ಲಹರಿ ಆಡಿಯೋ ಸಂಸ್ಥೆ ಇದುವರೆಗೆ ಕನ್ನಡ ಸೇರಿದಂತೆ ಪರಭಾಷೆಯ ಬಿಗ್‌ಬಜೆಟ್ ಸಿನಿಮಾಗಳ ಆಡಿಯೋ ಹಕ್ಕು ಖರೀದಿಸಿರುವುದು ಗೊತ್ತೇ ಇದೆ. ಈಗ ತೆಲುಗಿನ ಬಹುನಿರೀಕ್ಷಿತ ಚಿತ್ರ ಚಿರಂಜೀವಿ ಅಭಿನಯದ “ಸೈರಾ ನರಸಿಂಹರೆಡ್ಡಿ’ ಚಿತ್ರ ಹೊಸ ಸೇರ್ಪಡೆ. ಹೌದು, ಈ ಚಿತ್ರದ ಎಲ್ಲಾ ಭಾಷೆಯ ಆಡಿಯೋ ಹಕ್ಕನ್ನು ಲಹರಿ ಆಡಿಯೋ ಸಂಸ್ಥೆ ಪಡೆದುಕೊಂಡಿದೆ ಎಂಬುದು ವಿಶೇಷ. ಈ ಬಗ್ಗೆ ಸ್ವತಃ ಲಹರಿ ಆಡಿಯೋ ಸಂಸ್ಥೆಯ ಮುಖ್ಯಸ್ಥ ವೇಲು ಸ್ಪಷ್ಟಪಡಿಸಿದ್ದಾರೆ.
“ಸೌತ್ ಇಂಡಿಯಾದಲ್ಲಿ ಬಹುತೇಕ ದೊಡ್ಡ ಬಜೆಟ್‌ನ ಸಿನಿಮಾಗಳ ಆಡಿಯೋ ಹಕ್ಕು ಪಡೆದ ಹೆಮ್ಮೆ ನಮ್ಮ ಲಹರಿ ಸಂಸ್ಥೆಯದ್ದು. ಈಗಾಗಲೇ “ಬಾಹುಬಲಿ’, “ಬಾಹುಬಲಿ-2′, “ಎಂಟಿಆರ್ ಬಯೋಪಿಕ್’,”ವಿಶ್ವಾಸಂ’,”ಕೆಜಿಎಫ್’, “ಕುರುಕ್ಷೇತ್ರ’, “ಪೈಲ್ವಾನ್’ ಹೀಗೆ ಬಿಗ್‌ಬಜೆಟ್ ಸಿನಿಮಾಗಳ ಹಾಡುಗಳು ನಮ್ಮ ಲಹರಿ ಸಂಸ್ಥೆಯ ಮೂಲಕ ಬಿಡುಗಡೆಯಾಗಿವೆ. ಈಗ “ಸೈರಾ’ ಚಿತ್ರದ ಹಾಡುಗಳು ಕೂಡ ನಮ್ಮ ಸಂಸ್ಥೆಯಲ್ಲೇ ಬಿಡುಗಡೆಯಾಗಲಿವೆ. ಬಿಗ್‌ಬಜೆಟ್‌ನಲ್ಲೇ ಈ ಚಿತ್ರದ ಆಡಿಯೋ ಹಕ್ಕು ಪಡೆದಿದ್ದು, ಇಷ್ಟರಲ್ಲೇ ಆಡಿಯೋ ಬಿಡುಗಡೆ ಸಮಾರಂಭವನ್ನು ಅದ್ಧೂರಿಯಾಗಿ ಆಯೋಜಿಸುವುದಾಗಿ’ ಹೇಳುತ್ತಾರೆ ಲಹರಿ ವೇಲು.
ಅಂದಹಾಗೆ, ಈ ಚಿತ್ರದಲ್ಲಿ ಚಿರಂಜೀವಿ ಅವರು “ಸೈರಾ ನರಸಿಂಹರೆಡ್ಡಿ’ಯಾಗಿ ಕಾಣಿಸಿಕೊಂಡರೆ, ಬಾಲಿವುಡ್ ಸ್ಟಾರ್ ಅಮಿತಾಬ್ ಬಚ್ಚನ್ ಕೂಡ ಅವರ ಗುರು ಗೋಸಾಯಿ ವೆಂಕಣ್ಣ ಪಾತ್ರ ನಿರ್ವಹಿಸಿದ್ದಾರೆ. ಇನ್ನು, ಕನ್ನಡದ ನಟ ಸುದೀಪ್ ಕೂಡ ಅವುಕು ರಾಜು ಎಂಬ ಪಾತ್ರ ಮಾಡಿದ್ದಾರೆ. ಉಳಿದಂತೆ ಸಿದ್ದಮ್ಮಳಾಗಿ ನಯನಾತಾರಾ, ಲಕ್ಷ್ಮಿಯಾಗಿ ತಮನ್ನಾ, ರಾಜಪಾಂಡಿ ಪಾತ್ರದಲ್ಲಿ ವಿಜಯ್ ಸೇತುಪತಿ, ವೀರರೆಡ್ಡಿಯಾಗಿ ಜಗಪತಿಬಾಬು ಅವರ ಕಾಣಿಸಿಕೊಂಡಿದ್ದಾರೆ. ನಿಹಾರಿಕಾ, ರವಿಕಿಶನ್ ಸೇರಿದಂತೆ ಚಿತ್ರದಲ್ಲಿ ದೊಡ್ಡ ತಾರಾಬಳಗವೇ ತುಂಬಿದೆ.
ಇದೊಂದು ಸ್ವಾತಂತ್ರ್ಯ ಹೋರಾಟಗಾರ ರಾಯಲಸೀಮೆಯ ಉಯ್ನಾಲವಾಡ ನರಸಿಂಹರೆಡ್ಡಿ ಕುರಿತಾದ ಚಿತ್ರಣವನ್ನು ನಿರ್ದೇಶಕ ಸುರೇಂದ್ರ ರೆಡ್ಡಿ ಅವರು ಕಟ್ಟಿಕೊಟ್ಟಿದ್ದಾರೆ. ರಾಮ್‌ಚರಣ್ ನಿರ್ಮಾಣವಿದೆ. ಅಮಿತ್ ತ್ರಿವೇದಿ ಮತ್ತು ಜ್ಯುಲಿಯಸ್ ಸಂಗೀತವಿದೆ. ರತ್ನವೇಲು ಛಾಯಾಗ್ರಹಣವಿದೆ. ಶ್ರೀಕರ್ ಪ್ರಸಾದ್ ಚಿತ್ರದ ಸಂಕಲನ ಮಾಡಿದ್ದಾರೆ. ದಕ್ಷಿಣ ಭಾರತದಲ್ಲಿ ಮತ್ತೂಂದು ಅದ್ಧೂರಿ ಬಜೆಟ್‌ನ ಚಿತ್ರ ಇದಾಗಿದ್ದು, ಅಕ್ಟೋಬರ್ 2 ಗಾಂಧಿ ಜಯಂತಿ ದಿನದಂದು ಬಿಡುಗಡೆಯಾಗಲಿದೆ.