Advertisement

Syed Modi International: ಫೇವರಿಟ್‌ ಸಿಂಧು, ಲಕ್ಷ್ಯ ಸೆಮಿಫೈನಲ್‌ಗೆ

12:32 AM Nov 30, 2024 | Team Udayavani |

ಲಕ್ನೋ: ಭಾರತದ ಸ್ಟಾರ್‌ ಶಟ್ಲರ್‌ಗಳಾದ ಪಿ.ವಿ. ಸಿಂಧು ಮತ್ತು ಲಕ್ಷ್ಯ ಸೇನ್‌ “ಸಯ್ಯದ್‌ ಮೋದಿ ಇಂಟರ್‌ನ್ಯಾಶನಲ್‌ ಸೂಪರ್‌ 300′ ಬ್ಯಾಡ್ಮಿಂಟನ್‌ ಪಂದ್ಯಾವಳಿಯ ಸೆಮಿಫೈನಲ್‌ಗೆ ಓಟ ಬೆಳೆಸಿದ್ದಾರೆ.

Advertisement

ಶುಕ್ರವಾರದ ಕ್ವಾರ್ಟರ್‌ ಫೈನಲ್‌ನಲ್ಲಿ ಅಗ್ರ ಶ್ರೇಯಾಂಕದ ಸಿಂಧು ಚೀನದ ದೈ ವಾಂಗ್‌ ಅವರನ್ನು 21-15, 21-17 ಅಂತರದಿಂದ ಮಣಿಸಿದರು. ಪುರುಷರ ಸಿಂಗಲ್ಸ್‌ನಲ್ಲಿ ಲಕ್ಷ್ಯ ಸೇನ್‌ ಭಾರತದವರೇ ಆದ ಮೀರಾಬ ಲುವಾಂಗ್‌ ಮೈಸ್ನಮ್‌ ಅವರನ್ನು 21-8, 21-19ರಿಂದ ಮಣಿಸಿದರು.

“ನನಗೆ ಇಂದಿನ ಪಂದ್ಯ ಬಹಳ ಮುಖ್ಯವಾಗಿತ್ತು. ಎದುರಾಳಿ ಕೆಳ ರ್‍ಯಾಂಕ್‌ ಆಟಗಾರ್ತಿ ಎಂಬುದಾಗಿ ನಾನು ಪರಿಗಣಿಸಲೇ ಇಲ್ಲ. ನಿನ್ನೆಯ ತಪ್ಪುಗಳನ್ನು ತಿದ್ದಿಕೊಳ್ಳುವುದು ನನ್ನ ಉದ್ದೇಶವಾಗಿತ್ತು. ಇದರಲ್ಲಿ ಯಶಸ್ಸು ಕಂಡಿದ್ದೇನೆ’ ಎಂದು ಸಿಂಧು ಹೇಳಿದರು. ಸಿಂಧು-ವಾಂಗ್‌ ರ್‍ಯಾಂಕಿಂಗ್‌ನಲ್ಲಿ ಭರ್ತಿ 100 ಸ್ಥಾನಗಳ ಅಂತರವಿದೆ (18 ಮತ್ತು 118).
ಸಿಂಧು ಅವರ ಸೆಮಿಫೈನಲ್‌ ಎದುರಾಳಿ ಭಾರತದವರೇ ಆದ ಉನ್ನತಿ ಹೂಡಾ. ಇವರು ಅಮೆರಿಕದ ಇಶಿಕಾ ಜೈಸ್ವಾಲ್‌ ವಿರುದ್ಧ 21-16, 21-9 ಅಂತರದ ಜಯ ಸಾಧಿಸಿದರು. ಲಕ್ಷ್ಯ ಸೇನ್‌ ಜಪಾನ್‌ನ ಶೋಗೊ ಒಗಾವ ವಿರುದ್ಧ ಆಡಲಿದ್ದಾರೆ.

ಡಬಲ್ಸ್‌ನಲ್ಲೂ ಮುನ್ನಡೆ
ವನಿತಾ ಡಬಲ್ಸ್‌, ಮಿಶ್ರ ಡಬಲ್ಸ್‌ನಲ್ಲೂ ಭಾರತೀಯರಿಗೆ ಸೆಮಿಫೈನಲ್‌ ಟಿಕೆಟ್‌ ಲಭಿಸಿದೆ. ಡಬಲ್ಸ್‌ನಲ್ಲಿ ದ್ವಿತೀಯ ಶ್ರೇಯಾಂಕದ ಟ್ರೀಸಾ ಜಾಲಿ-ಗಾಯತ್ರಿ ಗೋಪಿಚಂದ್‌ ಮಲೇಷ್ಯಾದ ಗೊ ಪೀ ಕೀ-ಟೋಹ್‌ ಮಿ ಕ್ಸಿಂಗ್‌ ಅವರನ್ನು 21-8, 21-15ರಿಂದ ಮಣಿಸಿದರು. ಮಿಶ್ರ ಡಬಲ್ಸ್‌ನಲ್ಲಿ ಧ್ರುವ ಕಪಿಲ-ತನಿಷಾ ಕ್ರಾಸ್ಟೊ ಮಲೇಷ್ಯಾದ ಲೂ ಬಿಂಗ್‌ ಕುನ್‌-ಹೊ ಲೊ ಈ ವಿರುದ್ಧ 21-16, 21-13 ಅಂತರದ ಮೇಲುಗೈ ಸಾಧಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next