ಸಾಗರ: 2019 ರಲ್ಲಿ ತಾಲೂಕಿನ ಅಂಬಾರಗೋಡ್ಲು ಸಮೀಪದ ಕಿಪ್ಪಡಿ ಗ್ರಾಮದ ಕೇವಲ ಮೂರು ವರ್ಷ ಒಂಬತ್ತು ತಿಂಗಳ ಪೋರಿ ಮಿಥಿಲಾ ಗಿರೀಶ್ ಹೊಳೆಬಾಗಿಲಿನ ಸಿಗಂದೂರು ದಡದಿಂದ ಶರಾವತಿ ಹಿನ್ನೀರಿನಲ್ಲಿ 2.9 ಕಿಮೀ ದೂರವನ್ನು 1 ಘಂಟೆ 55 ನಿಮಿಷಗಳಲ್ಲಿ ಕ್ರಮಿಸಿದ ಸಾಧನೆ ಇದೀಗ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಅಧಿಕೃತವಾಗಿ ದಾಖಲಾಗಿದೆ. ಬ್ಯಾಕ್‌ಸ್ಟ್ರೋಕ್‌ನಲ್ಲಿ ಅತಿ ಹೆಚ್ಚಿನ ದೂರವನ್ನು ಕ್ರಮಿಸಿದ ಅತಿ ಕಿರಿಯ ಸಾಧಕಿ ಎಂಬ ಗೌರವಕ್ಕೆ ಮಿಥಿಲಾ ಭಾಜನಳಾಗಿದ್ದಾಳೆ.
2019 ರ ಏಪ್ರಿಲ್ 21 ರಂದು ಮೂರು ವರ್ಷ, ಒಂಬತ್ತು ತಿಂಗಳು ಹಾಗೂ ಎರಡು ದಿನ ವಯಸ್ಸಿನ ಪೋರಿ ಬೆಳಿಗ್ಗೆ 7.55 ಕ್ಕೆ ಶರಾವತಿ ಹಿನ್ನೀರಿನ ಕಳಸವಳ್ಳಿಯಿಂದ ಸಿಗಂದೂರಿಗೆ ಬ್ಯಾಕ್ ಸ್ಟ್ರೋಕ್ ಈಜಿನ ಮೂಲಕ 1 ಘಂಟೆ 55 ನಿಮಿಷಗಳಲ್ಲಿ ಕ್ರಮಿಸಿದ ಸಾಧನೆ ಮಾಡಿ ಅಚ್ಚರಿ ಮೂಡಿಸಿದ್ದರು. ಅವತ್ತು ಹರೀಶ್ ದಾಮೋದರ ನವಾಥೆ ಅವರ ಜಲಯೋಗ ಸಂಸ್ಥೆಯ 26 ಈಜುಗಾರರ ತಂಡದ ಜೊತೆ ಈಜಿದ ಮಿಥಿಲಾ ಸಿಗಂದೂರಿನಲ್ಲಿ ಹೆರಿಟೇಜ್ ಹೋಮ್‌ನ ಹಕ್ಕಲಳ್ಳಿ ಎನ್.ಸಿ.ಗಂಗಾಧರ್ ಅವರ ಬೆಂಬಲದೊಂದಿಗೆ ಮಿಥಿಲಾ ರಕ್ಷಕರಾದ ಪ್ರಸನ್ನ, ವಿನಯ, ಆದಿತ್ಯ, ಕೌಶಿಕ, ಸುನೀಲ, ಕಿರಣ ಅವರ ಸಮ್ಮುಖದಲ್ಲಿ ಈಜಿದ್ದರು.
ಎರಡೂವರೆ ವರ್ಷದಲ್ಲಿಯೇ ಈಜು ಕಲಿತ ಮಿಥಿಲಾಳಿಗೆ ಆವಿನಹಳ್ಳಿ ಹೋಬಳಿ ಕೋಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನಿವಾಸಿ ತಂದೆ ಗಿರೀಶ್, ತಾಯಿ ವಿನುತಾ ಮತ್ತು ಕುಟುಂಬದವರು, ಗ್ರಾಮಸ್ಥರು ಅವಳ ಜತೆಯಲ್ಲಿಯೆ ಕಿಪ್ಪಡಿಯ ಹಿನ್ನೀರಿನಲ್ಲಿ ಈಜುತ್ತಾ ತರಬೇತಿ ನೀಡಿದರು. ಜಲಯೋಗ ಸಂಸ್ಥೆ ಆಕೆಗೆ ನೀಡಿದ ತರಬೇತಿ ಈಕೆಯ ಸಾಹಸದಲ್ಲಿ ಪ್ರತಿಫಲಿಸಿದೆ. ಮಿಥಿಲಾ 2018 ರಲ್ಲಿ ಕೇವಲ 2 ವರ್ಷ 11 ತಿಂಗಳ ಪೋರಿಯಾಗಿದ್ದಾಗಲೇ ಇದೇ ಹಿನ್ನೀರಿನಲ್ಲಿ ಈಜಿ ಗಮನ ಸೆಳೆದಿದ್ದಳು. 2019 ರ ಮಾರ್ಚ್ 24 ರಂದು ಶರಾವತಿ ಹಿನ್ನೀರಿನ ಹಸಿರುಮಕ್ಕಿಯಲ್ಲಿ ಒಂದು ಕಿಮೀ ದೂರವನ್ನು ಒಂದು ಘಂಟೆಯಲ್ಲಿ ಪೂರೈಸಿದ ದಾಖಲೆಯನ್ನು ಮಾಡಿ ಗಮನ ಸೆಳೆದಿದ್ದಳು.
ಸಿಗಂದೂರು ದಡದಿಂದ ಶರಾವತಿ ಹಿನ್ನೀರಿನಲ್ಲಿ ಬ್ಯಾಕ್‌ಸ್ಟ್ರೋಕ್‌ನಲ್ಲಿ ಈಜುವುದಷ್ಟೇ ಅಲ್ಲ, ಮಿಥಿಲಾ ಮಧ್ಯ ನೀರಿನಲ್ಲಿ ಪದ್ಮಾಸನ ಹಾಕಿ ಕುಳಿತುಕೊಳ್ಳಬಲ್ಲಳು. ಜತೆಯಲ್ಲಿ ವಜ್ರಾಸನ, ನೀರಿನಲ್ಲಿ ತೇಲುತ್ತಲೇ ಶವಾಸನದ ಭಂಗಿ ಪ್ರದರ್ಶಿಸುವುದಕ್ಕೂ ಸೈ. 2019 ರಲ್ಲಿ ಒಂದು ಘಂಟೆಯ ಈಜಿನ ನಂತರವೂ ಆಕೆ ಉಲ್ಲಾಸಿತಳಾಗಿಯೇ ಇದ್ದುದು ಅವಳನ್ನು ಹಿಂಬಾಲಿಸಿಕೊಂಡು ಬಂದಿದ್ದ ಜಲಯೋಗ ಸಂಸ್ಥೆಯ ಮುಖ್ಯಸ್ಥ ಹರೀಶ್ ನವಾಥೆ ಹಾಗೂ ಅವರ 20 ಜನರ ತಂಡವನ್ನು ಅಚ್ಚರಿಗೆ ತಳ್ಳಿತ್ತು. ದಡವನ್ನು ಯಶಸ್ವಿಯಾಗಿ ಮುಟ್ಟಿದಾಗ ಸಹ ಈಜುಗಾರರು ಬಣ್ಣ ಬಣ್ಣದ ಬಲೂನುಗಳನ್ನು ಆಕೆಗೆ ಕೊಟ್ಟು ಸ್ವಾಗತಿಸಿದ್ದರು.
ಶನಿವಾರ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸಂಸ್ಥೆ ಅಧಿಕಾರಿಗಳು ತಾಲೂಕಿನ ಕಿಪ್ಪಡಿಗೆ ಆಗಮಿಸಿ ಬಾಲೆ ಮಿಥಿಲಾ ಗಿರೀಶ್‌ಗೆ ದಾಖಲೆಯ ಅಧಿಕೃತ ಪ್ರಮಾಣ ಪತ್ರ ಕೊಟ್ಟು ಅಭಿನಂದಿಸಿದರು. ಈ ಸಂದರ್ಭದಲ್ಲಿ ಆಕೆಯ ಈಜು ಗುರು ಹರೀಶ್ ನವಾಥೆ, ಗಂಗಾಧರ ಗೌಡರು, ಪೋಷಕರಾದ ಗಿರೀಶ್ ದಂಪತಿಗಳಿದ್ದರು.