1968ರಲ್ಲಿ ಧೀರೂಭಾಯಿ ಅಂಬಾನಿ ರಿಲಯನ್ಸ್ ಕಮರ್ಷಿಯಲ್ ಕಾರ್ಪೊರೇಶನ್ ಸ್ಥಾಪಿಸಿದಾಗ ಷರತ್ತುಗಳಿಲ್ಲದ 2 ಲ.ರೂ. ಸಾಲಬೇಕಿತ್ತು. ಭದ್ರತೆ ಒದಗಿಸಲು ಇದ್ದಿರಲಿಲ್ಲ. ಸಾಲ ಬೇಡಿಕೆ ತಿರಸ್ಕೃತವಾಗಿತ್ತು. “ಉದ್ಯಮ ಶೀಲತೆಯನ್ನು ಕಾಣ ಬೇಕು. ನಾವು ಮನಿಲೆಂಡರ್ ಅಲ್ಲ, ಬ್ಯಾಂಕರ್ ಆಗಿ ಸಾಲ ಕೊಡಬೇಕು’ ಎಂದು ಹೇಳಿದರು. ಪೈಯವರು ಮೃತಪಟ್ಟಾಗ ಬಂದ ಅಂಬಾನಿ ಆರ್‌ಬಿಐ ಹಿರಿಯ ಅಧಿಕಾರಿಗಳ ಎದುರೇ ಹೇಳಿದ ಮಾತಿದು.
ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ (ಪಾಪು) “ಪ್ರಪಂಚ’ ವಾರಪತ್ರಿಕೆಯನ್ನು ಆರಂಭಿಸಿ ಸಾಲ ಕಟ್ಟಲು ಆಗದೆ ಮನೆ ಏಲಂ ಆಗುವುದಿತ್ತು. ಪಾಪು ಪೈಯವರಲ್ಲಿ ವಿಷಯ ತಿಳಿಸಿದರು. ಪೈಯವರು “ಈ ಮನುಷ್ಯ ವಿದೇಶಕ್ಕೆ ಹೋಗಿ ಏನೋ ಸಾಧನೆ ಮಾಡಬೇಕೆಂದು ಪತ್ರಿಕೆ ಆರಂಭಿಸಿ ಕೈಸುಟ್ಟುಕೊಂಡಿದ್ದಾರೆ. ಆ ಮನೆಯನ್ನು ಉಳಿಸುವುದು ಹೇಗೆಂದು ನನಗೆ ಹೇಳಿ’ ಎಂದು ಅಧಿಕಾರಿಗಳಿಗೆ ತಿಳಿಸಿ ಮನೆಯನ್ನು ಉಳಿಸಿದರು.
ಎಂಜಿಎಂ ಕಾಲೇಜಿನಲ್ಲಿ ಕು.ಶಿ. ಹರಿದಾಸ ಭಟ್ಟರು ಪ್ರಾಂಶುಪಾಲರಾಗಿದ್ದಾಗ ಎಂಜಿಎಂ ಟ್ರಸ್ಟ್ ಅಧ್ಯಕ್ಷರಾಗಿದ್ದ ಟಿ.ಎ. ಪೈ ಹಣವಿಲ್ಲದೆ ವಿದ್ಯಾರ್ಥಿಗಳಾರೂ ಶಿಕ್ಷಣ ದಿಂದ ವಂಚಿತರಾಗಬಾರದು. ನನ್ನ ಖಾತೆ ಯಿಂದ ಹಣ ಜಮೆ ಮಾಡಿಕೊಳ್ಳಿ ಎಂದು ಹೇಳಿ ಹಾಗೇ ಮಾಡಿಸಿದ್ದರು.
“ಈತ ಪುಸ್ತಕ ಓದುವುದು, ಲೇಖನ ಬರೆಯುವುದರಲ್ಲಿ ಇರುತ್ತಾನೆ. ಈತನನ್ನು ಎಲ್ಲಿಯಾದರೂ ವರ್ಗ ಮಾಡ ಬೇಕು’ ಎಂದು ಸಿಂಡಿಕೇಟ್ ಬ್ಯಾಂಕ್‌ನಲ್ಲಿ ಹೆರಿಟೇಜ್ ವಿಲೇಜ್ ರೂವಾರಿ ವಿಜಯನಾಥ ಶೆಣೈಯವರ ಬಗ್ಗೆ ನಿರ್ಣಯ ವಾಗಿತ್ತು. ಮಹಾಪ್ರಬಂಧಕ ಎಚ್.ಎನ್. ರಾವ್ ಅವರನ್ನು ಕರೆದು ಪೈಯವರು ಹೇಳಿದ್ದು – “ಪ್ರತಿಯೊಬ್ಬರಲ್ಲೂ ಒಂದೊಂದು ಬಗೆಯ ಆಸಕ್ತಿ ಇರುತ್ತದೆ. ಅದನ್ನು ಹೇಗೆ ಬಳಸಿಕೊಳ್ಳಬೇಕೆಂದು ಯೋಚಿಸಬೇಕು’. ಕೋ.ಮ. ಕಾರಂತರ ಭಾಷಣ ಕೇಳಿ ಅವರನ್ನು ಬ್ಯಾಂಕ್‌ಗೆ ಸೇರಿಸಿಕೊಂಡಿದ್ದರು.
- ಕೆನರಾ ಮಿಲ್ಕ್ ಯೂನಿಯನ್‌ನ ಸಭೆಯೊಂದರಲ್ಲಿ ಕೆ.ಕೆ.ಪೈಯವರ ಅಳಿಯ ಡಾ| ಕೆ.ಪಿ.ಎಸ್.ಕಾಮತ್ “ನಿಮಗೆ ಹಳ್ಳಿಗಳ ಸಮಸ್ಯೆ ಗೊತ್ತೆ?’ ಎಂದು ಕೇಳಿದರು. ಸಮಸ್ಯೆ ಅರಿಯುವುದಕ್ಕಾಗಿ ಟಿ.ಎ.ಪೈ ಮನೆಯಲ್ಲಿ ಹಟ್ಟಿ ಕಟ್ಟಿಸಿ ದನಗಳನ್ನು ಸಾಕಿದ್ದರು. ಈಗ ಒಂದು ಲಕ್ಷ ಲೀ. ಹಾಲು ನಗರಗಳಿಗೆ ಸೇರಿದರೆ, 40 ಲ.ರೂ. ಹಳ್ಳಿಗಳಲ್ಲಿ ಚಲಾವಣೆಯಾಗಲಿಲ್ಲವೆ? ಇದು ಟಿ.ಎ. ಪೈಯವರ ಆರ್ಥಿಕ ನೀತಿ.
- ಕೃಷಿ ವಿಸ್ತರಣೆಗಾಗಿ ಕೃಷಿ ಪ್ರತಿಷ್ಠಾನ, ಸಣ್ಣ ಕೈಗಾರಿಕೆಗಳಿಗಾಗಿ ಪ್ರತ್ಯೇಕ ವಿಭಾಗ ತೆರೆದು ಕೃಷಿ ಪ್ರತಿಷ್ಠಾನಕ್ಕೆ ಕೃಷಿ ಪದವೀಧರರ ನೇಮಕ, ಕೈಗಾರಿಕಾ ವಿಭಾಗಕ್ಕೆ ಎಂಜಿನಿಯರುಗಳ ನೇಮಿಸಿ ಆ ಕ್ಷೇತ್ರವನ್ನು ಹೇಗೆ ಅಭಿವೃದ್ಧಿಪಡಿಸಬಹುದು ಎಂದು ಸಲಹೆ ಕೇಳುತ್ತಿದ್ದರು.
- ಮಲ್ಪೆಯಲ್ಲಿ 1960ರಲ್ಲಿ ಯಾಂತ್ರೀಕೃತ ದೋಣಿಗಳು ಚಾಲ್ತಿಗೆ ಬರಲು ಟಿ.ಎ.ಪೈ ಕಾರಣರಾಗಿದ್ದರು. 1970ರ ಕೊನೆಯಲ್ಲಿ ಮಲ್ಪೆಯಲ್ಲಿ ಅಗ್ನಿ ದುರಂತ ಸಂಭವಿಸಿದಾಗ “ನಿಮ್ಮ ಕಾನೂನುಪ್ರಕಾರ ಕೆಲಸ ಮಾಡಿದರೆ ಮೀನುಗಾರರು ಸಾಯುತ್ತಾರೆ. 24 ಗಂಟೆ ಯೊಳಗೆ ವಿಮಾ ಹಣ ಸಿಗಬೇಕು’ ಎಂದು ವಿಮಾ ಕಂಪೆನಿಗಳಿಗೆ ಒತ್ತಾಯಿಸಿದರು. ಸಿಂಡಿಕೇಟ್ ಬ್ಯಾಂಕ್ ಅಧಿಕಾರಿಗಳಿಗೆ “ವಿಮಾ ಹಣ ಸಿಗುತ್ತದೆ. ಮತ್ತೆ ಸಾಲ ಕೊಡಿ’ ಎಂದು ಹೇಳಿ ಕೊಡಿಸಿದರು. ಆಗ ಪೈಯವರಿಗೆ ಅಧಿಕಾರ ಇದ್ದಿರಲಿಲ್ಲ.
- ಟಿ. ಅಶೋಕ್ ಪೈ
(ಮಣಿಪಾಲದ ಶಿಲ್ಪಿ ಡಾ|ಟಿ.ಎಂ.ಎ.ಪೈಯವರ ಕಿರಿಯ ಪುತ್ರ.
ಡಾ| ಟಿ.ಎಂ.ಎ.ಪೈ ಪ್ರತಿಷ್ಠಾನದ ಕಾರ್ಯದರ್ಶಿ ಮತ್ತು ಕೋಶಾಧಿಕಾರಿ)