Advertisement

INDW vs BANW ವನಿತಾ ಟಿ20 ಮುಖಾಮುಖಿ: ಭಾರತಕ್ಕೆ ಸರಣಿ ಗೆಲುವಿನ ಕಾತರ

11:34 PM Jul 10, 2023 | Team Udayavani |

ಮಿರ್ಪುರ್‌: ಬಾಂಗ್ಲಾದೇಶ ವಿರುದ್ಧದ ಮೊದಲ ಟಿ20 ಪಂದ್ಯವನ್ನು 7 ವಿಕೆಟ್‌ಗಳಿಂದ ಅಧಿಕಾರಯುತವಾಗಿ ಗೆದ್ದ ಭಾರತದ ವನಿತೆಯರೀಗ ಸರಣಿ ಗೆಲುವಿನ ಮೇಲೆ ಕಣ್ಣಿಟ್ಟಿದ್ದಾರೆ. ಮಂಗಳವಾರ ದ್ವಿತೀಯ ಮುಖಾಮುಖೀ ಏರ್ಪಡಲಿದ್ದು, ಇಲ್ಲಿಯೂ ಪ್ರಭುತ್ವ ಸಾಧಿಸುವುದು ಹರ್ಮನ್‌ಪ್ರೀತ್‌ ಕೌರ್‌ ಬಳಗದ ಗುರಿ.

Advertisement

ಭಾರತದ ಸ್ಪಿನ್‌ ದಾಳಿಗೆ ಬಾಂಗ್ಲಾ ಬಳಿ ಉತ್ತರ ಇರಲಿಲ್ಲ. ಆತಿಥೇಯರ ಈ ದೌರ್ಬಲ್ಯವನ್ನು ಗಮನಿಸಿದ ಭಾರತ, ದ್ವಿತೀಯ ಪಂದ್ಯದಲ್ಲೂ ಇದೇ ಬೌಲಿಂಗ್‌ ಕಾಂಬಿನೇಶನ್‌ನೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ಇದೆ. ರವಿವಾರದ ಪಂದ್ಯ ಇಬ್ಬರು ಬೌಲರ್‌ಗಳಿಗೆ ಪದಾರ್ಪಣೆಯೂ ಆಗಿತ್ತು. ಇವರೆಂದರೆ ಅನುಷಾ ಬಾರೆಡ್ಡಿ ಮತ್ತು ಮಿನ್ನು ಮಣಿ. ಇಬ್ಬರ ಆರಂಭವೂ ಆಶಾದಾಯಕವಾಗಿತ್ತು. ಅನುಭವಿ ದೀಪ್ತಿ ಶರ್ಮ ಜತೆಗೆ ಕೌರ್‌ ಮತ್ತು ಶಫಾಲಿ ವರ್ಮ ಕೂಡ ಬೌಲಿಂಗ್‌ನಲ್ಲಿ ಮಿಂಚಿದ್ದರು.

ಮಿಂಚಬೇಕಿದೆ ಶಫಾಲಿ
ಮೊದಲ ಪಂದ್ಯವನ್ನು ದೊಡ್ಡ ಅಂತರದಿಂದ ಗೆದ್ದರೂ ಶಫಾಲಿ ವರ್ಮ ಅವರ ಬ್ಯಾಟಿಂಗ್‌ ವೈಫ‌ಲ್ಯ ಭಾರತ ತಂಡವನ್ನು ಕಾಡಿತ್ತು. 3 ಎಸೆತ ಎದುರಿಸಿದ ಅವರು ಖಾತೆ ತೆರೆಯದೆ ವಾಪಸಾಗಿದ್ದರು. ಇದರಿಂದ ಡ್ಯಾಶಿಂಗ್‌ ಓಪನರ್‌ ಶಫಾಲಿ ಫಾರ್ಮ್ನಲ್ಲಿಲ್ಲ ಎಂದೇನೂ ಅರ್ಥವಲ್ಲ. ಅವರು ಯಾವುದೇ ಕ್ಷಣದಲ್ಲಿ ಮುನ್ನುಗ್ಗಿ ಬೀಸುವ ಛಾತಿಯ ಆಟಗಾರ್ತಿ. ಅಕಸ್ಮಾತ್‌ ಭಾರತಕ್ಕೆ ಮೊದಲು ಬ್ಯಾಟಿಂಗ್‌ ಲಭಿಸಿದರೆ, ಅಥವಾ ದೊಡ್ಡ ಮೊತ್ತದ ಚೇಸಿಂಗ್‌ ಲಭಿಸಿದರೆ ಶಫಾಲಿ ಅವರಿಂದ ದೊಡ್ಡ ಕೊಡುಗೆ ನಿರೀಕ್ಷಿಸಬೇಕಾಗುತ್ತದೆ. ಹಾಗೆಯೇ ಎದುರಾಳಿ ಬೌಲರ್‌ಗಳನ್ನು ಆರಂಭದಿಂದಲೇ ಲಯ ತಪ್ಪಿಸಲಿಕ್ಕೂ ಶಫಾಲಿಯ ಸ್ಫೋಟಕ ಆಟ ಮುಖ್ಯವಾಗುತ್ತದೆ.

20 ವರ್ಷ ತುಂಬುವುದರೊಳಗೆ 57 ಟಿ20 ಪಂದ್ಯಗಳನ್ನಾಡಿದ ಹೆಗ್ಗಳಿಕೆ ಶಫಾಲಿ ವರ್ಮ ಅವರದು. ಆದರೆ ಕಳೆದ 10 ಪಂದ್ಯಗಳಲ್ಲಿ ಒಮ್ಮೆ ಮಾತ್ರ 50 ರನ್‌ ಗಡಿ ದಾಟಿದ್ದಾರೆ. ಕೌರ್‌ ಮೊದಲ ಪಂದ್ಯದಲ್ಲಿ ಅರ್ಧ ಶತಕ ಬಾರಿಸಿ ನಾಯಕಿಯ ಆಟವಾಡಿರುವುದು ಶುಭ ಸೂಚನೆ. ಸ್ಟಾರ್‌ ಓಪನರ್‌ ಸ್ಮತಿ ಮಂಧನಾ ಕೂಡ ಉತ್ತಮ ಪ್ರದರ್ಶನ ನೀಡಿದ್ದರು. ಜೆಮಿಮಾ ರೋಡ್ರಿಗಸ್‌ ಕ್ರೀಸ್‌ ಆಕ್ರಮಿಸಿಕೊಳ್ಳುವುದು ಅತ್ಯಗತ್ಯ.

ಬಾಂಗ್ಲಾ ಸಾಮಾನ್ಯ ತಂಡ
ಭಾರತದ ಸಾಮರ್ಥ್ಯಕ್ಕೆ ಹೋಲಿಸಿದರೆ ಬಾಂಗ್ಲಾದೇಶ ತಂಡದ ಗುಣಮಟ್ಟ ತೀರಾ ಸಾಮಾನ್ಯ. ರವಿವಾರ ಎಸೆತಕ್ಕೊಂದರಂತೆ ರನ್‌ ಹೊಡೆದದ್ದು ಶೋರ್ನಾ ಅಖ್ತರ್‌ ಮಾತ್ರ. 28 ಎಸೆತಗಳಿಂದ 28 ರನ್‌ ಮಾಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next