ದುಬೈ: ಸಾಧನೆಗೆ ವಯಸ್ಸು ಎಂದಿಗೂ ಅಡ್ಡಿಬಾರದು ಎನ್ನುವುದನ್ನು ಕ್ರಿಕೆಟಿಗ ಪ್ರವೀಣ್ ತಾಂಬೆ ನಿರೂಪಿಸಿ ತೋರಿಸಿದ್ದಾರೆ. ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗದಿದ್ದರೂ ಐಪಿಎಲ್ (ಇಂಡಿಯನ್ ಪ್ರೀಮಿಯರ್ ಲೀಗ್) ಟಿ20 ಕ್ರಿಕೆಟ್‌ನಲ್ಲಿ ಮಿಂಚಿ ಸದ್ದು ಮಾಡಿದ್ದ ಕ್ರಿಕೆಟಿಗ ಈಗ ಟಿ10 ಕ್ರಿಕೆಟ್ ಕೂಟದಲ್ಲಿ ಹ್ಯಾಟ್ರಿಕ್ ಸೇರಿದಂತೆ ಒಟ್ಟು 5 ವಿಕೆಟ್ ಕಬಳಿಸಿ ಸುದ್ದಿಯಾಗಿದ್ದಾರೆ.
47 ವರ್ಷದ ತಾಂಬೆ ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಹಾಗೂ ಸನ್ ರೈಸರ್ ಹೈದರಾಬಾದ್ ಪರ ಆಡಿದ್ದರು. ಮಾತ್ರವಲ್ಲ ಪ್ರವೀಣ್ ತಾಂಬೆ ಐಪಿಎಲ್‌ನ ಅತ್ಯಂತ ಹಿರಿಯ ಆಟಗಾರ. ಅಂಥಹ ತಾಂಬೆ ಶಾರ್ಜಾದಲ್ಲಿ ನಡೆದ ಟಿ10 ಕ್ರಿಕೆಟ್ ಕೂಟದಲ್ಲಿ ಪಾಲ್ಗೊಂಡಿದ್ದಾರೆ.
ಸಿಂಧಿಸ್ ತಂಡದ ಪರ ಆಡುತ್ತಿರುವ ತಾಂಬೆ ಕೇರಳ ಕಿಂಗ್ಸ್ ತಂಡದ ವಿರುದ್ಧ ಹ್ಯಾಟ್ರಿಕ್ ಮೆರೆದರು. ಮೊದಲ ಓವರ್‌ನಲ್ಲಿ 2 ವೈಡ್ ಎಸೆತ ಹಾಕಿದ್ದ ತಾಂಬೆ ಓವರ್‌ನ ಮೊದಲ ಎಸೆತದಲ್ಲಿ ಕ್ರೀಸ್ ಗೇಲ್‌ಗೆ ರನ್ ನೀಡಲಿಲ್ಲ. 2ನೇ ಎಸೆತದಲ್ಲಿ ಗೇಲ್ ಶೂನ್ಯಕ್ಕೆ ಔಟಾದರು. ತಾಂಬೆ 3ನೇ ಎಸೆತದಲ್ಲಿ ಮೊರ್ಗನ್ ಯಾವುದೇ ರನ್ ಮಾಡಲಿಲ್ಲ. ನಂತರದ ಮೂರು ಎಸೆತದಲ್ಲಿ ಇಯಾನ್ ಮೊರ್ಗನ್ (0), ಕೈರನ್ ಪೊಲಾರ್ಡ್ (0) ಹಾಗೂ ಫ್ಯಾಬಿಯಾನ್ ಅಲನ್ (0) ಕ್ರಮವಾಗಿ ತಾಂಬೆ ಪೆವಿಲಿಯನ್‌ಗೆ ಅಟ್ಟಿದ್ದರು. ಮೊದಲ ಓವರ್ ಮುಕ್ತಾಯಕ್ಕೆ ತಾಂಬೆ ದಾಳಿಗೆ ಸಿಲುಕಿ ಕೇರಳ ಕಿಂಗ್ಸ್ 6 ರನ್‌ಗೆ ಪ್ರಮುಖ 4 ವಿಕೆಟ್ ಕಳೆದುಕೊಂಡಿತ್ತು. ಹೀಗಿದ್ದರೂ ಕೇರಳ ಕಿಂಗ್ಸ್ 7 ವಿಕೆಟ್‌ಗೆ 103 ರನ್‌ಗಳಿಸಿತ್ತು. ಈ ಗುರಿ ಬೆನ್ನಟ್ಟಿದ ಸಿಂಧಿಸ್ 7.4 ಓವರ್‌ಗೆ 104 ರನ್‌ಗಳಿಸಿ ಗುರಿ ಸೇರಿತು. 9 ವಿಕೆಟ್ ಜಯ ಸಾಧಿಸಿತು.