ಸಿಡ್ನಿ: ಆ್ಯಶಸ್ ಪ್ರತಿಷ್ಠೆಗಾಗಿ ಪರದಾಡುತ್ತಿರುವ ಪ್ರವಾಸಿ ಇಂಗ್ಲೆಂಡ್ ವರ್ಷಾರಂಭದ ಸಿಡ್ನಿ ಟೆಸ್ಟ್ ಪಂದ್ಯದ ಮೊದಲ ದಿನ 5 ವಿಕೆಟಿಗೆ 233 ರನ್ ಗಳಿಸಿದೆ. ನಾಯಕ ಜೋ ರೂಟ್ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಡೇವಿಡ್ ಮಾಲನ್ ಉಪಯುಕ್ತ ಆಟವಾಡಿ ತಂಡವನ್ನು ಸಂಕಟದಿಂದ ಪಾರುಮಾಡಿದರು.
ಮಳೆಯಿಂದಾಗಿ ಈ ಪಂದ್ಯದ ಮೊದಲ ಅವಧಿಯ ಆಟ ಸಂಪೂರ್ಣ ನಷ್ಟವಾಗಿತ್ತು. ಲಂಚ್ ಬಳಿಕ ಆರಂಭಗೊಂಡ ಆಟ 81.4 ಓವರ್‌ಗಳ ತನಕ ಸಾಗಿತು. ಆಸ್ಟ್ರೇಲಿಯದ ವೇಗಿಗಳು ಸಿಡ್ನಿ ಟ್ರ್ಯಾಕ್‌ನಲ್ಲಿ ಉತ್ತಮ ಲಯ ಸಾಧಿಸಿದ್ದರಿಂದ ಇಂಗ್ಲೆಂಡ್ ತೀವ್ರ ಎಚ್ಚರಿಕೆಯ ಬ್ಯಾಟಿಂಗಿಗೆ ಮುಂದಾಯಿತು. ಈಗಾಗಲೇ 3-0 ಅಂತರದಿಂದ ಸರಣಿ ಕಳೆದುಕೊಂಡಿರುವ ಇಂಗ್ಲೆಂಡಿಗೆ ಟಾಸ್ ಲಾಭವೆತ್ತಲು ಸಾಧ್ಯವಾಗಲಿಲ್ಲ. ಆರಂಭ ಕಾರ ಸ್ಟೋನ್‌ಮ್ಯಾನ್ (24) ಸ್ಕೋರ್ 28 ರನ್ ಆಗಿದ್ದಾಗ ಕಮಿನ್ಸ್‌ಗೆ ವಿಕೆಟ್ ಒಪ್ಪಿಸಿದರು. ಬಳಿಕ ಅಲಸ್ಟೇರ್ ಕುಕ್ ಮತ್ತು ವನ್‌ಡೌನ್ ಬ್ಯಾಟ್ಸ್‌ಮನ್ ಜೇಮ್ಸ್ ವಿನ್ಸ್ 60 ರನ್ ಜತೆಯಾಟದ ಮೂಲಕ ಗಮನ ಸೆಳೆದರು. ವಿನ್ಸ್ ಗಳಿಕೆ 25 ರನ್.
ಕುಕ್ ಸತತ 150 ಟೆಸ್ಟ್: ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಬಾರಿಸಿ ಮೆರೆದಿದ್ದ ಕುಕ್ 33ನೇ ಓವರ್ ತನಕ ಕ್ರೀಸ್ ಆಕ್ರಮಿಸಿಕೊಂಡರೂ ಗಳಿಸಿದ್ದು 39 ರನ್ ಮಾತ್ರ. ಇದಕ್ಕಾಗಿ 104 ಎಸೆತ ಎದು ರಿಸಿದರು. ಹೊಡೆದದ್ದು 3 ಬೌಂಡರಿ. ಇದು ಅಲಸ್ಟೇರ್ ಕುಕ್ ಅಡುತ್ತಿರುವ ಸತತ 150ನೇ ಟೆಸ್ಟ್ ಪಂದ್ಯವೆಂಬುದು ವಿಶೇಷ. ಕುಕ್ ಟೆಸ್ಟ್ ಇತಿಹಾಸದಲ್ಲಿ ಸತತ 150 ಟೆಸ್ಟ್ ಆಡಿದ ಕೇವಲ 2ನೇ ಕ್ರಿಕೆಟಿಗ. ಸತತ 153 ಟೆಸ್ಟ್ ಆಡಿದ ಆಸ್ಟ್ರೇಲಿಯದ ಅಲನ್ ಬೋರ್ಡರ್ ವಿಶ್ವದಾಖಲೆ ಹೊಂದಿದ್ದಾರೆ.
ಕುಕ್ ವಿಕೆಟ್ ಬಿದ್ದಾಗ ಇಂಗ್ಲೆಂಡ್ 95 ರನ್ ಮಾಡಿತ್ತು. ಈ ಹಂತದಲ್ಲಿ ಜತೆಗೂಡಿದ ರೂಟ್ ಮತ್ತು ಮಾಲನ್ 4ನೇ ವಿಕೆಟಿಗೆ 133 ರನ್ ಪೇರಿಸಿ ಆಸೀಸ್ ಮೇಲುಗೈಗೆ ತಡೆಯೊಡ್ಡಿದರು. ಶತಕದತ್ತ ಸಾಗುತ್ತಿದ್ದ ರೂಟ್ 228ರ ಮೊತ್ತದಲ್ಲಿ ಸ್ಟಾರ್ಕ್ ಮೋಡಿಗೆ ಸಿಲುಕಿದರು. ಅನಂತರ ಕ್ರೀಸ್ ಇಳಿದ ಬೇರ್‌ಸ್ಟೊ ಕೇವಲ 5 ರನ್ ಮಾಡಿ ಔಟಾದೊಡನೆಯೇ ದಿನದಾಟವನ್ನು ಕೊನೆ ಗೊಳಿಸಲಾಯಿತು.
ರೂಟ್ 141 ಎಸೆತ ಎದುರಿಸಿ 83 ರನ್ ಹೊಡೆದರು (8 ಬೌಂಡರಿ). ಮಾಲನ್ 55 ರನ್ ಮಾಡಿ ಬ್ಯಾಟಿಂಗ್ ಕಾಯ್ದುಕೊಂಡಿ ದ್ದಾರೆ (160 ಎಸೆತ, 8 ಬೌಂಡರಿ).
ಸಂಕ್ಷಿಪ್ತ ಸ್ಕೋರ್: ಇಂಗ್ಲೆಂಡ್-5 ವಿಕೆಟಿಗೆ 233 (ರೂಟ್ 83, ಮಾಲನ್ 55, ಕುಕ್ 39, ವಿನ್ಸ್ 25, ಸ್ಟೋನ್‌ಮ್ಯಾನ್ 24, ಕಮಿನ್ಸ್ 44ಕ್ಕೆ 2, ಹ್ಯಾಝಲ್‌ವುಡ್ 47ಕ್ಕೆ 2, ಸ್ಟಾರ್ಕ್ 63ಕ್ಕೆ 1).