Advertisement
ವಿಶ್ವದ ಗರಿಷ್ಠ 20 ಗ್ರ್ಯಾನ್ ಸ್ಲಾಂಗಳನ್ನು ಗೆದ್ದು ದಾಖಲೆ ಬರೆದಿರುವ ಸ್ವಿರ್ಜಲೆಂಡ್‌ನ ರೋಜರ್ ಫೆಡರರ್ ಮೊನ್ನೆ ನ್ಯೂಯಾರ್ಕ್‌ನಲ್ಲಿ ನಡೆದಿರುವ ಯು.ಎಸ್.ಓಪನ್‌ನಲ್ಲಿ ಪಕ್ಕಾ ಅನಾಮಿಕ ಆಸ್ಟ್ರೇಲಿಯಾದ 55ನೇ ಕ್ರಮಾಂಕದ ಮಿಲ್‌ವುನ್ ಕೈಯಲ್ಲಿ ಪರಾಜಿತರಾಗಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದ್ದಾರೆ.
ನಿಜ, ರೋಜರ್ ಅಮೆರಿಕನ್ ಹಾರ್ಡ್ ಕೋರ್ಟ್ ಸ್ಲಾಂನಲ್ಲಿ ತೋರಿದ ಎರಡನೇ ಅತ್ಯಂತ ಕಳಪೆ ಪ್ರದರ್ಶನ ಇದು. ಇಲ್ಲಿ ಐದು ಬಾರಿ ಚಾಂಪಿಯನ್ ಆಗಿರುವ ರೋಜರ್ 2001ರಲ್ಲಿ ಅಮೆರಿಕದ ಆ್ಯಂಡ್ರಿ ಅಗ್ಗಾಸ್ಸಿ ಎದುರು ಇದೇ ಹಂತದಲ್ಲಿ ಇಂತದ್ದೇ ಆಟ ಆಡಿದ್ದರು. ಅವತ್ತು ಕೊನೆಪಕ್ಷ ಎದುರಿಗಿದ್ದ ಆಟಗಾರನಾದರೂ ಬಲಾಡ್ಯನಾಗಿದ್ದ. ಮಿಲ್‌ವುನ್ ಎದುರಿನ ಹೀನಾಯ ಸೋಲು ಮರೆಯಬಹುದಾದ ಒಂದು ಅಪಘಾತ ಎಂದುಕೊಳ್ಳೋಣ ಎಂದರೂ ಫೆಡರರ್‌ರ 37ರ ವಯಸ್ಸು ನೆನಪಾಗುತ್ತದೆ. 2008ರಿಂದ ಇಲ್ಲಿ ಫೆಡರರ್ ಸ್ಲಾಂ ಗೆದ್ದಿಲ್ಲ ಎಂಬುದು ಕೇಳುತ್ತದೆ. ಆರೋಗ್ಯವಾಗಿರುವ ಮನೆಯ ಹಿರಿಯ ಜೀವ ಇದ್ದಕ್ಕಿದ್ದಂತೆ ಸ್ನಾನಗೃಹದಲ್ಲಿ ಬಿದ್ದಿದ್ದೇ ನೆಪವಾಗಿ ಹಾಸಿಗೆ ಹಿಡಿದು ಬಾಳು ಮುಗಿಸುತ್ತದೆ. ಈ ಸೋಲು ಫೆಡರರ್‌ರ ಆತ್ಮವಿಶ್ವಾಸವನ್ನು ಸೋಲಿಸಿ ಅವರ ನಿವೃತ್ತಿಯನ್ನು ಹತ್ತಿರಕ್ಕೆ ತರುತ್ತದೆಯೇ? ವರ್ಷದಲ್ಲಿ ಚಿನ್ನದ ಬೆಳೆ
ತೀರಾ ಗಡಿಬಿಡಿ ಮಾಡುವ ಕಾಲದಲ್ಲಿ ನಾವಿದ್ದೇವೆ. ತೀರ್ಪು ಬರೆಯುವ ಅವಸರ ನಮಗೆ. ಈ ವರ್ಷ ಅತ್ಯುತ್ತಮ ಪ್ರದರ್ಶನ ನೀಡಿದ ಕೆಲವರಲ್ಲಿ ರೋಜರ್ ಒಬ್ಬರು. ಮೊಣಕಾಲು ಗಾಯದಿಂದ ಚೇತರಿಸಿಕೊಂಡವರು ಈ ಋತುವಿನಲ್ಲಿ 33-5ರ ಗೆಲುವು ಸೋಲಿನ ದಾಖಲೆ ಇಟ್ಟುಕೊಂಡಿದ್ದಾರೆ. ವಿಂಬಲ್ಡನ್‌ನ ಕ್ವಾರ್ಟರ್‌ಫೈನಲ್, ಯುಎಸ್ ತಯಾರಿ ಟೂರ್ನಿ ಸಿನ್ಸಿನೆಟ್ಟಿಯ ಫೈನಲ್ ಹೊರತಾಗಿ ರೋಜರ್ ಮೂರು ಪ್ರಶಸ್ತಿ ಪಡೆದಿದ್ದಾರೆ. ಆಸ್ಟ್ರೇಲಿಯನ್ ಓಪನ್ ಗೆದ್ದಿದ್ದು ಮರೆಯಲಾದೀತೆ? ಅದು ಬಿಡಿ, ಸನ್‌ಶೈನ್ ಡಬಲ್ ಎಂಬ ಖ್ಯಾತಿಯ ಇಂಡಿಯಾನಾ ವೆಲ್ಸ್, ಮಿಯಾಮಿಯ ಎಟಿಪಿ ಗೆದ್ದಿದ್ದು ಮತ್ತು ಕೆಲ ವಾರಗಳ ಕಾಲ ವಿಶ್ವದ ನಂಬರ್ ಒನ್ ಸ್ಥಾನ ಅಲಂಕರಿಸಿದ್ದು ಪ್ರಚಂಡ ಸಾಧನೆ.
Related Articles
2018ರ ಟೆನಿಸ್ ಋತು ಕೊನೆಯ ಹಂತದಲ್ಲಿದೆ, ಫೆಡ್‌ರ ಟೆನಿಸ್ ಜೀವನವಲ್ಲ! ಫೆಡರರ್ ಲೇವರ್ ಕಪ್‌ನಲ್ಲಿ ಆಡಲಿದ್ದಾರೆ. ದೈಹಿಕವಾಗಿ ತಂಪು ದೇಶದಿಂದ ಬಂದ ಫೆಡರರ್‌ಗೆ ಉಷ್ಣ ಕೂಡ ಎದುರಾಳಿಯಾಗುತ್ತಿದೆ. ಮೊನ್ನೆ ನ್ಯೂಯಾರ್ಕ್‌ನಲ್ಲಿ ಆಗಿದ್ದೂ ಅದೇ. ಬಹುಶಃ ಮೊದಲೆರಡು ಸೆಟ್ ಗೆದ್ದು ಬಿಟ್ಟಿದ್ದರೆ ಫಲಿತಾಂಶ ಬೇರೆಯಾಗಿರುತ್ತಿತ್ತು. ಆಗ ನಿವೃತ್ತಿಯ ಕೂಗು ಎಬ್ಬಿಸುವವರ ಬಾಯಿ ಕಟ್ಟುತ್ತಿತ್ತು. ಅಕ್ಷರಶಃ ಫೆಡರರ್ ಹೇಳಿದ್ದೂ ಇದನ್ನೇ.
Advertisement