ಸಿಡ್ನಿ: “ಬಾಕ್ಸಿಂಗ್ ಡೇ’ ಟೆಸ್ಟ್ ಪಂದ್ಯವನ್ನು ಅಮೋಘ ರೀತಿಯಲ್ಲಿ ಗೆದ್ದು, ಸರಣಿ ಸಮಬಲಗೊಳಿಸಿದ ಬಳಿಕ ವಿಶ್ರಾಂತಿಯಲ್ಲಿದ್ದ ಭಾರತದ ಕ್ರಿಕೆಟಿಗರು ತೃತೀಯ ಟೆಸ್ಟ್ ಪಂದ್ಯಕ್ಕಾಗಿ ಶನಿವಾರ ಅಭ್ಯಾಸಕ್ಕೆ ಇಳಿದರು. ಆತಿಥೇಯ ಆಸ್ಟ್ರೇಲಿಯ ತಂಡದ ಆಟಗಾರರೂ ಸುದೀರ್ಘ ಪ್ರ್ಯಾಕ್ಟೀಸ್ ನಡೆಸಿದರು.
ಸದ್ಯ, ಸಿಡ್ನಿಯಲ್ಲಿ ನಡೆಯುವ ಹೊಸ ವರ್ಷದ ಟೆಸ್ಟ್ ಪಂದ್ಯಕ್ಕಾಗಿ ಮೆಲ್ಬರ್ನ್ನಲ್ಲಿ ಅಭ್ಯಾಸ ಸಾಗುತ್ತಿದೆ. ಸೋಮವಾರದ ತನಕ ಎಂಸಿಜಿಯಲ್ಲಿ ತಾಲೀಮು ನಡೆಸಲಿರುವ ಕ್ರಿಕೆಟಿಗರು, ಜ. 5ರಂದು ಸಿಡ್ನಿ ತಲುಪಲಿದ್ದಾರೆ.
ಫೀಲ್ಡಿಂಗ್ ಕೋಚ್ ಆರ್. ಶ್ರೀಧರ್ ಮಾರ್ಗದರ್ಶನದಲ್ಲಿ ಕ್ರಿಕೆಟಿಗರು ತ್ರೋ ಅಭ್ಯಾಸಕ್ಕೆ ಹೆಚ್ಚಿನ ಅವಧಿಯನ್ನು ಮೀಸಲಿರಿಸಿದರು. ಚೆಂಡನ್ನು ಫೀಲ್ಡ್ ಮಾಡಿ ಸ್ಟಂಪ್‌ಗೆ ಗುರಿಯಿಟ್ಟು ಎಸೆಯುವುದು ಮೊದಲ ಅವಧಿಯ ಡ್ರಿಲ್ ಆಗಿತ್ತು.
ಶುಕ್ರವಾರ ರೋಹಿತ್ ಶರ್ಮ ಒಬ್ಬರೇ ಅಭ್ಯಾಸ ಮಾಡಿದ್ದರು. ಶನಿವಾರ ಟೀಮ್ ಇಂಡಿಯಾ ಸದಸ್ಯರೆಲ್ಲರೂ ಅಂಗಳದಲ್ಲಿ ಕಾಣಿಸಿ ಕೊಂಡರು.
ಹೊಸ ವರ್ಷ, ಹೊಸ ಸಾಮರ್ಥ್ಯ
ಭಾರತೀಯರ ಅಭ್ಯಾಸಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಟ್ವಿಟರ್‌ನಲ್ಲಿ ಚಿತ್ರವೊಂದನ್ನು ಪೋಸ್ಟ್ ಮಾಡಿದ್ದು, “ನ್ಯೂ ಇಯರ್, ರೀನ್ಯೂಡ್ ಎನರ್ಜಿ, ಹೌ ಈಸ್ ದ್ಯಾಟ್ ಫಾರ್ ಜೋಶ್?’ ಎಂಬ ಶೀರ್ಷಿಕೆ ನೀಡಿದೆ.