ಬೆಂಗಳೂರು : ಉದಯವಾಣಿಯ ಸಂಸ್ಥಾಪಕ ಟಿ. ಮೋಹನದಾಸ ಪೈ ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
ಮೋಹನದಾಸ ಪೈ ಅವರು ನಿಧನ ಹೊಂದಿದ್ದಾರೆ ಎನ್ನುವ ವಿಷಯ ನನಗೆ ಆಘಾತ ಉಂಟು ಮಾಡಿದೆ. ಹಿರಿಯ ಚೇತನರು, ಎಲ್ಲರ ಮಾರ್ಗದರ್ಶಕರಂತಿದ್ದ ಟಿ. ಮೋಹನ್ ದಾಸ್ ಪೈ ಅವರ ಆತ್ಮಕ್ಕೆ ಆ ಭಗವಂತ ಚಿರಶಾಂತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಅವರ ಕುಟುಂಬದವರಿಗೆ ಪೈ ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಆ ಭಗವಂತ ನೀಡಲಿ ಎಂದು ಸಿಮ್ ಬಸವರಾಜ್ ಬೊಮ್ಮಾಯಿ ಕೋರಿದ್ದಾರೆ.
ಅತ್ಯುತ್ತಮ ಆಡಳಿತ, ಕ್ರಮಬದ್ದ ಯೋಜನೆಗಳನ್ನು ರೂಪಿಸುವಲ್ಲಿ ನಿಪುಣರಾಗಿದ್ದ ಪೈ ಅವರು, ಪೈ ಪರಿವಾರದ ಕೀರ್ತಿಯನ್ನು ದಿಗಂತಕ್ಕೆ ಏರಿಸಿ, ಅಸಂಖ್ಯಾತ ಜನರಿಗೆ ಉದ್ಯೋಗದಾತರು ಆಗಿದ್ದರು. 1970ರಲ್ಲಿ ಉದಯವಾಣಿ ಪತ್ರಿಕೆಯನ್ನು ಆರಂಭಿಸಿದ ಮೋಹನದಾಸ ಪೈ ಅವರು, ಅಲ್ಪ ಕಾಲದಲ್ಲಿಯೇ ಅದನ್ನು ರಾಜ್ಯದ ಪ್ರಮುಖ ಪತ್ರಿಕೆಯನ್ನಾಗಿ ಕಟ್ಟಿದರು. ಮುದ್ರಣ, ಪ್ರಕಾಶನ, ಮುದ್ರಣ ತಂತ್ರಜ್ಞಾನದಲ್ಲಿ ನವಶಕೆ ಆರಂಭಿಸಿದ ಕೀರ್ತಿಯೂ ಅವರಿಗೆ ಸಲ್ಲುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕಂಬನಿ ಮಿಡಿದಿದ್ದಾರೆ.
Related Articles
ಉದಯವಾಣಿ ಪತ್ರಿಕೆಯ ಸಂಸ್ಥಾಪಕರು, ಹಿರಿಯ ಉದ್ಯಮಿ, ಹಲವು ಸಂಘ – ಸಂಸ್ಥೆಗಳ ಮುಂಚೂಣಿಯಲ್ಲಿ ನಿಂತು ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಟಿ.ಮೋಹನದಾಸ ಪೈ ಅವರ ನಿಧನದ ಸುದ್ದಿ ನೋವುಂಟುಮಾಡಿದೆ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ. ಅವರ ದುಃಖತಪ್ತ ಕುಟುಂಬವರ್ಗಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.
ಖ್ಯಾತ ಉದ್ಯಮಿಗಳು, ಹಿರಿಯರು, ಉದಯವಾಣಿ ದಿನಪತ್ರಿಕೆಯ ಸಂಸ್ಥಾಪಕರಾದ ಶ್ರೀ ಟಿ. ಮೋಹನ್‌ದಾಸ್ ಪೈ ಅವರ ನಿಧನದ ಸುದ್ದಿ ಆಘಾತವುಂಟುಮಾಡಿದೆ ಎಂದು ಸಚಿವ ಪ್ರಹ್ಲಾದ್ ಜೋಶಿ ಸಂತಾಪ ಸೂಚಿಸಿದ್ದಾರೆ.
ಟಿಎಂಎ ಪೈ, ಮಣಿಪಾಲ್ ಮೀಡಿಯಾ ಸಂಸ್ಥೆ ಸೇರಿದಂತೆ ಹಲವು ಸಂಸ್ಥೆಗಳ ಅಧ್ಯಕ್ಷರಾಗಿದ್ದ ಅವರು ದೂರದೃಷ್ಟಿಯ ನಾಯಕರಾಗಿದ್ದರು. ನಾನು ಮಂಗಳೂರಿನಲ್ಲಿ ವೈದ್ಯಕೀಯ ಪದವಿ ವ್ಯಾಸಂಗ ಮಾಡುವಾಗ ಹತ್ತಿರದಿಂದ ಇವರನ್ನು ಬಲ್ಲೆ. ಒಳ್ಳೆಯ ಉದ್ಯಮಿಯಾಗಿ ಹೆಸರು ಮಾಡಿದ್ದ ಅವರ ಅಗಲಿಕೆಯಿಂದ ಇಡೀ ಸಮಾಜಕ್ಕೆ ದೊಡ್ಡ ನಷ್ಟ ಉಂಟಾಗಿದೆ ಎಂದು ಸಚಿವ ಡಾ.ಅಶ್ವತ್ಥನಾರಾಯಣ ಟ್ವೀಟ್ ಮಾಡಿದ್ದಾರೆ.
ಖ್ಯಾತ ಉದ್ಯಮಿಗಳು, ಉದಯವಾಣಿ ದಿನಪತ್ರಿಕೆಯ ಸಂಸ್ಥಾಪಕರಾದ ಶ್ರೀ ಟಿ. ಮೋಹನ್‌ದಾಸ್ ಪೈ ಅವರ ನಿಧನದ ಸುದ್ದಿ ಆಘಾತವುಂಟು ಮಾಡಿದೆ ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.
– Rajeev Chandrasekhar (@rajeev_chandrasekhar) 1 Aug 2022