Advertisement

ಟಿ20: ವಿಂಡೀಸ್‌ ಗೆಲುವಿನ ಆರಂಭ

09:48 AM Aug 02, 2018 | |

*ಬಾಂಗ್ಲಾದೇಶ-143/9; ವೆಸ್ಟ್‌ ಇಂಡೀಸ್‌-93/3 (9.1)
*ವಿಂಡೀಸ್‌ ಚೇಸಿಂಗ್‌ ವೇಳೆ ಮಳೆ: ಗುರಿ ಮರು ನಿಗದಿ

Advertisement

ಬಸೆಟರ್‌ (ಸೇಂಟ್‌ ಕಿಟ್ಸ್‌): ಮಧ್ಯಮ ವೇಗಿ ಕೆಸ್ರಿಕ್‌ ವಿಲಿಯಮ್ಸ್‌ ಅವರ ಜೀವನಶ್ರೇಷ್ಠ ಬೌಲಿಂಗ್‌ ಹಾಗೂ ಚೇಸಿಂಗ್‌ ವೇಳೆ ಸುರಿದ ಮಳೆಯಿಂದಾಗಿ ಪ್ರವಾಸಿ ಬಾಂಗ್ಲಾದೇಶ ವಿರುದ್ಧದ ಮೊದಲ ಟಿ20 ಪಂದ್ಯವನ್ನು ವೆಸ್ಟ್‌ ಇಂಡೀಸ್‌ ಡಿ-ಎಲ್‌ ನಿಯಮದಂತೆ 7 ವಿಕೆಟ್‌ಗಳಿಂದ ಜಯಿಸಿದೆ; 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಇಲ್ಲಿನ “ವಾರ್ನರ್‌ ಪಾರ್ಕ್‌’ನಲ್ಲಿ ಬ್ಯಾಟಿಂಗಿಗೆ ಇಳಿಸಲ್ಪಟ್ಟ ಬಾಂಗ್ಲಾದೇಶ 9 ವಿಕೆಟಿಗೆ 143 ರನ್‌ ಗಳಿಸಿತು. ವೆಸ್ಟ್‌ ಇಂಡೀಸ್‌ ಚೇಸಿಂಗ್‌ ಆರಂಭಕ್ಕೂ ಮುನ್ನ ಮಳೆ ಸುರಿದುದರಿಂದ ಗುರಿಯನ್ನು ಮರು ನಿಗದಿಗೊಳಿಸಲಾಯಿತು; 11 ಓವರ್‌ಗಳಲ್ಲಿ 93 ರನ್‌ ಟಾರ್ಗೆಟ್‌ ಲಭಿಸಿತು. 9.1 ಓವರ್‌ಗಳಲ್ಲಿ 3 ವಿಕೆಟಿಗೆ 93 ರನ್‌ ಮಾಡುವ ಮೂಲಕ ವಿಂಡೀಸ್‌ ಸುಲಭ ಜಯ ಸಾಧಿಸಿತು.

ಬಾಂಗ್ಲಾ ಆರಂಭಿಕರ “ಜೋಡಿ ಸೊನ್ನೆ’
ಬಾಂಗ್ಲಾದೇಶ ಆರಂಭಿಕರಿಬ್ಬರನ್ನೂ ಮೊದಲ ಓವರಿನಲ್ಲೇ ಶೂನ್ಯಕ್ಕೆ ಕಳೆದುಕೊಂಡು ಆಘಾತಕ್ಕೆ ಸಿಲುಕಿತು. ಆ್ಯಶೆ ನರ್ಸ್‌ ಈ ಭರ್ಜರಿ ಬೇಟೆಯಾಡಿದ್ದರು. ಪ್ರಥಮ ಎಸೆತದಲ್ಲೇ ತಮಿಮ್‌ ಇಕ್ಬಾಲ್‌ ವಿಕೆಟ್‌ ಹಾರಿಸಿದ ಅವರು, 4ನೇ ಎಸೆತದಲ್ಲಿ ಸೌಮ್ಯ ಸರ್ಕಾರ್‌ಗೆ ಪೆವಿಲಿಯನ್‌ ಹಾದಿ ತೋರಿಸಿದರು. ಮಧ್ಯಮ ಕ್ರಮಾಂಕದ ಆಟಗಾರರು ಹೆಚ್ಚು ಎಚ್ಚರಿಕೆಯ ಆಟವಾಡಿದ್ದರಿಂದ ಕುಸಿತಕ್ಕೆ ತಡೆ ಬಿತ್ತು. ಆದರೆ ಕೊನೆಯಲ್ಲಿ ಕೆಸ್ರಿಕ್‌ ವಿಲಿಯಮ್ಸ್‌ ಘಾತಕವಾಗಿ ಪರಿಣಮಿಸಿ 28 ರನ್ನಿಗೆ 4 ವಿಕೆಟ್‌ ಉಡಾಯಿಸಿದರು. 35 ರನ್‌ ಮಾಡಿದ ಮಹಮದುಲ್ಲ ಬಾಂಗ್ಲಾದ ಸರ್ವಾಧಿಕ ಸ್ಕೋರರ್‌. ಚೇಸಿಂಗ್‌ ಸಂದರ್ಭದಲ್ಲಿ ವಿಂಡೀಸ್‌ ಕೂಡ ಆರಂಭಿಕರನ್ನು ಬೇಗ ಕಳೆದುಕೊಂಡಿತು. ಆ್ಯಂಡ್ರೆ ಫ್ಲೆಚರ್‌ (7) ಮತ್ತು ಎವಿನ್‌ ಲೆವಿಸ್‌ (2) 10 ರನ್‌ ಆಗುವಷ್ಟರಲ್ಲಿ ಆಟ ಮುಗಿಸಿದರು. ಆದರೆ ಆ್ಯಂಡ್ರೆ ರಸೆಲ್‌ ಅಜೇಯ 35 ರನ್‌ (21 ಎಸೆತ, 3 ಬೌಂಡರಿ, 3 ಸಿಕ್ಸರ್‌), ಮಾರ್ಲಾನ್‌ ಸಾಮ್ಯುಯೆಲ್ಸ್‌ 26 ರನ್‌ ಮಾಡಿ ಗೆಲುವು ಸಾರಿದರು.

ಸಂಕ್ಷಿಪ್ತ ಸ್ಕೋರ್‌
ಬಾಂಗ್ಲಾದೇಶ-20 ಓವರ್‌ಗಳಲ್ಲಿ 9 ವಿಕೆಟಿಗೆ 143 (ಮಹಮದುಲ್ಲ 35, ಲಿಟನ್‌ ದಾಸ್‌ 24, ಶಕಿಬ್‌ 19, ಕೆಸ್ರಿಕ್‌ 28ಕ್ಕೆ 4, ನರ್ಸ್‌ 6ಕ್ಕೆ 2, ಪೌಲ್‌ 24ಕ್ಕೆ 2). ವೆಸ್ಟ್‌ ಇಂಡೀಸ್‌-9.1 ಓವರ್‌ಗಳಲ್ಲಿ 3 ವಿಕೆಟಿಗೆ 93 (ರಸೆಲ್‌ ಔಟಾಗದೆ 35, ಸಾಮ್ಯುಯೆಲ್ಸ್‌ 26, ಮುಸ್ತಫಿಜುರ್‌ ರೆಹಿಮಾನ್‌ 18ಕ್ಕೆ 2). 
ಪಂದ್ಯಶ್ರೇಷ್ಠ: ಆ್ಯಂಡ್ರೆ ರಸೆಲ್‌.

Advertisement
Advertisement

Udayavani is now on Telegram. Click here to join our channel and stay updated with the latest news.

Next