Advertisement

ಸಯ್ಯದ್‌ ಮುಷ್ತಾಕ್‌ ಅಲಿ ಟ್ರೋಫಿ: ಪಂಜಾಬ್‌ ಪಂಚ್‌; ಬ್ಯಾಟಿಂಗ್‌ ಮರೆತು ಹೊರಬಿದ್ದ ಕರ್ನಾಟಕ

11:30 PM Jan 26, 2021 | Team Udayavani |

ಅಹ್ಮದಾಬಾದ್‌: ಕಳೆದೆರಡು ಬಾರಿಯ ಚಾಂಪಿಯನ್‌ ಕರ್ನಾಟಕ ತಂಡ ಪಂಜಾಬ್‌ ಎದುರು ಹೀನಾಯ ಬ್ಯಾಟಿಂಗ್‌ ಪ್ರದರ್ಶಿಸಿ ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಪಂದ್ಯಾವಳಿಯಿಂದ ಹೊರಬಿದ್ದಿದೆ. ಅಹ್ಮದಾಬಾದ್‌ನ “ಸರ್ದಾರ್‌ ಪಟೇಲ್‌ ಸ್ಟೇಡಿಯಂ’ನಲ್ಲಿ ಮಂಗಳವಾರ ನಡೆದ ಮೊದಲ ಕ್ವಾರ್ಟರ್‌ ಫೈನಲ್‌ನಲ್ಲಿ ಪಂಜಾಬ್‌ 9 ವಿಕೆಟ್‌ಗಳಿಂದ ಕರುಣ್‌ ನಾಯರ್‌ ಪಡೆಯನ್ನು ಮಗುಚಿತು.

Advertisement

ಬ್ಯಾಟಿಂಗಿಗೆ ಇಳಿಸಲ್ಪಟ್ಟ ಕರ್ನಾಟಕ 17.2 ಓವರ್‌ಗಳಲ್ಲಿ ಜುಜುಬಿ 87 ರನ್ನಿಗೆ ಗಂಟುಮೂಟೆ ಕಟ್ಟಿದರೆ, ಪಂಜಾಬ್‌ 12.4 ಓವರ್‌ಗಳಲ್ಲಿ ಒಂದೇ ವಿಕೆಟಿಗೆ 89 ರನ್‌ ಬಾರಿಸಿ ಸೆಮಿಫೈನಲ್‌ಗೆ ಲಗ್ಗೆ ಇರಿಸಿತು.

ಪಂಜಾಬ್‌ ವಿರುದ್ಧ 2ನೇ ಸೋಲು

ಇದು ಪ್ರಸಕ್ತ ಪಂದ್ಯಾವಳಿಯಲ್ಲಿ ಕರ್ನಾಟಕಕ್ಕೆ ಪಂಜಾಬ್‌ ವಿರುದ್ಧ ಎದುರಾದ ಎರಡನೇ ಸೋಲು. ಬೆಂಗಳೂರಿನಲ್ಲೇ ನಡೆದ ಲೀಗ್‌ ಹಂತದ ಪಂದ್ಯದಲ್ಲೂ ಕರ್ನಾಟಕ 9 ವಿಕೆಟ್‌ಗಳಿಂದ ಪಂಜಾಬ್‌ಗ ಶರಣಾಗಿತ್ತು. ಇದಕ್ಕೆ ಸೇಡು ತೀರಿಸಿಕೊಳ್ಳುವ ಉತ್ತಮ ಅವಕಾಶವೊಂದು ರಾಜ್ಯ ತಂಡಕ್ಕೆ ಎದುರಾಯಿತಾದರೂ ಬ್ಯಾಟಿಂಗ್‌ ಮರೆತು ಮುಖಭಂಗ ಅನುಭವಿಸಿತು.

ಪೇಸ್‌ ಬೌಲರ್‌ಗಳಾದ ಸಿದ್ಧಾರ್ಥ್ ಕೌಲ್‌ (15ಕ್ಕೆ 3), ಸಂದೀಪ್‌ ಶರ್ಮ (17ಕ್ಕೆ 2), ಆರ್ಷದೀಪ್‌ ಸಿಂಗ್‌ (16ಕ್ಕೆ 2) ಮತ್ತು ರಮಣ್‌ದೀಪ್‌ ಸಿಂಗ್‌ (22ಕ್ಕೆ 2) ಸೇರಿಕೊಂಡು ಕರ್ನಾಟಕಕ್ಕೆ ಏಳYತಿ ಇಲ್ಲದಂತೆ ಮಾಡಿದರು. ಇವರ ದಾಳಿಗೆ ತತ್ತರಿಸಿದ ರಾಜ್ಯದ ಬ್ಯಾಟ್ಸ್‌ ಮನ್‌ಗಳು ದಿಕ್ಕಾಪಾಲಾದರು.

Advertisement

ಕರ್ನಾಟಕದ ಮೊದಲ 4 ವಿಕೆಟ್‌ ಕೇವಲ 2 ರನ್‌ ಅಂತರದಲ್ಲಿ ಉದುರಿತು. ನೋಲಾಸ್‌ 24ರಲ್ಲಿದ್ದ ರಾಜ್ಯ ತಂಡ, 26ಕ್ಕೆ ತಲಪುವಷ್ಟರಲ್ಲಿ ನಾಲ್ವರನ್ನು ಕಳೆದುಕೊಂಡಿತು. ಪಡಿಕ್ಕಲ್‌ (11), ನಾಯರ್‌ (12), ದೇಶಪಾಂಡೆ (0) ಮತ್ತು ಶರತ್‌ (2) ಪೆವಿಲಿಯನ್‌ ಸೇರಿಕೊಂಡರು. ಅನಿರುದ್ಧ ಜೋಶಿ (27) ಹೋರಾಟದ ಸೂಚನೆಯಿತ್ತರೂ ಉಳಿದವರು ಪಟಪಟನೆ ಉದುರಿದರು. ಕೊನೆಯ 5 ವಿಕೆಟ್‌ 15 ರನ್‌ ಅಂತರದಲ್ಲಿ ಹಾರಿ ಹೋಯಿತು!

ಸುಲಭ ಚೇಸಿಂಗ್‌

ಜವಾಬು ನೀಡತೊಡಗಿದ ಪಂಜಾಬ್‌ ಅಭಿಷೇಕ್‌ ಶರ್ಮ (4) ಅವರನ್ನು ಬೇಗನೇ ಕಳೆದುಕೊಂಡಿತು. ಆದರೆ ಪ್ರಭ್‌ಶಿಮ್ರಾನ್‌ ಸಿಂಗ್‌ (ಅಜೇಯ 49) ಮತ್ತು ಮನ್‌ದೀಪ್‌ ಸಿಂಗ್‌ (ಅಜೇಯ 35) ಅವರನ್ನು ಅಲುಗಾಡಿಸಲು ಕರ್ನಾಟಕದ ಬೌಲರ್‌ಗಳಿಂದ ಸಾಧ್ಯವಾಗಲಿಲ್ಲ. ಹೀಗೆ ಪಂಜಾಬ್‌ ಅಜೇಯವಾಗಿ ಸೆಮಿಫೈನಲ್‌ ಪ್ರವೇಶಿಸಿತು. ಮನ್‌ದೀಪ್‌ ಸಿಂಗ್‌ ಪಡೆ ಲೀಗ್‌ ಹಂತದ ಐದೂ ಪಂದ್ಯಗಳನ್ನು ಗೆದ್ದು  ನಾಕೌಟ್‌ಗೆ ಲಗ್ಗೆ ಇರಿಸಿತ್ತು.

ಸಂಕ್ಷಿಪ್ತ ಸ್ಕೋರ್‌ :

ಕರ್ನಾಟಕ-17.2 ಓವರ್‌ಗಳಲ್ಲಿ 87 (ಜೋಶಿ 27, ಶ್ರೇಯಸ್‌ ಗೋಪಾಲ್‌ 13, ನಾಯರ್‌ 12, ಪಡಿಕ್ಕಲ್‌ 11, ಕೌಲ್‌ 15ಕ್ಕೆ 3, ಸಂದೀಪ್‌ ಶರ್ಮ 17ಕ್ಕೆ 2, ಆರ್ಷದೀಪ್‌ 16ಕ್ಕೆ 2, ರಮಣ್‌ದೀಪ್‌ 22ಕ್ಕೆ 2). ಪಂಜಾಬ್‌-12.4 ಓವರ್‌ಗಳಲ್ಲಿ ಒಂದು ವಿಕೆಟಿಗೆ 89 (ಪ್ರಭ್‌ಶಿಮ್ರಾನ್‌ ಔಟಾಗದೆ 49, ಮನ್‌ದೀಪ್‌ ಔಟಾಗದೆ 35, ಮಿಥುನ್‌ 11ಕ್ಕೆ 1).

Advertisement

Udayavani is now on Telegram. Click here to join our channel and stay updated with the latest news.

Next