Advertisement

Extortion: ಆನ್‌ಲೈನ್‌ ಗೇಮ್‌; ಬಾಲಕನ ಬೆದರಿಸಿ ಸುಲಿಗೆ

12:57 PM May 01, 2024 | Team Udayavani |

ಬೆಂಗಳೂರು: ಪೋಷಕರೇ, ನಿಮ್ಮ ಮಕ್ಕಳಿಗೆ ಸ್ಮಾರ್ಟ್‌ ಫೋನ್‌ ಕೊಡಿಸಿದ್ದೀರಾ? ಆ ಮೊಬೈಲ್‌ನಲ್ಲಿ ಅವರು ಏನೆಲ್ಲ ಆಡುತ್ತಾರೆ? ನೋಡುತ್ತಾರೆ? ಎಂದು ಗಮನ ಹರಿಸಿದ್ದೀರಾ? ಇಲ್ಲವಾದರೆ ಕೂಡಲೇ ಅವರ ಮೇಲೆ ನಿಗಾವಹಿಸಿ…

Advertisement

ಹೌದು, ಪಬ್‌ಜೀ ಮತ್ತು ಡ್ರೀಮ್‌-11, ಜಿಬಿಎಂಐ ಆನ್‌ಲೈನ್‌ ಗೇಮ್‌ಗಳ ವ್ಯಾಮೋಹಕ್ಕೆ ಬಿದ್ದಿದ್ದ ಬಾಲಕನನ್ನು ಬೆದರಿಸಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ಸುಲಿಗೆ ಮಾಡಿದ್ದ ಇಬ್ಬರು ಬಾಲಕರು ಸೇರಿ ಆರು ಮಂದಿಯನ್ನು ರಾಜ ರಾಜೇಶ್ವರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಕಾರ್ತಿಕ್‌ (32), ಸುನೀಲ್‌(30), ಕೆಂಗೇರಿಯ ವೇಮನ್‌(19) ಹಾಗೂ ವಿವೇಕ್‌(19) ಬಂಧಿತರು. ಜತೆಗೆ ಇಬ್ಬರು ಅಪ್ರಾಪ್ತ ವಯಸ್ಸಿನ ಬಾಲಕರನ್ನು ವಶಕ್ಕೆ ಪಡೆದು ಬಾಲ ಮಂದಿರಕ್ಕೆ ಕಳುಹಿಸಲಾಗಿದೆ. ಬಂಧಿತರಿಂದ 302 ಗ್ರಾಂ ತೂಕದ 2 ಚಿನ್ನದ ಗಟ್ಟಿ ಹಾಗೂ 23.50 ಲಕ್ಷ ರೂ. ನಗದು ವಶಕ್ಕೆ ಪಡೆಯಲಾಗಿದೆ ಎಂದು ನಗರ ಪೊಲೀಸ್‌ ಆಯಕ್ತ ಬಿ.ದಯಾನಂದ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಆರ್‌.ಆರ್‌.ನಗರದ ಐಡಿಯಲ್‌ ಹೋಮ್‌ ನಿವಾಸಿ ತಿರುಮಲ ಎಂಬುವರ ಪುತ್ರ ಹಾಗೂ ಇಬ್ಬರು ಕಾನೂನು ಸಂಘರ್ಷಕ್ಕೊಳಗಾದ ಬಾಲಕರು ಒಂದೇ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ದೂರುದಾರರ ಪುತ್ರ ಡ್ರೀಮ್‌-11 ಸೇರಿ ಹಲವಾರು ಆನ್‌ಲೈನ್‌ ಗೇಮಿಂಗ್‌ ಆಟವಾಡುತ್ತಿದ್ದ. ಈ ವಿಚಾರ ತಿಳಿದ ಆತನ ಸ್ನೇಹಿತರು, ದೂರುದಾರರ ಪುತ್ರನಿಗೆ ಹಣ ತಂದು ಕೊಡುವಂತೆ ಬ್ಲ್ಯಾಕ್‌ಮೇಲ್ ಮಾಡಲು ಆರಂಭಿಸಿದ್ದಾರೆ. ಒಂದು ವೇಳೆ ಹಣ ಕೊಡದಿದ್ದರೆ, ಈ ವಿಚಾರವನ್ನು ನಿಮ್ಮ ಪೋಷಕರಿಗೆ ಹೇಳುತ್ತೇವೆ ಎಂದು ಹೆದರಿಸಿದ್ದಾರೆ. ಅದರಿಂದ ಹೆದರಿದ ಬಾಲಕ ಕಳೆದ ಆರೇಳು ತಿಂಗಳಿಂದ, ತನ್ನ ಪೋಷಕರಿಗೆ ತಿಳಿಯದಂತೆ ಮನೆಯಲ್ಲಿದ್ದ ಚಿನ್ನಾಭರಣ ತಂದು ಕೊಡುತ್ತಿದ್ದ. ಈ ಬಾಲಕರು, ಬಂಧಿತ ಆರೋಪಿಗಳಿಗೆ ಕೊಟ್ಟು ಮಾರಾಟ ಮಾಡಿಸುತ್ತಿದ್ದರು ಎಂಬುದು ಗೊತ್ತಾಗಿದೆ ಎಂದು ಪೊಲೀಸರು ಹೇಳಿದರು.

ಕಳೆದ ಆರೇಳು ತಿಂಗಳಿಂದ ಬಾಲಕನಿಂದ 600-700 ಗ್ರಾಂ ಚಿನ್ನಾಭರಣವನ್ನು ಪಡೆದುಕೊಂಡು ಮಾರಾಟ ಮಾಡಿ ಬಂದ ಹಣದ ಪೈಕಿ ಆರೋಪಿಗಳು ದೂರುದಾರರ ಪುತ್ರನಿಗೆ 5 ಲಕ್ಷ ರೂ. ಕೊಟ್ಟಿದ್ದರು. ಈ ಹಣವನ್ನು ಬಾಲಕ ತನ್ನ ಕಾರು ಚಾಲಕನಿಗೆ 1.69 ಲಕ್ಷ ರೂ. ಹಾಗೂ ಸ್ನೇಹಿತರಿಗೆ ಪಾರ್ಟಿ ಮಾಡಲು ಹಾಗೂ ಆ್ಯಪಲ್‌ ಐ-ಪ್ಯಾಡ್‌ ಖರೀದಿಸಿ, ಇತರೆ ಹಣ ಖರ್ಚು ಮಾಡಿದ್ದಾನೆ. ಈ ಮಧ್ಯೆ ದೂರುದಾರರ ಪುತ್ರ ಹಾಗೂ ಪೊಲೀಸರು ವಶಕ್ಕೆ ಪಡೆದುಕೊಂಡಿರುವ ಬಾಲಕರು ಒಮ್ಮೆ ಮಸಾಜ್‌ ಪಾರ್ಲರ್‌ಗೆ ಹೋಗಿದ್ದಾರೆ. ಅದನ್ನು ಈ ಇಬ್ಬರು ಬಾಲಕರು ವಿಡಿಯೋ ಮಾಡಿಕೊಂಡಿದ್ದರು. ಆನ್‌ಲೈನ್‌ ಗೇಮಿಂಗ್‌ ಆಟವಾಡುವ ಕುರಿತು ಬ್ಲ್ಯಾಕ್‌ಮೇಲ್ ಮಾಡಿ ಸುಲಿಗೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

Advertisement

ಮಕ್ಕಳ ಬಗ್ಗೆ ಪೋಷಕರು ಎಚ್ಚರವಹಿಸಿ: ಕಮಿಷನ್‌:

ಮಕ್ಕಳಿಗೆ ಸ್ಮಾರ್ಟ್‌ಫೋನ್‌ ಕೊಡಿಸುವ ಪೋಷಕರು ಅವರ ಕಾರ್ಯ ಚಟುವಟಿಕೆಗಳ ಮೇಲೆ ನಿಗಾವಹಿಸಬೇಕು. ಅವರು ಮೊಬೈಲ್‌ ಅಡಿಕ್ಷನ್‌ ಆಗಿದ್ದಾರೆಯೇ? ಆನ್‌ಲೈನ್‌ ಗೇಮಿಂಗ್‌ ಗೀಳಿಗೆ ಬಿದ್ದಿದ್ದಾರೆಯೇ ಎಂದು ಪೋಷಕರು ಎಚ್ಚರಿಕೆ ವಹಿಸಬೇಕು ಎಂದು ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ ಸಲಹೆ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಕ್ಕಳ ಕಾರ್ಯಚಟುವಟಿಕೆಗಳ ಬಗ್ಗೆ ನಿಗಾವಹಿಸಿ ಸಮಂಜಸವಾದ ಮಾರ್ಗದರ್ಶನ ಮತ್ತು ಪೋಷಣೆ ಮಾಡಬೇಕು. ಇಲ್ಲವಾದರೆ ಆನ್‌ಲೈನ್‌ ಗೇಮ್‌ ಗೀಳಿಗೆ ಬಿದ್ದ ಮಕ್ಕಳು ದಾರಿ ತಪ್ಪುವ ಸಾಧ್ಯತೆಯಿದೆ. ಈ ಬಗ್ಗೆ ಪೋಷಕರು ಜಾಗೃತೆ ವಹಿಸಬೇಕು ಎಂದು ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next