Advertisement

SMAT T20: ಟಿ-20 ಇತಿಹಾಸದಲ್ಲೇ ವಿಶ್ವದಾಖಲೆ; ಬರೋಬ್ಬರಿ 349 ರನ್‌ ಪೇರಿಸಿದ ಬರೋಡಾ

01:26 AM Dec 06, 2024 | Team Udayavani |

ಇಂದೋರ್: ಟಿ-20 ಪಂದ್ಯದ ಇತಿಹಾಸದಲ್ಲೇ ಗರಿಷ್ಠ ಮೊತ್ತವನ್ನು ಪೇರಿಸಿ ತಂಡವೊಂದು ವಿಶ್ವ ದಾಖಲೆ ಬರೆದಿದೆ.

Advertisement

ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯ ಗ್ರೂಪ್-ಬಿ ಪಂದ್ಯದಲ್ಲಿ ಬರೋಡಾ  ಸಿಕ್ಕಿಂ ತಂಡದ ವಿರುದ್ಧ ರನ್‌ ರಣ ಕಹಳೆಯನ್ನೇ ಸೃಷ್ಟಿಸಿದೆ.

ಇಂದೋರ್​​ನಲ್ಲಿ ನಡೆದ ಈ ಪಂದ್ಯದಲ್ಲಿ  ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಕೃಣಾಲ್‌ ಪಾಂಡ್ಯ ನೇತೃತ್ವದ ಬರೋಡಾ ತಂಡ 20 ಓವರ್‌ನಲ್ಲಿ ಬರೋಬ್ಬರಿ 349 ರನ್‌ ಮೊತ್ತ ಪೇರಿಸಿ ವಿಶ್ವ ದಾಖಲೆ ಬರೆದಿದೆ.

ಆರಂಭಿಕರಾಗಿ ಮೈದಾನಕ್ಕಿಳಿದ ಬರೋಡಾದ ಶಾಶ್ವತ್ ರಾವತ್ ಹಾಗೂ ಅಭಿಮನ್ಯು ಸಿಂಗ್  92 ರನ್‌ ಗಳ ಜತೆಯಾಟ ನೀಡಿ ಸ್ಫೋಟಕ ಆರಂಭವನ್ನು ಒದಗಿಸಿದರು. ಇದರಲ್ಲಿ ಅಭಿಮನ್ಯು 17 ಎಸೆತಗಳಲ್ಲಿ 53 ರನ್‌ ಬಾರಿಸಿದ್ರೆ, ಶಾಶ್ವತ್‌ 16 ಎಸೆತಗಳಲ್ಲಿ 43 ರನ್ ಸಿಡಿಸಿದರು.

ಇವರಿಬ್ಬರ ವಿಕೆಟ್‌ ಹೋದ ಬಳಿಕ ಕ್ರೀಸ್ ಗಿಳಿದ‌ ಭಾನು ಪಾನಿಯಾ  ಸಿಕ್ಸರ್‌ – ಬೌಂಡರಿಗಳಿಂದಲೇ ಸಿಕ್ಕಿಂ ಬೌಲರ್‌ಗಳನ್ನು ಸುಸ್ತಾಗಿಸಿದರು. ಬರೀ 51 ಎಸೆತಗಳಲ್ಲಿ 134 ರನ್ ಸಿಡಿಸಿ ಅಜೇಯ ಉಳಿದ ಭಾನು 15 ಸಿಕ್ಸ್ ಹಾಗೂ 5 ಫೋರ್​​ಗಳನ್ನು ಚಚ್ಚಿದರು.

Advertisement

ಭಾನು ಆಟಕ್ಕೆ ಜತೆಯಾದ ಶಿವಾಲಿಕ್ ಶರ್ಮಾ 17 ಎಸೆತಗಳಲ್ಲಿ 6 ಸಿಕ್ಸರ್‌ ಗಳನ್ನು ಬಾರಿಸಿ 55 ಗಳಿಸಿದರು. ಇನ್ನಿಂಗ್ಸ್‌ನ ಕೆಲ ಓವರ್‌ಗಳು ಬಾಕಿ ಇರುವಾಗ ಕಣಕ್ಕಿಳಿದ ವಿಕೆಟ್ ಕೀಪರ್ ಬ್ಯಾಟರ್ ವಿಷ್ಣು ಸೋಲಂಕಿ 16 ಎಸೆತಗಳಲ್ಲಿ 6 ಸಿಕ್ಸರ್​​ಗಳೊಂದಿಗೆ 50 ರನ್ ಸಿಡಿಸಿದರು.

ಬರೋಡಾ 5 ವಿಕೆಟ್‌ ಕಳೆದುಕೊಂಡು 349 ರನ್‌ ಪೇರಿಸಿತು. ಸವಾಲಾಗಿ ಚೇಸ್‌ಗೆ ಇಳಿದ ಸಿಕ್ಕಿಂ ತಂಡ 20 ಓವರ್‌ಗಳಲ್ಲಿ ಕೇವಲ 86 ರನ್‌ಗಳಿಸಿ 7 ವಿಕೆಟ್‌ ಕಳೆದುಕೊಂಡು ಸೋಲು ಒಪ್ಪಿಕೊಂಡಿತು.

ಟಿ20 ಕ್ರಿಕೆಟ್‌ ವಿಶ್ವ ದಾಖಲೆ ಬರೆದ ಬರೋಡಾ: ದೇಶಿಯ ಕ್ರಿಕೆಟ್‌ನಲ್ಲಿ ಬರೋಡಾ ಪೇರಿಸಿದ ಈ ಮೊತ್ತ ಟಿ-20 ಇತಿಹಾಸದಲ್ಲಿ ದಾಖಲೆ ಬರೆದಿದೆ. ಈ ಹಿಂದೆ (2024 ರಲ್ಲಿ) ಜಿಂಬಾಬ್ಬೆ ತಂಡ ಗಾಂಬಿಯಾ ವಿರುದ್ಧದ ಪಂದ್ಯದಲ್ಲಿ ತಂಡವು 344 ರನ್ ಬಾರಿಸಿ ವಿಶ್ವ ದಾಖಲೆ ನಿರ್ಮಿಸಿತ್ತು. ಇದಕ್ಕೂ ಮುನ್ನ ನೇಪಾಳ ತಂಡ ಮಂಗೋಲಿಯಾ ವಿರುದ್ಧ ಹ್ಯಾಂಗ್‌ಝೌ (2023ರಲ್ಲಿ) 314/3 ರನ್‌ ಗಳಿಸಿತ್ತು.

28 ಎಸೆತಗಳಲ್ಲಿ 100: ಅಭಿಷೇಕ್‌ ದ್ವಿತೀಯ
ಸೈಯದ್‌ ಮುಷ್ತಾಕ್‌ ಅಲಿ ಟಿ20ಯಲ್ಲಿ 28 ಎಸೆತಗಳಲ್ಲಿ ಶತಕ ಸಿಡಿಸಿರುವ ಅಭಿಷೇಕ್‌ ಶರ್ಮಾ, ಟಿ20 ಕ್ರಿಕೆಟ್‌ನಲ್ಲಿ ವೇಗದ ಶತಕ ಬಾರಿಸಿದ 2ನೇ ಭಾರತೀಯ ಎನಿಸಿಕೊಂಡಿದ್ದಾರೆ. ಇದೇ ಕೂಟದಲ್ಲಿ ಗುಜರಾತ್‌ನ ಪಟೇಲ್‌ ಉರ್ವಿಲ್‌ ಪಟೇಲ್‌, ತ್ರಿಪುರ ವಿರುದ್ಧ ಇದೇ 28 ಎಸೆತಗಳಲ್ಲಿ ಶತಕ ಬಾರಿಸಿದ್ದರು. ಗುರುವಾರ ಪಂಜಾಬ್‌ ಪರ ಕಣಕ್ಕಿಳಿದಿದ್ದ ಅಭಿಷೇಕ್‌, ಮೇಘಾಲಯ ವಿರುದ್ಧ ಒಟ್ಟಾರೆ 29 ಎಸೆತಗಳಲ್ಲಿ 8 ಬೌಂಡರಿ, 11 ಸಿಕ್ಸರ್‌ ಸಹಿತ 106 ರನ್‌ ಸಿಡಿಸಿದರು. ಈ ಪಂದ್ಯದಲ್ಲಿ ಪಂಜಾಬ್‌ ಗೆದ್ದಿತು.

ಭುವನೇಶ್ವರ್‌ಗೆ ಹ್ಯಾಟ್ರಿಕ್‌ ವಿಕೆಟ್‌
ಉತ್ತರ ಪ್ರದೇಶ ಪರ ಕಣಕ್ಕಿಳಿದಿದ್ದ ವೇಗಿ ಭುವನೇಶ್ವರ್‌ ಕುಮಾರ್‌, ಝಾರ್ಖಂಡ್‌ ವಿರುದ್ಧ ಹ್ಯಾಟ್ರಿಕ್‌ ವಿಕೆಟ್‌ ಪಡೆದರು. ಪಂದ್ಯದ 17ನೇ ಓವರ್‌ನ ಆರಂಭಿಕ 3 ಎಸೆತಗಳಲ್ಲಿ ರಾಬಿನ್‌ ಮಿನ್ಝ , ಬಾಲಕೃಷ್ಣ, ವಿವೇಕಾನಂದ ತಿವಾರಿ ಅವರನ್ನು ಭುವಿ ಪೆವಿಲಿಯನ್‌ಗೆ ಅಟ್ಟಿದರು. ಯುಪಿ 10 ರನ್ನಿನಿಂದ ಗೆದ್ದಿತು.

ಗುಜರಾತ್‌ ವಿರುದ್ಧ ಕರ್ನಾಟಕಕ್ಕೆ ಸೋಲು
ಇಂದೋರ್‌: ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಟಿ20 ಪಂದ್ಯಾವಳಿಯ ತನ್ನ ಕೊನೆಯ ಪಂದ್ಯದಲ್ಲಿ ಕರ್ನಾಟಕ ತಂಡ ಸೋಲನುಭವಿಸಿದೆ.
ಗುರುವಾರ ನಡೆದ ಈ ಪಂದ್ಯದಲ್ಲಿ ಮಾಯಾಂಕ್‌ ಅಗರ್ವಾಲ್‌ ಪಡೆ ಗುಜರಾತ್‌ ವಿರುದ್ಧ 48 ರನ್‌ಗಳಿಂದ ಪರಾಭವಗೊಂಡಿತು. ರಾಜ್ಯ ತಂಡ ಈಗಾಗಲೇ ಕೂಟದಿಂದ ಹೊರ ಬಿದ್ದಿದೆ.

ಮೊದಲು ಬ್ಯಾಟಿಂಗ್‌ ನಡೆಸಿದ ಗುಜರಾತ್‌ ಆರ್ಯ ದೇಸಾಯಿ 73, ನಾಯಕ ಅಕ್ಷರ್‌ ಪಟೇಲ್‌ ಅವರ 56 ರನ್‌ ನೆರವಿನಿಂದ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 251 ರನ್‌ ಬಾರಿಸಿತು. ಗುರಿ ಬೆನ್ನತ್ತಿದ ಕರ್ನಾಟಕ ತಂಡವು ಮಾಯಾಂಕ್‌ 45, ಆರ್‌. ಸ್ಮರಣ್‌ 49 ರನ್‌ ನೆರವಿನಿಂದ 19.1 ಓವರ್‌ನಲ್ಲಿ 203 ರನ್ನಿಗೆ ಆಲೌಟ್‌ ಆಯಿತು.

Advertisement

Udayavani is now on Telegram. Click here to join our channel and stay updated with the latest news.

Next