್ನಾದರೂ ಗೆದ್ದು ಪ್ರತಿಷ್ಠೆ ಉಳಿಸಿಕೊಳ್ಳುವ ಹವಣಿಕೆಯಲ್ಲಿದೆ.

ನಿಧಾನ ಗತಿಯ ಪಿಚ್‌
ಕೆರಿಬಿಯನ್‌ನ ನಿಧಾನ ಗತಿಯ ಪಿಚ್‌ಗಳು ಭಾರತದ ಯುವ ಬ್ಯಾಟರ್‌ಗಳಿಗೆ ಭಾರೀ ಸವಾಲಾಗಿ ಪರಿಣಮಿಸಿರುವುದು ರಹಸ್ಯವೇನಲ್ಲ. ಈವರೆಗೆ ಸರಾಸರಿ 150ರ ಲೆಕ್ಕದಲ್ಲಿ ಇಲ್ಲಿ ರನ್‌ ಹರಿದು ಬಂದಿದೆ, ಅಷ್ಟೇ. ದ್ವಿತೀಯ ಪಂದ್ಯವನ್ನು ಸೋತ ಬಳಿಕ ಪಾಂಡ್ಯ ಹೇಳಿದಂತೆ, ಕನಿಷ್ಠ ಹತ್ತಿಪ್ಪತ್ತು ರನ್‌ ಜಾಸ್ತಿ ಗಳಿಸಿದ್ದರೆ ಭಾರತಕ್ಕೆ ಗೆಲುವಿನ ಅವಕಾಶ ಇರುತ್ತಿತ್ತು. ಆದರೆ ತಂಡದ ಅಗ್ರ ಕ್ರಮಾಂಕದ ಬ್ಯಾಟಿಂಗ್‌ ಸಂಪೂರ್ಣ ವೈಫ‌ಲ್ಯ ಕಾಣುತ್ತಿದೆ. ಮಧ್ಯಮ ಕ್ರಮಾಂಕದಲ್ಲಿ ತಿಲಕ್‌ ವರ್ಮ ಹೊರತುಪಡಿಸಿದರೆ ಉಳಿದವರ ಕೊಡುಗೆ ಏನೂ ಇಲ್ಲ. ರವಿವಾರ ಅರ್ಷದೀಪ್‌ ಮತ್ತು ಬಿಷ್ಣೋಯಿ ಒಂದು ಬೌಂಡರಿ, ಒಂದು ಸಿಕ್ಸರ್‌ ಬಾರಿಸಿದ್ದರಿಂದ ತಂಡದ ಸ್ಕೋರ್‌ ನೂರೈವತ್ತರ ಗಡಿ ದಾಟಿದ್ದನ್ನು ಮರೆಯುವಂತಿಲ್ಲ.

ಪೂರಣ್‌ ಆಟವೊಂದು ಪಾಠ
ಟ್ರ್ಯಾಕ್‌ ಹೇಗೇ ಇದ್ದರೂ ಮುನ್ನುಗ್ಗಿ ಬಾರಿಸಿದರೆ ಇಲ್ಲಿ ಸವಾಲಿನ ಮೊತ್ತ ಪೇರಿಸುವುದೇನೂ ಅಸಾಧ್ಯವಲ್ಲ. ಇದಕ್ಕೆ ನಿಕೋಲಸ್‌ ಪೂರಣ್‌ ತೋರ್ಪಡಿಸಿದ ಬ್ಯಾಟಿಂಗ್‌ ಪರಾಕ್ರಮವೇ ಸಾಕ್ಷಿ. ಮೊದಲ ಓವರ್‌ನಲ್ಲೇ 2 ವಿಕೆಟ್‌ ಕಳೆದು ಕೊಂಡು ಭಾರೀ ಒತ್ತಡಕ್ಕೆ ಸಿಲುಕಿದ್ದ ತಂಡವನ್ನು ಪೂರಣ್‌ ಸಂಪೂರ್ಣವಾಗಿ ತನ್ನ ಹಿಡಿತಕ್ಕೆ ತಂದುಕೊಂಡದ್ದು ನಮ್ಮವರಿಗೊಂದು ಪಾಠವಾಗಬೇಕು.

ಟಿ20 ಅಂದರೆ “ಫ್ರಮ್ ಬಾಲ್‌ ಒನ್‌’ನಿಂದಲೇ ಚೆಂಡನ್ನು ಬಡಿದಟ್ಟಬೇಕಾದ ಆಟ. ಆದರೆ ಇಲ್ಲಿ ಇಶಾನ್‌ ಕಿಶನ್‌, ಶುಭಮನ್‌ ಗಿಲ್‌, ಸೂರ್ಯಕುಮಾರ್‌ ಯಾದವ್‌, ಸಂಜು ಸ್ಯಾಮ್ಸನ್‌ ಯಶಸ್ಸು ಕಂಡಿಲ್ಲ. ಬ್ಯಾಟರ್ ಹೆಚ್ಚಿನ ಜವಾಬ್ದಾರಿ ವಹಿಸಬೇಕು ಎಂಬುದಾಗಿ ಪಾಂಡ್ಯ ಹೇಳಿದ್ದಾರೆ. ಮುಂದಿರುವುದು ಪ್ರತಿಷ್ಠಿತ ಏಷ್ಯಾ ಕಪ್‌ ಹಾಗೂ ಏಕದಿನ ವಿಶ್ವಕಪ್‌. ಇಶಾನ್‌, ಗಿಲ್‌ ಮತ್ತು ಸೂರ್ಯ ತಂಡದ ಪ್ರಮುಖ ಆಟಗಾರರಾದ್ದರಿಂದ ಇವರು ಇಲ್ಲಿ ತೋರ್ಪಡಿಸುವ ಸಾಧನೆಯೂ ಗಣನೆಗೆ ಬರುತ್ತದೆ.

Advertisement

ಇಲ್ಲಿ ಬದಲಾವಣೆಗೂ ಹೆಚ್ಚಿನ ಅವಕಾಶವಿಲ್ಲ. ಉಳಿದಿರುವುದು ಯಶಸ್ವಿ ಜೈಸ್ವಾಲ್‌ ಮಾತ್ರ. ಇವರಿಗೆ ಮಂಗಳವಾರದ ಮುಖಾಮುಖಿಯಲ್ಲಿ ಆಡುವ ಅವಕಾಶ ಲಭಿಸಲೂಬಹುದು. ಆದರೆ ಯಾರನ್ನು ಹೊರಗಿಡಬೇಕು ಎಂಬ ವಿಚಾರದಲ್ಲಿ ಬಹಳ ಎಚ್ಚರಿಕೆಯ ನಡೆ ಅಗತ್ಯ. ಇಲ್ಲಿ ಗಂಭೀರವಾಗಿ ಚಿಂತಿಸಬೇಕಾದ ಸಂಗತಿಯೊಂದಿದೆ. ವೆಸ್ಟ್‌ ಇಂಡೀಸ್‌ನಂಥ ಸಾಮಾನ್ಯ ದರ್ಜೆಯ ಬೌಲರ್‌ಗಳ ವಿರುದ್ಧ ನಮ್ಮವರು ಇಷ್ಟೊಂದು ಚಡಪಡಿಸಿದರೆ ಇನ್ನು ಆಸ್ಟ್ರೇಲಿಯ, ಪಾಕಿಸ್ಥಾನ, ಇಂಗ್ಲೆಂಡ್‌ ತಂಡಗಳ ಘಾತಕ ಬೌಲಿಂಗ್‌ ದಾಳಿಯನ್ನು ಹೇಗೆ ಎದುರಿಸಿ ನಿಲ್ಲಬಲ್ಲರು?

ಬೌಲಿಂಗ್‌ ಓಕೆ…
ಈವರೆಗೆ ಎರಡೂ ತಂಡಗಳ ಬೌಲಿಂಗ್‌ ಕ್ಲಿಕ್‌ ಆಗಿದೆ. ಭಾರತದ ದಾಳಿ ಕುರಿತು ಹೇಳುವುದಾದರೆ ಮುಕೇಶ್‌ ಕುಮಾರ್‌ ಎಸೆತಗಳಲ್ಲಿ ಹೆಚ್ಚು ರನ್‌ ಸೋರಿ ಹೋಗುತ್ತಿದೆ. ಇವರ ಬದಲು ಆವೇಶ್‌ ಖಾನ್‌ ಅಥವಾ ಉಮ್ರಾನ್‌ ಮಲಿಕ್‌ ಬಂದರೆ ಸಮಸ್ಯೆ ಪರಿಹಾರವಾದೀತೇ ಎಂಬುದೊಂದು ಪ್ರಶ್ನೆ. ಅರ್ಷದೀಪ್‌-ಹಾರ್ದಿಕ್‌ ಹೊಸ ಚೆಂಡಿನಲ್ಲೂ ಸ್ವಿಂಗ್‌ ಸಾಧಿಸಿದ್ದು ಗಮನಾರ್ಹ ಸಂಗತಿ.

ಚೈನಾಮನ್‌ ಬೌಲರ್‌ ಕುಲದೀಪ್‌ ಯಾದವ್‌ ಎಸೆತಗಳು ಕೆರಿಬಿಯನ್ನರಿಗೆ ಕಗ್ಗಂಟಾಗುತ್ತಿವೆ. ದ್ವಿತೀಯ ಪಂದ್ಯದಿಂದ ಇವರು ಹೊರಗುಳಿದದ್ದು ಕೂಡ ಭಾರತಕ್ಕೆ ಬಿದ್ದ ಹೊಡೆತ ಎನ್ನಲಡ್ಡಿಯಿಲ್ಲ. ಶನಿವಾರದ ಆಭ್ಯಾಸದ ವೇಳೆ ಕೈಗೆ ಏಟು ಅನುಭವಿಸಿದ ಕುಲದೀಪ್‌ 3ನೇ ಪಂದ್ಯದಲ್ಲಿ ಆಡುವುದು ಇನ್ನೂ ಖಾತ್ರಿಯಾಗಿಲ್ಲ. ದ್ವಿತೀಯ ಪಂದ್ಯದಲ್ಲಿ ಎಡಗೈ ಸ್ಪಿನ್ನರ್‌ ಅಕ್ಷರ್‌ ಪಟೇಲ್‌ ಅವರಿಗೆ ಬೌಲಿಂಗ್‌ ಅವಕಾಶ ನೀಡದಿದ್ದುದರ ಔಚಿತ್ಯ ಅರ್ಥವಾಗುತ್ತಿಲ್ಲ.

ನಮ್ಮವರ ಕಾರ್ಯತಂತ್ರವೇನು?
ಭಾರತದಂತೆ ವೆಸ್ಟ್‌ ಇಂಡೀಸ್‌ ಬ್ಯಾಟ್ಸ್‌ಮನ್‌ಗಳೂ ಚಡಪಡಿಸುತ್ತಲೇ ಇದ್ದಾರೆ. ಒಂದು ವೇಳೆ ಪೂರಣ್‌ ಸಿಡಿದು ನಿಲ್ಲದೇ ಹೋಗಿದ್ದರೆ ವಿಂಡೀಸ್‌ಗೆ 2-0 ಮುನ್ನಡೆ ಕಷ್ಟವಿತ್ತು. ಆದರೆ ಸತತ 2 ಗೆಲುವು ವಿಂಡೀಸ್‌ ಪಾಳೆಯದಲ್ಲಿ ಹೊಸ ಹುರುಪು, ಹೊಸ ಆತ್ಮವಿಶ್ವಾಸ ಮೂಡಿಸಿದೆ. 2016ರ ಬಳಿಕ ಮೊದಲ ಸಲ ಭಾರತದ ವಿರುದ್ಧ ಸರಣಿ ಗೆಲ್ಲುವ ಹಾದಿಯಲ್ಲಿದೆ. ಇದಕ್ಕೆ ತಡೆಯೊಡ್ಡಲು ಪಾಂಡ್ಯ ಪಡೆ ಯಶಸ್ವಿಯಾದೀತೇ? ನಮ್ಮವರ ಕಾರ್ಯತಂತ್ರವೇನು? ನಿರೀಕ್ಷೆ ಭಾರತದ ಕ್ರಿಕೆಟ್‌ ಅಭಿಮಾನಿಗಳದ್ದು.

 ಆರಂಭ: ರಾತ್ರಿ 8.00
 ಪ್ರಸಾರ: ಡಿಡಿ ಸ್ಪೋರ್ಟ್ಸ್

Advertisement

Udayavani is now on Telegram. Click here to join our channel and stay updated with the latest news.

Next