Advertisement

ಸಿಡ್ನಿ ಟೆಸ್ಟ್‌ : ಜಾನಿ ಬೇರ್‌ಸ್ಟೊ ಸೆಂಚುರಿ ಶೋ

10:46 PM Jan 07, 2022 | Team Udayavani |

ಸಿಡ್ನಿ: ಜಾನಿ ಬೇರ್‌ಸ್ಟೊ ಬಾರಿಸಿದ ಆಪತ್ಕಾಲದ ಅಜೇಯ ಶತಕ (103) ಹಾಗೂ ಬೆನ್‌ ಸ್ಟೋಕ್ಸ್‌ ಅವರ ಅರ್ಧ ಶತಕದ ನೆರವಿನಿಂದ ಸಿಡ್ನಿ ಟೆಸ್ಟ್‌ ಪಂದ್ಯದಲ್ಲಿ ಇಂಗ್ಲೆಂಡ್‌ ಒಂದಿಷ್ಟು ಚೇತರಿಕೆ ಪಡೆದಿದೆ. ಆದರೆ ಆಸ್ಟ್ರೇಲಿಯದ ಮೊತ್ತಕ್ಕಿಂತ ಬಹಳ ಹಿಂದಿದೆ.

Advertisement

ಆಸ್ಟ್ರೇಲಿಯ 8 ವಿಕೆಟಿಗೆ 416 ರನ್‌ ಗಳಿಸಿ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡಿತ್ತು. ಜವಾಬು ನೀಡತೊಡಗಿದ ಇಂಗ್ಲೆಂಡ್‌ 3ನೇ ದಿನದಾಟದ ಅಂತ್ಯಕ್ಕೆ 7 ವಿಕೆಟಿಗೆ 258 ರನ್‌ ಮಾಡಿದ್ದು, ಇನ್ನೂ 158 ರನ್‌ ಹಿನ್ನಡೆಯಲ್ಲಿದೆ.

ಇಂಗ್ಲೆಂಡ್‌ ಒಂದು ಹಂತದಲ್ಲಿ 34 ರನ್ನಿಗೆ 4 ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಹಮೀದ್‌ (6), ಕ್ರಾಲಿ (18), ಮಲಾನ್‌ (3) ಮತ್ತು ನಾಯಕ ರೂಟ್‌ (0) ಪೆವಿಲಿಯನ್‌ ಸೇರಿಯಾಗಿತ್ತು. ಈ ಹಂತದಲ್ಲಿ ಜತೆಗೂಡಿದ ಬೇರ್‌ಸ್ಟೊ-ಸ್ಟೋಕ್ಸ್‌ 5ನೇ ವಿಕೆಟಿಗೆ 128 ರನ್‌ ಪೇರಿಸಿ ತಂಡಕ್ಕೆ ರಕ್ಷಣೆ ಒದಗಿಸಿದರು.

ಇದನ್ನೂ ಓದಿ:ಪ್ರೊ ಕಬಡ್ಡಿ: ಜೈಪುರ, ಹರ್ಯಾಣ ಜಯಭೇರಿ

ಬೇರ್‌ಸ್ಟೊ 7ನೇ ಸೆಂಚುರಿ
ಇಬ್ಬರ ಆಟವೂ ಆಕ್ರಮಣಕಾರಿಯಾಗಿತ್ತು. ಜಾನಿ ಬೇರ್‌ಸ್ಟೊ 7ನೇ ಶತಕದ ಸಂಭ್ರಮಾಚರಣೆ ನಡೆಸಿದರು. ಅವರು 103 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. 140 ಎಸೆತಗಳ ಈ ಅಮೋಘ ಆಟದ ವೇಳೆ 8 ಬೌಂಡರಿ ಹಾಗೂ 3 ಸಿಕ್ಸರ್‌ ಸಿಡಿದಿವೆ. ಇದು ಈ ಸರಣಿಯಲ್ಲಿ ಇಂಗ್ಲೆಂಡ್‌ ಆಟಗಾರನಿಂದ ದಾಖಲಾದ ಮೊದಲ ಶತಕ. ಹಾಗೆಯೇ ಇದು 2018ರ ಬಳಿಕ ಬೇರ್‌ಸ್ಟೊ ಹೊಡೆದ ಮೊದಲ ಶತಕವೂ ಹೌದು. ಆ್ಯಶಸ್‌ನಲ್ಲಿ ದಾಖಲಾದ ಅವರ 2ನೇ ಸೆಂಚುರಿ. ಮೊದಲನೆಯದು 2017ರ ಪರ್ತ್‌ ಪಂದ್ಯದಲ್ಲಿ ಬಂದಿತ್ತು (119).

Advertisement

ಬೆನ್‌ ಸ್ಟೋಕ್ಸ್‌ 91 ಎಸೆತಗಳಿಂದ 66 ರನ್‌ ಬಾರಿಸಿದರು. ಇದರಲ್ಲಿ 9 ಫೋರ್‌ ಹಾಗೂ ಒಂದು ಸಿಕ್ಸರ್‌ ಸೇರಿದೆ. ಸ್ಟೋಕ್ಸ್‌ ವಿಕೆಟ್‌ ಉರುಳಿದ ಬೆನ್ನಲ್ಲೇ ಕೀಪರ್‌ ಜಾಸ್‌ ಬಟ್ಲರ್‌ ಖಾತೆ ತೆರೆಯದೆ ವಾಪಸಾದರು. ಆಗ ಬೇರ್‌ಸ್ಟೊ-ಮಾರ್ಕ್‌ ವುಡ್‌ (39) ಸೇರಿಕೊಂಡು 72 ರನ್‌ ಜತೆಯಾಟದ ಮೂಲಕ ತಂಡಕ್ಕೆ ಮತ್ತೂಂದು ಕಂತಿನ ರಕ್ಷಣೆ ಒದಗಿಸಿದರು. ಬೇರ್‌ಸ್ಟೊ ಜತೆಗೆ 4 ರನ್‌ ಮಾಡಿದ ಜಾಕ್‌ ಲೀಚ್‌ ಕ್ರೀಸಿನಲ್ಲಿದ್ದಾರೆ.

ಸಂಕ್ಷಿಪ್ತ ಸ್ಕೋರ್‌: ಆಸ್ಟ್ರೇಲಿಯ-8 ವಿಕೆಟಿಗೆ 416 ಡಿಕ್ಲೇರ್‌. ಇಂಗ್ಲೆಂಡ್‌-7 ವಿಕೆಟಿಗೆ 258 (ಬೇರ್‌ಸ್ಟೊ ಬ್ಯಾಟಿಂಗ್‌ 103, ಸ್ಟೋಕ್ಸ್‌ 66, ವುಡ್‌ 39, ಬೋಲ್ಯಾಂಡ್‌ 25ಕ್ಕೆ 2, ಕಮಿನ್ಸ್‌ 68ಕ್ಕೆ 2).

Advertisement

Udayavani is now on Telegram. Click here to join our channel and stay updated with the latest news.

Next