ಲಕ್ನೋ: ಗೆಲುವಿನ ಓಟ ಮುಂದುವರಿಸಿರುವ ಪಿ.ವಿ.ಸಿಂಧು, ಸಾಯಿ ಪ್ರಣೀತ್ ಮತ್ತು ಸಮೀರ್ ವರ್ಮಾ ಸೈಯದ್ ಮೋದಿ ಬ್ಯಾಡ್ಮಿಂಟನ್ ಟೂರ್ನಿಯ ಸಿಂಗಲ್ಸ್‌ನಲ್ಲಿ ಫೈನಲ್‌ಗೆ ಪ್ರವೇಶಿಸಿದ್ದಾರೆ. ಮಹಿಳಾ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ ಮತ್ತು ಸಿಕ್ಕಿ ರೆಡ್ಡಿ ಜೋಡಿ ಫೈನಲ್‌ಗೆ ಲಗ್ಗೆ ಹಾಕಿದೆ.
ಶನಿವಾರ ನಡೆದ ಮಹಿಳಾ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ಸಿಂಧು 21-11, 21-19 ರಿಂದ ಇಂಡೋನೇಶ್ಯದ ಫಿಟ್ರಿನಿ ವಿರುದ್ಧ ಜಯ ಸಾಧಿಸಿದರು. ಮೊದಲ ಸೆಟ್‌ನಲ್ಲಿ ಸುಲಭ ಜಯ ಸಾಧಿಸಿದ ಸಿಂಧುಗೆ ಎರಡನೇ ಸೆಟ್‌ನಲ್ಲಿ ಇಂಡೋನೇಶ್ಯ ಆಟಗಾರ್ತಿ ತೀವ್ರ ಸ್ಪರ್ಧೆ ಒಡ್ಡಿದರು. ಆದರೆ ಅನುಭವಿ ಸಿಂಧು ಪಂದ್ಯದ ಕೊನೆಯ ಕ್ಷಣದಲ್ಲಿ ಭರ್ಜರಿ ಆಡವಾಡಿ ಪಂದ್ಯವನ್ನು ವಶಪಡಿಸಿಕೊಂಡು ಫೈನಲ್ ಪ್ರವೇಶಿಸಿದರು. ಫೈನಲ್ ಪಂದ್ಯದಲ್ಲಿ ಸಿಂಧು ಇಂಡೋನೇಶ್ಯದ ಗ್ರಿಗೋರಿಯಾ ಮರಿಸ್ಕಾರನ್ನು ಎದುರಿಸಲಿದ್ದಾರೆ.
ಪುರುಷರ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ರಾಷ್ಟ್ರೀಯ ಚಾಂಪಿಯನ್ ಸಮೀರ್ ವರ್ಮಾ 21-15, 21-11 ರಿಂದ ಹರ್ಶಿಲ್ ದಾನಿ ವಿರುದ್ಧ ಜಯ ಸಾಧಿಸಿದರು.
ಮತ್ತೂಂದು ಪುರುಷರ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ಸಾಯಿ ಪ್ರಣೀತ್ 15-21, 21-10, 21-17 ರಿಂದ ಕೆ.ಶ್ರೀಕಾಂತ್ ವಿರುದ್ಧ ಜಯ ಸಾಧಿಸಿದರು. ಹೀಗಾಗಿ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ಸಮೀರ್ ಮತ್ತು ಸಾಯಿ ಪ್ರಣೀತ್ ಮುಖಾಮುಖೀ ಆಗಲಿದ್ದಾರೆ.
ಮಹಿಳಾ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ ಮತ್ತು ಸಿಕ್ಕಿ ರೆಡ್ಡಿ ಜೋಡಿ 18-21, 21-12, 21-13 ರಿಂದ ಸಂಜನಾ ಸಂತೋಷ್ ಮತ್ತು ಆರತಿ ಸಾರಾ ವಿರುದ್ಧ ಜಯ ಸಾಧಿಸಿದರು. 47 ನಿಮಿಷ ನಡೆದ ಹೋರಾಟದಲ್ಲಿ ಅಶ್ವಿನಿ ಜೋಡಿ ಮೊದಲ ಸೆಟ್ ಕಳೆದುಕೊಂಡರೂ ನಂತರದ ಎರಡು ಸೆಟ್‌ಗೆದ್ದು ಫೈನಲ್ ಪ್ರವೇಶಿಸಿದರು.