Advertisement

Syed Mushtaq Ali Trophy: ಸೌರಾಷ್ಟ್ರಕ್ಕೆ ಶರಣಾದ ಕರ್ನಾಟಕ

03:14 AM Nov 28, 2024 | Team Udayavani |

ಇಂದೋರ್‌: “ಸಯ್ಯದ್‌ ಮುಷ್ತಾಕ್‌ ಅಲಿ’ ಟಿ20 ಪಂದ್ಯಾವಳಿಯಲ್ಲಿ ಕರ್ನಾಟಕ ಎರಡನೇ ಆಘಾತಕ್ಕೆ ಸಿಲುಕಿದೆ. ಬುಧವಾರದ “ಬಿ’ ವಿಭಾಗದ ಮುಖಾಮುಖಿ ಯಲ್ಲಿ ಸೌರಾಷ್ಟ್ರಕ್ಕೆ 5 ವಿಕೆಟ್‌ಗಳಿಂದ ಶರಣಾಗಿದೆ.

Advertisement

ಮೊದಲು ಬ್ಯಾಟಿಂಗ್‌ ನಡೆಸಿದ ಕರ್ನಾಟಕ 8 ವಿಕೆಟಿಗೆ 171 ರನ್ನುಗಳ ಸವಾಲಿನ ಮೊತ್ತವನ್ನೇ ಪೇರಿಸಿತು. ಆದರೆ ಸೌರಾಷ್ಟ್ರ 18.1 ಓವರ್‌ಗಳಲ್ಲಿ 5 ವಿಕೆಟಿಗೆ 173 ರನ್‌ ಬಾರಿಸಿ ಜಯಭೇರಿ ಮೊಳಗಿಸಿತು. ಇದು 3 ಪಂದ್ಯಗಳಲ್ಲಿ ಸೌರಾಷ್ಟ್ರಕ್ಕೆ ಒಲಿದ 2ನೇ ಜಯ. ಕರ್ನಾಟಕ ಕೂಡ 3 ಪಂದ್ಯವಾಡಿದ್ದು, ಒಂದನ್ನಷ್ಟೇ ಜಯಿಸಿದೆ. ಉತ್ತರಾಖಂಡ ವಿರುದ್ಧ 6 ರನ್ನುಗಳಿಂದ ಎಡವಿದ ಅಗರ್ವಾಲ್‌ ಪಡೆ, ಬಳಿಕ ತ್ರಿಪುರವನ್ನು 5 ವಿಕೆಟ್‌ಗಳಿಂದ ಮಣಿಸಿತ್ತು.

ಆಘಾತಕಾರಿ ಆರಂಭ
ಕರ್ನಾಟಕದ ಆರಂಭ ಆಘಾತಕಾರಿಯಾಗಿತ್ತು. 3.3 ಓವರ್‌ಗಳಲ್ಲಿ 16 ರನ್ನಿಗೆ 3 ವಿಕೆಟ್‌ ಉರುಳಿತು. ನಾಯಕ ಮಾಯಾಂಕ್‌ ಅಗರ್ವಾಲ್‌ (4). ಎಲ್‌.ಆರ್‌. ಚೇತನ್‌ (1) ಮತ್ತು ಸ್ಮರಣ್‌ ರವಿಚಂದ್ರನ್‌ (6) ಪೆವಿಲಿಯನ್‌ ಸೇರಿಕೊಂಡರು. ಆದರೆ ಕೀಪರ್‌ ಕೃಷ್ಣನ್‌ ಶ್ರೀಜಿತ್‌ (31), ಆಲ್‌ರೌಂಡರ್‌ ಶ್ರೇಯಸ್‌ ಗೋಪಾಲ್‌ (36), ಶುಭಾಂಗ್‌ ಹೆಗ್ಡೆ (ಸರ್ವಾಧಿಕ 43) ಮತ್ತು ಮನೋಜ್‌ ಭಾಂಡಗೆ (24) ಅವರ ಸಾಹಸದಿಂದ ಉತ್ತಮ ಸ್ಕೋರ್‌ ದಾಖಲಿಸಿತು.

ಆದರೆ ಕರ್ನಾಟಕದ ಬೌಲಿಂಗ್‌ ಯಾವುದೇ ಪರಿಣಾಮ ಬೀರಲಿಲ್ಲ. ಆರಂಭಕಾರ ಹಾರ್ವಿಕ್‌ ದೇಸಾಯಿ 14ನೇ ಓವರ್‌ ತನಕ ಕ್ರೀಸ್‌ ಆಕ್ರಮಿಸಿಕೊಂಡು 60 ರನ್‌ ಬಾರಿಸಿದರು. ಪ್ರೇರಕ್‌ ಮಂಕಡ್‌ 25, ವಿಶ್ವರಾಜ್‌ ಜಡೇಜ ಔಟಾಗದೆ 18, ಜಯ್‌ ಗೋಹಿಲ್‌ ಔಟಾಗದೆ 15 ರನ್‌ ಮಾಡಿ ತಂಡವನ್ನು ದಡ ಸೇರಿಸಿದರು.
ಸೌರಾಷ್ಟ್ರ ನಾಯಕ ಜೈದೇವ್‌ ಉನಾದ್ಕತ್‌, ಚಿರಾಗ್‌ ಜಾನಿ, ಪ್ರೇರಕ್‌ ಮಂಕಡ್‌; ಕರ್ನಾಟಕದ ವಿದ್ಯಾಧರ್‌ ಪಾಟೀಲ್‌ ತಲಾ 2 ವಿಕೆಟ್‌ ಉರುಳಿಸಿದರು.
ಕರ್ನಾಟಕ ತನ್ನ ಮುಂದಿನ ಪಂದ್ಯವನ್ನು ಶುಕ್ರವಾರ ಸಿಕ್ಕಿಂ ವಿರುದ್ಧ ಆಡಲಿದೆ.

ಸಂಕ್ಷಿಪ್ತ ಸ್ಕೋರ್‌:
ಕರ್ನಾಟಕ-8 ವಿಕೆಟಿಗೆ 171 (ಶುಭಾಂಗ್‌ 43, ಶ್ರೇಯಸ್‌ 36, ಶ್ರೀಜಿತ್‌ 31, ಭಾಂಡಗೆ 24, ಉನಾದ್ಕತ್‌ 17ಕ್ಕೆ 2, ಮಂಕಡ್‌ 29ಕ್ಕೆ 2, ಚಿರಾಗ್‌ ಜಾನಿ 38ಕ್ಕೆ 2). ಸೌರಾಷ್ಟ್ರ: 18.1 ಓವರ್‌ಗಳಲ್ಲಿ 5 ವಿಕೆಟಿಗೆ 173 (ಹಾರ್ವಿಕ್‌ 60, ಮಂಕಡ್‌ 25, ಪಾಟೀಲ್‌ 39ಕ್ಕೆ 2). ಪಂದ್ಯಶ್ರೇಷ್ಠ: ಹಾರ್ವಿಕ್‌ ದೇಸಾಯಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next